ವಿಶೇಷ

ಶಸ್ತ್ರಚಿಕಿತ್ಸೆಗೆ ಕೇಳಿದ್ದು 2 ಲಕ್ಷ, ಸಿಕ್ಕಿದ್ದು 50 ಲಕ್ಷ: ಕೇರಳದ ತಾಯಿ-ಮಗಳಿಗೆ ಸಿಕ್ಕಿತು ನೆರವಿನ ಮಹಾಪೂರ!

Sumana Upadhyaya

ಕೊಚ್ಚಿ: ಕೊರೋನಾ ಸಂಕಷ್ಟದ ನಡುವೆ ತನ್ನ ತಾಯಿಗೆ ಯಕೃತ್ ಕಸಿ(ಪಿತ್ತಜನಕಾಂಗ ಕಸಿ)ಗೆ ಹಣದ ಅವಶ್ಯಕತೆ ಇದೆ ಎಂದು ಮಗಳು ಆನ್ ಲೈನ್ ನಲ್ಲಿ ಮಾಡಿಕೊಂಡ ಮನವಿಗೆ ಹತ್ತಾರು ಮಂದಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೇರಳದ ಕೊಚ್ಚಿ ಬಳಿಯ ಕಣ್ಣೂರಿನ ಮೂಲದ 46 ವರ್ಷದ ರಾಧಾ ಕಳೆದ ಗುರುವಾರ ಕೊಚ್ಚಿಯ ಅಮೃತಾ ವೈದ್ಯಕೀ ಯ ವಿಜ್ಞಾನ ಸಂಸ್ಥೆಯಲ್ಲಿ ಯಕೃತ್ತಿನ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯಕೀಯ ವೆಚ್ಚ 2 ಲಕ್ಷ ರೂಪಾಯಿಯಾಗಿತ್ತು. ತಮ್ಮ ಬಳಿ ಹಣವಿಲ್ಲದಾಗ ತಾಯಿಯ ಚಿಕಿತ್ಸೆಗೆ ಹಣ ಬೇಕೆಂದು ಮಗಳು ಆನ್ ಲೈನ್ ನಲ್ಲಿ ಮನವಿ ಮಾಡಿಕೊಂಡಳು. ಇದನ್ನು ಕಂಡ ಕೇರಳಿಗರು 5- ಲಕ್ಷಕ್ಕೂ ಹೆಚ್ಚು ಸಂಗ್ರಹಿಸಿ ನೀಡಿದ್ದಾರೆ. ಮಗಳು ತನ್ನ ಯಕೃತ್ತಿನ ಭಾಗವನ್ನು ತಾಯಿಗೆ ದಾನ ಮಾಡಿದ್ದಾಳೆ.

22 ವರ್ಷದ ಮಗಳು ವರ್ಷ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಮನವಿ ಕಳೆದ ಬುಧವಾರ ವೈರಲ್ ಆಗಿತ್ತು. ತಾಯಿಯ ಬ್ಯಾಂಕ್ ಅಕೌಂಟನ್ನು ನೀಡಿದ್ದಳು. ಮರುದಿನವೇ ಅಕೌಂಟಿಗೆ ಲಕ್ಷಗಟ್ಟಲೆ ಹಣ ಬಂದವು. 10 ದಿನಗಳ ಹಿಂದೆ ಕಣ್ಣೂರಿನಿಂದ ಕೊಚ್ಚಿಯ ಆಸ್ಪತ್ರೆಗೆ ಅನಾರೋಗ್ಯಪೀಡಿತ ತಾಯಿಯನ್ನು ಕರೆದುಕೊಂಡು ಬಂದ ವರ್ಷಳ ಕೈಯಲ್ಲಿ ಆಗ ಇದ್ದಿದ್ದು ಕೇವಲ 10 ಸಾವಿರ ರೂಪಾಯಿ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಯಕೃತ್ತಿನ ಸಮಸ್ಯೆಯಿದೆ, ಕಸಿ ಮಾಡಬೇಕು ಇಲ್ಲದಿದ್ದರೆ ತಾಯಿಯನ್ನು ಉಳಿಸುವುದು ಕಷ್ಟ, 3 ಲಕ್ಷ ರೂಪಾಯಿಯಾಗುತ್ತದೆ ಎಂದರು.

ವರ್ಷಳಿಗೆ ತಂದೆಯಿಲ್ಲ, ಸಹೋದರ, ಸಹೋದರಿಯರು ಕೂಡ ಇಲ್ಲ, ಹೇಗೋ ಅವರಿವರಲ್ಲಿ ಕೇಳಿ ಒಂದು ಲಕ್ಷ ರೂಪಾಯಿ ಸಂಗ್ರಹಿಸಿದಳು. ಬೇರೆ ದಾರಿ ಕಾಣದಿದ್ದಾಗ ತ್ರಿಶೂರ್ ಮೂಲದ ಸಾಮಾಜಿಕ ಕಾರ್ಯಕರ್ತ ಸಜಯ್ ಕೆಚೆರಿ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದಾಗ ಆನ್ ಲೈನ್ ನಲ್ಲಿ ಮನವಿ ಮಾಡಿ ಎಂದು ಅವರು ಸಲಹೆ ನೀಡಿದರಂತೆ.

ತಾಯಿ ಹೆಪಟೈಟಿಸ್‌ನಿಂದ ಬಳಲುತ್ತಿದ್ದರು ಅವರ ಯಕೃತ್ತಿನ ಸ್ಥಿತಿ ತೀವ್ರ ಹದಗೆಟ್ಟಿತು. ಕಳೆದ ಮೂರು ದಿನಗಳಿಂದ ಕೋಮಾದಲ್ಲಿದ್ದರು, ಶಸ್ತ್ರಚಿಕಿತ್ಸೆ ಮಾಡುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಇದೀಗ ಇಬ್ಬರ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿ ನಡೆಯಿತು ಎಂದು ವೈದ್ಯ ಡಾ ಸುಧೀಂದ್ರನ್ ಹೇಳುತ್ತಾರೆ.

ಮುಂದಿನ ಎರಡು ದಿನಗಳು ರೋಗಿಗೆ ನಿರ್ಣಾಯಕ ಎನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿ ಈ ರೀತಿಯ ಸಮಸ್ಯೆಗಳಲ್ಲಿ  ಶಸ್ತ್ರಚಿಕಿತ್ಸೆ ಆದ ನಂತರ ತೊಂದರೆಗಳು ಸಂಭವಿಸುವುದಿಲ್ಲ, ರೋಗಿ ಬೇಗನೆ ಚೇತರಿಸಿಕೊಳ್ಳುತ್ತಾರೆ. ಆದರೆ ರಾಧಾ ಅವರು ಕೋಮಾಕ್ಕೆ ಹೋದ ಕಾರಣ ಮುಂದಿನ ಎರಡು ದಿನಗಳು ನಿರ್ಣಾಯಕ. ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ ಎಂದು ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಡಾ ದಿನೇಶ್ ಬಾಲಕೃಷ್ಣನ್ ಹೇಳುತ್ತಾರೆ.

SCROLL FOR NEXT