ವಿಶೇಷ

300 ಬಡ ಮಕ್ಕಳಿಗಾಗಿ ದೆಹಲಿ ಮೆಟ್ರೋ ಬ್ರಿಡ್ಜ್ ಕೆಳಗೆ ಶಾಲೆ ನಡೆಸುತ್ತಿದ್ದಾರೆ ಕಿರಾಣಿ ಅಂಗಡಿ ಮಾಲೀಕ!

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿಯ ಬಡ ಜನರ ಜೀವನ ಬದಲಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ಸಣ್ಣ ಕಿರಾಣಿ ಅಂಗಡಿಯ ಮಾಲೀಕರೊಬ್ಬರು 300 ಬಡ ಮಕ್ಕಳಿಗಾಗಿ ಮೆಟ್ರೋ ಬ್ರಿಡ್ಜ್ ಕೆಳಗೆ ಕಳೆದ 8 ವರ್ಷಗಳಿಂದ ಸರ್ಕಾರದ ಅಥವಾ ಯಾವುದೇ ಎನ್ ಜಿಒ ಸಹಾಯವಿಲ್ಲದೆ ಶಾಲೆ ನಡೆಸುತ್ತಿದ್ದಾರೆ.

ಕಳೆದ 13 ವರ್ಷಗಳಿಂದ ರಾಜೇಶ್ ಕುಮಾರ್ ಶರ್ಮಾ ಅವರು ನಡೆಸುತ್ತಿರುವ ಈ ಅದ್ಭುತ ಶಾಲೆಗೆ ಯಾವುದೇ ಹೆಸರಿಲ್ಲ. ಇದಕ್ಕೆ ಯಾವುದೇ ರೀತಿಯ ಕಟ್ಟಡವಿಲ್ಲ. ಆದರೂ ಇಲ್ಲಿ ದಿನ 300 ಮಕ್ಕಳು ಬರ್ತಾರೆ. ದೆಹಲಿಯ ಯಮುನಾ ಬ್ಯಾಂಕ್ ಮೆಟ್ರೋ ಬ್ರಿಡ್ಜ್ ಕೆಳಗಡೆ ನಡೆಯುತ್ತಿರುವ ಈ ಶಾಲೆಯಲ್ಲಿ ಪ್ರತಿ ದಿನ ಎರಡು ಶಿಫ್ಟ್​​ನಲ್ಲಿ, ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಒಂದು ಶಿಫ್ಟ್ ನಲ್ಲಿ 120 ಮಕ್ಕಳಿಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 4.30ರ ವರೆಗೆ 180 ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಇದು ಸಂಪೂರ್ಣ ಉಚಿತ ಶಿಕ್ಷಣ.

ಉತ್ತರ ಪ್ರದೇಶ ಮೂಲದ ಹಾಗೂ ದೆಹಲಿಯ ಲಕ್ಷ್ಮಿ ನಗರ ನಿವಾಸಿ ರಾಜೇಶ್ ಕುಮಾರ್ ಅವರು 2006ರಲ್ಲಿ ಒಂದು ಬಯಲು ಪ್ರದೇಶದಲ್ಲಿ ಬಡ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರು. ಆರಂಭದಲ್ಲಿ ಇಬ್ಬರು ಮಕ್ಕಳು ಮಾತ್ರ ಬಂದರು. ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಗಿ ಈಗ ಬರೋಬ್ಬರಿ 300 ಮಕ್ಕಳಾಗಿದ್ದಾರೆ. 

49 ವರ್ಷದ ರಾಜೇಶ್ ಕುಮಾರ್ ಶರ್ಮಾ ಅವರು ಕುಟುಂಬ ನಿರ್ವಹಣೆಗಾಗಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ವ್ಯಾಪಾರಾದ ನಡುವೆಯೂ ಬಿಡುವು ಮಾಡಿಕೊಂಡು, ಸ್ಲಂ ನಿವಾಸಿಗಳ ಬಡ ಮಕ್ಕಳು, ರಿಕ್ಷಾ ಚಾಲಕರ ಮಕ್ಕಳು ಹಾಗೂ ಭಿಕ್ಷುಕರ ಮಕ್ಕಳು ಸೇರಿದಂತೆ ನೂರಾರು ಬಡ ಮಕ್ಕಳಿಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ರಾಜೇಶ್ ಕುಮಾರ್ ಅವರು ಯಾರ ಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಿಂದಲೇ ಈ ಶಾಲೆಯನ್ನು ನಡೆಸುತ್ತಿದ್ದು, ಇಲ್ಲಿ ಮೆಟ್ರೋ ಬ್ರಿಡ್ಜ್ ಕೆಳಗಡೆ ಇರುವ ಗೋಡೆ ಮೇಲೆ ಐದು ಕಪ್ಪು ಹಲಗೆ, ಚಾಕ್ ಪೀಸ್ ಡಸ್ಟರ್, ಪೆನ್ನು ಮತ್ತು ಪೆನ್ಸಿಲ್ ಗಳಿಂದ ನಾಲ್ಕು ವರ್ಷದಿಂದ 14 ವರ್ಷದ ಮಕ್ಕಳಿಗೆ ಪಾಠ ಮಾಡುತ್ತಾರೆ.

ರಾಜೇಶ್ ಕುಮಾರ್ ಅವರು ಬಡತನದಿಂದಾಗಿ ತಮ್ಮ ಬಿಎಸ್ಪಿ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದರೆ ತಮ್ಮಂತೆ ಬೇರೆ ಯಾರೂ ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಾರದಲ್ಲಿ 50 ಗಂಟೆ ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ.

ಇಲ್ಲಿ ಕಲಿಯುತ್ತಿರುವ ಹಲವು ಮಕ್ಕಳನ್ನು ರಾಜೇಶ್ ಕುಮಾರ್ ಅವರು ಈಗಾಗಲೇ ದೆಹಲಿಯ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಇದುವರೆಗೆ ರಾಜೇಶ್ ಅವರ ಶಾಲೆಯಲ್ಲಿ ಓದಿದ ಮಕ್ಕಳು ಪಿಯುಸಿ ಮೊದಲ ಮತ್ತು ದ್ವಿತೀ ವರ್ಷ ಹಾಗೂ ಪದವಿ ಕಾಲೇಜ್ ಮೆಟ್ಟಿಲು ಸಹ ಹತ್ತಿದ್ದಾರೆ.

ರಾಜೇಶ್ ಕುಮಾರ್ ಅವರ ಸೇವೆಯನ್ನು ಮೆಚ್ಚಿ, ಲಕ್ಷ್ಮಿ ಚಂದ್ರ, ಶ್ಯಾಮ್ ಮೆಹ್ತೊ, ರೇಖಾ, ಸುನಿತಾ, ಮನಿಶ್, ಚೇತನ್ ಶರ್ಮಾ ಹಾಗೂ ಸರ್ವೇಶ್ ಎಂಬುವವರು ಸಾಥ್ ನೀಡುತ್ತಿದ್ದು, ಬಡ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ.

SCROLL FOR NEXT