ವಿಶೇಷ

ಕೋಳಿ ಮೊಟ್ಟೆಯೊಳಗೆ ಹಳದಿ ಬದಲಿಗೆ ಹಸಿರು ಬಣ್ಣದ ಲೋಳೆ; ಕೇರಳದಲ್ಲಿ ವಿಚಿತ್ರ ಘಟನೆ

Srinivasamurthy VN

ಮಲಪ್ಪುರಂ: ಕೋಳಿ ಇಡುವ ಮೊಟ್ಟೆಯೊಳಗೆ ಹಳದಿ ಬಣ್ಣ ಲೋಳೆ ಇರುವುದು ಸಾಮಾನ್ಯ.. ಆದರೆ ಕೇರಳದಲ್ಲಿ ಹಸಿರು ಬಣ್ಣದ ಲೋಳೆ ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಹೌದು.. ಕೇರಳದ ಮಲಪ್ಪುರಂನ ಒತ್ತುಕ್ಕುಂಗಲ್ ನಲ್ಲಿರುವ ಕೋಳಿ ಫಾರಂ ನಲ್ಲಿ ಕೋಳಿಯೊಂದು ಇಟ್ಟಿರುವ ಮೊಟ್ಟೆಯೊಳಗೆ ಹಸಿರು ಬಣ್ಣದ ಲೋಳೆ ಕಂಡುಬಂದಿದೆ, ಎಕೆ ಶಹೀಬುದ್ದೀನ್ ಎಂಬುವವರಿಗೆ ಸೇರಿರುವ ಕೋಳಿ ಫಾರಂನಲ್ಲಿ ಇಂತಹ ಘಟನೆ ಕಂಡುಬಂದಿದ್ದು, ಹಸಿರು ಬಣ್ಣದ  ಲೋಳೆಯ ಮೊಟ್ಟೆಯ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ತಿಳಿದ ಹಲವರು ಶಹೀಬುದ್ದೀನ್ ಅವರಿಗೆ ಕರೆ ಮಾಡಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಕುರಿತು ವಿಚಾರಿಸುತ್ತಿದ್ದಾರೆ.

ಇತ್ತೀಚೆಗೆ ಶಹೀಬುದ್ದೀನ್ ಕೋಳಿಯೊಂದರ ಮೊಟ್ಟೆಯನ್ನು ಬೇಯಿಸಿದ್ದರು. ಆಗ ಮೊಟ್ಟೆಯ ಲೋಳೆ ಹಸಿರು ಬಣ್ಣದಿಂದ ಇತ್ತು. ಇದರಿಂದ ಗಾಬರಿಯಾದ ಅವರ ಕುಟುಂಬ ಅದನ್ನು ತಿನ್ನದೇ ಹಾಗೆಯೇ ಬಿಟ್ಟಿತ್ತು. ಅಚ್ಚರಿ ಎಂದರೆ ಈ ಹಸಿರು ಬಣ್ಣದ ಲೋಳೆಯ ಮೊಟ್ಟೆ ಇಟ್ಟಿದ್ದ ಕೊಳಿಯ ಇತರೆ  ಮೊಟ್ಟೆಗಳಿಂದ ಮರಿಗಳು ದೊಡ್ಡದಾಗಿ ಅವುಗಳೂ ಕೂಡ ಹಸಿರು ಬಣ್ಣದ ಲೋಳೆಯಿರುವ ಮೊಟ್ಟೆಗಳನ್ನು ಇಡುತ್ತಿವೆ.  ಈ ಘಟನೆ ಬಳಿಕ ಶಹೀಬುದ್ದೀನ್ ಕುಟುಂಬ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳನ್ನು ನಿರಾಂತಕವಾಗಿ ತಿನ್ನ ತೊಡಗಿದ್ದಾರೆ. ಈ ವರೆಗೂ ಅವರಿಗೆ ಯಾವುದೇ  ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲವಂತೆ. ಅಲ್ಲದೆ ಹಸಿರು ಲೋಳೆಯ ಮೊಟ್ಟೆ ಕೂಡ ಹಳದಿ ಬಣ್ಣದ ಲೋಳೆಯ ಮೊಟ್ಟೆಯನ್ನೇ ಹೋಲುತ್ತಿದೆ. ರುಚಿಯಲ್ಲೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಹಸಿರು ಬಣ್ಣದ ಲೋಳೆಯಿರುವ ಮೊಟ್ಟೆಗಳಿಡುವ ಕೋಳಿಗಳನ್ನು ಮತ್ತು ಮೊಟ್ಟೆಗಳ ಉತ್ಪಾದನೆ ಹೆಚ್ಚಿಸಿ ಇದರ ವ್ಯಾಪಾರ ಮಾಡುವ ಕುರಿತು ಶಹೀಬುದ್ದೀನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಹಲವಾರು ಮಂದಿ ತಮಗೆ ಹಸಿರು ಬಣ್ಣದ ಲೋಳೆ ಇರುವ  ಮೊಟ್ಟೆಗಳು ಮತ್ತು ಅದರ ಕೋಳಿಗಳು ಬೇಕು ಹೇಳಿದ್ದಾರೆ. ಹೀಗಾಗಿ ತಾವು ಈ ಉತ್ಪಾದನೆಯನ್ನು ಹೆಚ್ಚಿಸಿ ಅದರ ವ್ಯಾಪಾರ ಮಾಡಬೇಕು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಇದೇ ವಿಚಾರ ಈಗ ಕೇರಳದಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಕೇರಳ ಕೆಲ ವಿಜ್ಞಾನಿಗಳು ಈ ಕೋಳಿ ಮತ್ತು ಮೊಟ್ಟೆಗಳ ಮೇಲೆ ಸಂಶೋಧನೆ ಆರಂಭಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪಶು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ  ಹರಿಕಷ್ಣ ಎಸ್ ಅವರು, ಹಸಿರು ಬಣ್ಣದ ಲೋಳೆಯ ಮೊಟ್ಟೆ ಮತ್ತು ಅದರ ಕೋಳಿಯ ಮೇಲಿನ ಸಂಶೋಧನೆ ಪ್ರಗತಿಯಲ್ಲಿದೆ. ಈ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಅಧ್ಯಯನ ಪ್ರಗತಿಯಲ್ಲಿದ್ದು, ಮೂರು ನಾಲ್ಕು ವಾರಗಳ ನಿರಂತರ ಅಧ್ಯಯನದ ಬಳಿಕ ಇದಕ್ಕೆ ಉತ್ತರ ಸಿಗಬಹುದು  ಎಂದು ಹೇಳಿದ್ದಾರೆ. ಬಹುಶಃ ಕೋಳಿ ಸಾಮಾನ್ಯ ಆಹಾರಕ್ಕಿಂತ ಬೇರೆ ಎನ್ನಾದರೂ ತಿಂದರಬೇಕು ಎಂಬ ಶಂಕೆ ಇದೆ. ಅಧ್ಯಯನದಿಂದ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ. ಮೂರು ವಾರಗಳ ಬಳಿಕವೂ ಕೋಳಿಗಳು ಇದೇ ರೀತಿಯ ಮೊಟ್ಟೆ ಇಟ್ಟರೆ ಆಗ ಬೇರೆ ರೀತಿಯ ಅಧ್ಯಯನ ನಡೆಸ  ಬೇಕಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT