ವಿಶೇಷ

ಒಡಿಶಾ: ಏಳು ದಶಕಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯೆ ಕಲಿಸುತ್ತಿರುವ ಶತಾಯುಷಿ

Srinivas Rao BV

ಒಡಿಶಾ: ಶಿಕ್ಷಕ ಎಂದೂ ನಿವೃತ್ತನಾಗುವುದಿಲ್ಲ ಎಂಬ ಮಾತಿದೆ ಈ ಮಾತಿನ ಮೂರ್ತ ರೂಪದಂತಿರುವ ಶತಾಯುಷಿ ವ್ಯಕ್ತಿಯೊಬ್ಬರು ಒಡಿಶಾದಲ್ಲಿ 75 ವರ್ಷಗಳಿಂದ ಒಂದೇ ಒಂದು ಬಿಡಿಗಾಸನ್ನೂ ಪಡೆಯದೇ ಜಾಜ್ ಪುರ ಜಿಲ್ಲೆಯಲ್ಲಿ ಪೀಳಿಗೆಗಳಿಗೆ ವಿದ್ಯೆಯನ್ನು ಕಲಿಸುತ್ತಿದ್ದಾರೆ. 

104 ವಸಂತಗಳನ್ನು ಪೂರೈಸಿರುವ ನಂದ ಪ್ರಸ್ತಿ ಮರದ ಕೆಳಗೆ ಕುಳಿತು ಮಕ್ಕಳಿಗೆ ಪಾಠ ಮಾಡುತ್ತಾರೆ. ಅಷ್ಟೇ ಅಲ್ಲದೇ ಕಲಿಯಲು ಬಯಸುವ ವಯಸ್ಕರಿಗೂ ರಾತ್ರಿಯ ವೇಳೆ ಪಾಠ ಮಾಡುತ್ತಾರೆ. 4 ನೇ ಶ್ರೇಣಿಯನ್ನು ಮುಕ್ತಾಯಗೊಳಿಸಿದ ಬಳಿಕ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳಿಸಬೇಕು ಎಂದು  ನಂದ ಪ್ರಸ್ತಿ ಅಭಿಪ್ರಾಯಪಟ್ಟಿದ್ದಾರೆ. 

ಬರ್ತಂಡಾ ಗ್ರಾಮದ ಮೂಲದವರಾಗಿರುವ ಶತಾಯುಷಿಗೆ ತಮ್ಮ ಕೆಲಸ ಸುಗಮವಾಗಿ ಸಾಗಲು ಸರ್ಕಾರಿ ಸವಲತ್ತುಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾದರೂ ಸಹ ಈ ವರೆಗೂ ಸರ್ಕಾರಿ ಸೌಲಭ್ಯ ಪಡೆಯದೇ ತಮ್ಮ ಸೇವೆಯನ್ನು ಮುಂದುವರೆಸಿದ್ದು ತಮಗೆ ಮರದ ಕೆಳಗೆ ಕುಳಿತು ಬೋಧಿಸುವುದೇ ಸೂಕ್ತ ಎನ್ನುತ್ತಾರೆ. 
 
"ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಈ ಗ್ರಾಮದಲ್ಲಿ ಹಲವರು ಅನಕ್ಷರಸ್ಥರು ಇರುವುದನ್ನು ಕಂಡೆ, ಅವರಿಗೆ ತಮ್ಮ ಹೆಸರಿನಲ್ಲಿ ಸಹಿ ಹಾಕುವುದಕ್ಕೂ ಬರುತ್ತಿರಲಿಲ್ಲ. ಅವರಿಗೆ ಸಹಿ ಮಾಡುವುದನ್ನು ಹೇಳಿಕೊಡಲು ಪ್ರಾರಂಭಿಸಿದೆ. ಕಲಿಯಲು ಬಂದವರು ಹೆಚ್ಚು ಕಲಿಯಲು ಆಸಕ್ತಿ ತೋರಿದರು, ಭಗವದ್ಗೀತೆ ಕಲಿತರು, ನನ್ನ ಮೊದಲ ಬ್ಯಾಚ್ ನಲ್ಲಿ ಕಲಿತವರ ಮರಿ ಮೊಮ್ಮಕ್ಕಳಿಗೂ ಕಲಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಂದ ಪ್ರಸ್ತಿ 

ಬರ್ತಂಡಾ ನ ಸರ್ಪಂಚ್ ಇವರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಸರ್ಕಾರದಿಂದ ನೆರವು ಪಡೆಯುವುದಕ್ಕೆ ನಂದಾ ಪ್ರಸ್ತಿ ನಿರಾಕರಿಸುತ್ತಾರೆ. ಆದ್ದರಿಂದ ಅವರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ನಾವೇ ಮಾಡಿಕೊಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

SCROLL FOR NEXT