ವಿಶೇಷ

ಕೊರೋನಾಗೆ ಚಿಂತೆ ಪಡುವ ಅಗತ್ಯವಿಲ್ಲ: ಸೋಂಕಿಗೆ ತುತ್ತಾಗಿ ಗುಣಮುಖರಾದ ವೈದ್ಯರ ಅನುಭವದ ಮಾತು!

Manjula VN

ಕಲಬುರಗಿ: ಕೊರೋನಾ ವೈರಸ್'ಗೆ ಚಿಂತೆ ಪಡುವ ಅಗತ್ಯವಿಲ್ಲ, ಎಚ್ಚರದಿಂದ ಇದ್ದರೆ ಸಾಕು ಎಂದು ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿರುವ ವೈದ್ಯರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಮಾರ್ಚ್ 10 ರಂದು ಮೃತಪಟ್ಟಿದ್ದ ಪೇಷನ್ ನಂ-06ರ ವ್ಯಕ್ತಿ ಸೌದಿಯಿಂದ ಫೆ.28 ರಂದು ಕಲಬುರಗಿಗೆ ಬಂದಿದ್ದರು. ಮಾರ್ಚ್ 2 ರಂದು ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದೆ. ಮಾರ್ಚ್ 6 ರಂದು ಸ್ಥಿತಿ ಗಂಭೀರವಾದಾಗ ಮತ್ತೆ ಚಿಕಿತ್ಸೆ ನೀಡಿದ್ದೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ಆತನ ಕುಟುಂಬ ಸದಸ್ಯರಿಗೆ ಸಲಹೆ ನೀಡಿತ್ತೆ. ಮಾರ್ಚ್ 10 ರಂದು ವ್ಯಕ್ತಿ ಸಾವನ್ನಪ್ಪಿದ್ದು, ಸಾಕಷ್ಟು ಆಘಾತವನ್ನುಂಟು ಮಾಡಿತ್ತು. ಸಾವನ್ನಪ್ಪಿದ್ದ ವ್ಯಕ್ತಿ ನನಗೆ ತಿಳಿದಿದ್ದ ವ್ಯಕ್ತಿಯಾಗಿದ್ದು, ಹಲವು ಬಾರಿ ಆತನಿಗೆ ಚಿಕಿತ್ಸೆ ನೀಡಿತ್ತೆ. ವ್ಯಕ್ತಿ ಸಾವನ್ನಪ್ಪಿದ 2 ದಿನಗಳ ಬಳಿಕ ಆತನಿಗೆ ಕೊರೋನಾ ಇತ್ತು ಎಂಬುದು ಬಹಿರಂಗಗೊಂಡಿತ್ತು. 

3 ದಿನಗಳ ಬಳಿಕ ನನಗೂ ವೈರಸ್ ಇರುವುದು ದೃಢಪಟ್ಟಿತ್ತು. ಬಳಿಕ ಜಿಲ್ಲಾ ಆಡಳಿತ ಮಂಡಳಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಕೂಡಲೇ ಅವರು ನನ್ನನ್ನು ಐಸೋಲೇಷನ್ ನಲ್ಲಿರಿಸಿದ್ದರು. ಇಎಸ್ಐಸಿ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ಐಸೋಲೇಷನ್ ನಲ್ಲಿದ್ದೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಉತ್ತಮವಾಗಿ ಚಿಕಿತ್ಸೆ ನೀಡಿದ್ದರು. 

ಕೊರೋನಾ ಔಷಧಿಯೊಂದಿಗೆ ನಾನು ಎಂದಿನಂತೆ ತೆಗೆದುಕೊಳ್ಳುತ್ತಿದ್ದ ಇತರೆ ಔಷಧಿಗಳನ್ನೂ ತೆಗೆದುಕೊಳ್ಳುತ್ತಿದ್ದೆ. ಇದೀಗ ನನ್ನ ಆರೋಗ್ಯ ಉತ್ತಮವಾಗಿದೆ. ಇದಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ಐಸೋಲೇಷನ್ ನಿಂದ ಬಿಡುಗಡೆಗೊಳ್ಳುವ ವೇಳೆ ನನ್ನ ಪತ್ನಿಯಲ್ಲೂ ವೈರಸ್ ದೃಢಪಟ್ಟಿದೆ ಎಂಬ ವಿಚಾರ ತಿಳಿದಿತ್ತು. ಇದೀಗ ನಾನು ಮತ್ತು ನನ್ನ ಪತ್ನಿ ಇಬ್ಬರೂ ಗುಣಮುಖರಾಗಿದ್ದು, ಉತ್ತಮ ಆರೋಗ್ಯ ಹೊಂದಿದ್ದೇವೆ. 

ಕೊರೋನಾಗೆ ಯಾರೂ ಭೀತಿಗೊಳಗಾಗಬಾರದು. ಪ್ರತೀಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಗಳನ್ನು ಧರಿಸಬೇಕು. ವೈರಸ್ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಯಾರೂ ಅದನ್ನು ಮುಚ್ಚಿಡಬಾರದು. ಇದು ಕೇವಲ ನಿಮ್ಮನ್ನಷ್ಟೇ ಅಲ್ಲದೆ, ನಿಮ್ಮ ಕುಟುಂಬ ಹಾಗೂ ಸ್ನೇಹಿತರನ್ನೂ ಅಪಾಯಕ್ಕೆ ಸಿಲುಕಿಸುತ್ತದೆ. ವೈರಸ್ ಬರುವುದು ಪಾಪವಲ್ಲ. ಅದೊಂದು ರೋಗವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳಬೇಕಷ್ಟೇ ಎಂದು ತಿಳಿಸಿದ್ದಾರೆ. 

SCROLL FOR NEXT