ವಿಶೇಷ

ಕೇವಲ 58 ನಿಮಿಷಗಳಲ್ಲಿ 46 ತಿನಿಸುಗಳನ್ನು ತಯಾರಿಸಿದ ತಮಿಳು ನಾಡಿನ ಬಾಲಕಿ: ಯುನೆಸ್ಕೊ ಬುಕ್ ಆಫ್ ರೆಕಾರ್ಡ್ ಸೇರ್ಪಡೆ!

Sumana Upadhyaya

ಚೆನ್ನೈ: ಕೇವಲ 58 ನಿಮಿಷಗಳಲ್ಲಿ 46 ತಿನಿಸುಗಳನ್ನು ತಯಾರಿಸಿ ತಮಿಳು ನಾಡಿನ ಬಾಲಕಿಯೊಬ್ಬಳು ಯುನೆಸ್ಕೊ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. 

ಎಸ್ ಎನ್ ಲಕ್ಷ್ಮಿ ಸಾಯಿ ಶ್ರೀ ಈ ದಾಖಲೆ ನಿರ್ಮಿಸಿರುವ ಹುಡುಗಿ. ಅಡುಗೆ ಮಾಡುವುದರಲ್ಲಿ ತೀವ್ರ ಆಸಕ್ತಿ ಹೊಂದಿರುವ ಲಕ್ಷ್ಮಿ ಸಾಯಿ ಶ್ರೀಗೆ ಆಕೆಯ ತಾಯಿಯೇ ತರಬೇತುದಾರರಂತೆ. ತಾಯಿಯಿಂದ ಅಡುಗೆ ಮಾಡುವುದನ್ನು ಕಲಿತೆ. ಈ ಸಾಧನೆ ಮಾಡಿರುವ ಬಗ್ಗೆ ನನಗೆ ಹೆಮ್ಮೆಯಿದೆ ಎನ್ನುತ್ತಾಳೆ ಲಕ್ಷ್ಮಿ ಸಾಯಿ.

ಲಕ್ಷ್ಮಿಯ ತಾಯಿ ಕಲೈಮಗಳ್, ನಾನು ತಮಿಳು ನಾಡಿನ ಸಾಂಪ್ರದಾಯಿಕ ತಿನಿಸುಗಳನ್ನು ಮಾಡುತ್ತೇನೆ. ಲಾಕ್ ಡೌನ್ ಸಮಯದಲ್ಲಿ ಮಗಳು ಅಡುಗೆ ಮನೆಯಲ್ಲಿಯೇ ನನ್ನ ಜೊತೆ ಹೆಚ್ಚು ಕಳೆಯುತ್ತಿದ್ದಳು. ಆಕೆಯ ಆಸಕ್ತಿ ಬಗ್ಗೆ ನನ್ನ ಪತಿಯಲ್ಲಿ ಚರ್ಚೆ ನಡೆಸಿದಾಗ ವಿಶ್ವ ದಾಖಲೆ ನಿರ್ಮಿಸಲು ಆಕೆ ಪ್ರಯತ್ನಿಸಬೇಕು ಎಂದು ಪತಿ ಹೇಳಿದರು. ಹೀಗೆ ನಮಗೆ ಆಲೋಚನೆ ಬಂದು ಈ ದಾಖಲೆ ನಿರ್ಮಿಸಲು ಸಾಧ್ಯವಾಯಿತು ಎನ್ನುತ್ತಾರೆ. ತಮ್ಮ ಮಗಳಲ್ಲಿ ಅಡುಗೆ ಮಾಡುವ ವಿಶಿಷ್ಟ ಕಲೆ ಇದೆ ಎಂದು ಗುರುತಿಸಿದ ಲಕ್ಷ್ಮಿಯ ತಂದೆ ಇದರಲ್ಲಿ ವಿಶೇಷ ಸಾಧನೆ ಮಾಡಲು, ದಾಖಲೆ ನಿರ್ಮಿಸಲು ಪ್ರೋತ್ಸಾಹಿಸಿದರಂತೆ. 

ಲಕ್ಷ್ಮಿಯ ತಂದೆ ಗೂಗಲ್ ನಲ್ಲಿ ಹುಡುಕಿದಾಗ ಕೇರಳದ 10 ವರ್ಷದ ಬಾಲಕಿ ಸಾನ್ವಿ ಸುಮಾರು 30 ತಿನಿಸುಗಳನ್ನು ತಯಾರಿಸಿದ್ದು ಕಂಡುಬಂತು. ಆ ದಾಖಲೆಯನ್ನು ತಮ್ಮ ಮಗಳು ಮುರಿಯಬೇಕು ಎಂದು ಬಯಸಿ ಅದಕ್ಕೆ ತಕ್ಕಂತೆ ತಮ್ಮ ಮಗಳಿಗೆ ತರಬೇತಿ, ಪ್ರೋತ್ಸಾಹ ನೀಡಲಾರಂಭಿಸಿದರು. 

ಲಾಕ್ ಡೌನ್ ಸಮಯ ದಂಪತಿಗೆ ಮಗಳಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಸಹಾಯವಾಯಿತು. 

SCROLL FOR NEXT