ವಿಶೇಷ

ಒಂದೇ ಕಿಡ್ನಿಯ ರಹಸ್ಯ ಬಹಿರಂಗಗೊಳಿಸಿದ ಅಥ್ಲೀಟ್ ಅಂಜು ಬಾಬ್ಬಿ: ಕ್ರೀಡಾಪಟುವಿನ ಯಶೋಗಾಥೆಗೆ ಹ್ಯಾಟ್ಸ್ಆಫ್! 

Srinivas Rao BV

ತಮಗಿರುವ ನಿರ್ಬಂಧ, ಕೊರತೆಗಳನ್ನೂ ಮೀರಿ ಅದೆಷ್ಟೋ ಮಂದಿ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಕೆಲವರ ಕಷ್ಟ-ಕಾರ್ಪಣ್ಯಗಳ ಕಥೆ ಆ ಕ್ಷಣದಲ್ಲೇ ಜಗತ್ತಿಗೆ ತಿಳಿದರೆ ಇನ್ನೂ ಕೆಲವರದ್ದು ಸಮಯ ಕಳೆದಂತೆ ಬಹಿರಂಗವಾಗುತ್ತದೆ. ಅಂಥಹದ್ದೇ ಕಥೆ ಅಥ್ಲೀಟ್ ಅಂಜು ಬಾಬ್ಬಿ ಅವರ ಜೀವನದಲ್ಲೂ ಇದೆ. 

ಪ್ಯಾರಿಸ್ ನಲ್ಲಿ 2003 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದ ಅಂಜು ಬಾಬ್ಬಿ ಜಾರ್ಜ್, ತಮಗೆ ಒಂದೇ ಕಿಡ್ನಿ ಇದ್ದು, ಅಂತಹ ಕೊರತೆ,  ಮಿತಿಗಳ ನಡುವೆಯೂ ತಾವು ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಿದ್ದಾಗಿ ಮೊದಲ ಬಾರಿಗೆ ಹೇಳಿದ್ದಾರೆ.

2005 ರಲ್ಲಿ ಮೊನಾಕೋದಲ್ಲಿ ನಡೆದ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ನ ಫೈನಲ್ಸ್ ನಲ್ಲಿ ಚಿನ್ನದ ಪದಕ ಪಡೆದಿರುವ ಅಂಜು ಬಾಬ್ಬಿ, ಕಿಡ್ನಿಯ ವಿಷಯದಲ್ಲಿ ಸವಾಲು ಹೊಂದಿರುವುದಷ್ಟೇ ಅಲ್ಲದೇ ಸಣ್ಣ ಪ್ರಮಾಣದ ನೋವು ನಿವಾರಕ ತೆಗೆದುಕೊಂಡರೂ ಅಲರ್ಜಿ ಸಮಸ್ಯೆ ಎದುರಾಗಲಿದೆ, ಕಾಲಿಗೆ ಸಂಬಂಧಿಸಿದ ಸಮಸ್ಯೆ ಇದೆ, ಇನ್ನೂ ಅನೇಕ ಮಿತಿ- ಸವಾಲುಗಳ ನಡುವೆಯೂ ತಾವು ಕ್ರೀಡಾ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ್ದಾಗಿ ಅಂಜು ಬಾಬ್ಬಿ ಟ್ವೀಟ್ ಮಾಡಿ ಮೊದಲ ಬಾರಿಗೆ ಇವುಗಳನ್ನು ಬಹಿರಂಗಪಡಿಸಿದ್ದಾರೆ.

ಅಂಜು ಬಾಬ್ಬಿಗೆ ಪತಿ ರಾಬರ್ಟ್ ಬಾಬ್ಬಿ ಜಾರ್ಜ್ ಅವರೇ ಕೋಚ್ ಆಗಿದ್ದಾರೆ. ಅಂಜು ಬಾಬ್ಬಿಯ ಟ್ವೀಟ್ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅವರ ಗಮನಸೆಳೆದಿದ್ದು, "ಅಂಜು ಬಾಬ್ಬಿ ತಮ್ಮ ಪರಿಶ್ರಮ, ಕಷ್ಟಗಳ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯರು ನೀವಾಗಿದ್ದು, ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ" ಎಂದು ಹೇಳಿದ್ದಾರೆ. 
 

SCROLL FOR NEXT