ವಿಶೇಷ

ಬೆಂಗಳೂರು: ಕೋವಿಡ್-19 ವಿಶೇಷ ಆಸ್ಪತ್ರೆಯಲ್ಲಿ 300 ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಯಶಸ್ವಿ ಹೆರಿಗೆ

Srinivasamurthy VN

ಬೆಂಗಳೂರು: ಬೆಂಗಳೂರು ನಗರದ ಸರ್ಕಾರಿ ಕೋವಿಡ್-19 ವಿಶೇಷ ಹೆರಿಗೆ ಆಸ್ಪತ್ರೆಯಲ್ಲಿ ಕೇವಲ 78 ದಿನಗಳಲ್ಲಿ ಕೊರೊನಾ ಸೋಂಕಿತ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.

ಕೋವಿಡ್‌ ಪೀಡಿತ ಗರ್ಭಿಣಿಯರಿಗೆ ಚಿಕಿತ್ಸೆ ಒದಗಿಸುತ್ತಿರುವ ವೈದ್ಯರು, ಶನಿವಾರ 300ನೇ ಹೆರಿಗೆಯನ್ನು ಮಾಡಿಸಿದ್ದಾರೆ. ನಗರದ ಎಚ್‌.ಎಸ್.ಐ.ಎಸ್. ಘೋಷಾ ಆಸ್ಪತ್ರೆಯ ವೈದ್ಯರು 78 ದಿನಗಳಲ್ಲಿ ಕೊರೊನಾ ಸೋಂಕಿತ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆಗಳನ್ನು ಮಾಡಿಸಿದ್ದಾರೆ. ಆಸ್ಪತ್ರೆಯಲ್ಲಿ  ಈವರೆಗೆ ಕೋವಿಡ್ ಪೀಡಿತ 554 ಗರ್ಭಿಣಿಯರು ದಾಖಲಾಗಿದ್ದಾರೆ. ಸದ್ಯ 15 ಮಂದಿ ಕೋವಿಡ್‌ ಪೀಡಿತ ಗರ್ಭಿಣಿಯರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯಶಸ್ವಿ 300 ಹೆರಿಗೆಗಳಲ್ಲಿ 159 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 141 ಮಂದಿಗೆ ಸಹಜ ಹೆರಿಗೆ ಮಾಡಿಸಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಈ ಆಸ್ಪತ್ರೆಯಲ್ಲಿ ಮಾರ್ಚ್ 27ರಿಂದ ಕೋವಿಡ್‌ ಪೀಡಿತ ಗರ್ಭಿಣಿಯರಿಗೆ ಸೇವೆ ಪ್ರಾರಂಭಿಸಲಾಗಿದೆ. ಒಟ್ಟು 70 ಹಾಸಿಗೆಗಳಿದ್ದು, ತಜ್ಞ ವೈದ್ಯರ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ  ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳ ಜತೆಗೆ ಸುತ್ತಮುತ್ತಲಿನ ಜಿಲ್ಲೆಗಳ ಆಸ್ಪತ್ರೆಗಳಿಂದ ಕೂಡ ಕೋವಿಡ್ ಪೀಡಿತ ಗರ್ಭಿಣಿಯರನ್ನು ಶಿಫಾರಸು ಆಧಾರದಲ್ಲಿ ಇಲ್ಲಿಗೆ ಕಳುಹಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ತುಳಸಿದೇವಿ, 'ಈ ವರ್ಷದ ಮಾರ್ಚ್ 27 ರಂದು ವಿಶೇಷ ಹೆರಿಗೆ ಕೋವಿಡ್-19 ಕೇಂದ್ರವನ್ನು ಪ್ರಾರಂಭಿಸಲು ನಮಗೆ ರಾಜ್ಯ ಸರ್ಕಾರದಿಂದ ಆದೇಶ ಬಂದಿತ್ತು. ಅಂದಿನಿಂದ, ನಾವು ಕೊರೋನ ವೈರಸ್ ನ 564 ಸೋಂಕಿತ ಹೆರಿಗೆ  ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ನಾವು ಇಂದಿನವರೆಗೂ 300 ಹೆರಿಗೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.

ಅಂತೆಯೇ, 'ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಕೆಲವರು ಸ್ವಯಂ ಚಿಕಿತ್ಸೆ ಮಾಡಿಕೊಂಡು ಮನೆಯಲ್ಲಿಯೇ ಇರುತ್ತಾರೆ. ತಡವಾಗಿ ಆಸ್ಪತ್ರೆಗೆ ಬಂದ ಕಾರಣ ಕೆಲವರು ಮೃತಪಟ್ಟಿ‌ದ್ದಾರೆ. ಅವರಿಗೆ ನ್ಯುಮೋನಿಯಾ, ಶ್ವಾಸ ಕೋಶದ ಸೋಂಕು ಕೂಡ ಜೀವಕ್ಕೆ ಅಪಾಯ ತಂದೊಡ್ಡಿತು. ಉಸಿರಾಟದ ಸಮಸ್ಯೆ  ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್‌ ಪ್ರಕರಣಗಳು ಇಳಿಕೆಯಾದರೂ ಗರ್ಭಿಣಿಯರು ಅನಗತ್ಯವಾಗಿ ಹೊರಗಡೆ ಓಡಾಟ ನಡೆಸಬಾರದು. ಕೋವಿಡ್‌ ಕಾಯಿಲೆ ದೂರವಾಗುವವರೆಗೂ ಸಮಾರಂಭಗಳು ಸೇರಿದಂತೆ ಹೆಚ್ಚು ಜನ ಸೇರುವ ಕಡೆ  ಗರ್ಭಿಣಿಯರು ಹೋಗಬಾರದು. ಮನೆಯಲ್ಲಿ ಯಾರಾ ದರೂ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಸ್ವಯಂ ನಿಗಾ ವ್ಯವಸ್ಥೆಗೆ  ಒಳಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.

28 ಗರ್ಭಿಣಿಯರು ಸಾವು
ಈವರೆಗೆ ಆಸ್ಪತ್ರೆಗೆ ದಾಖಲಾದ ಕೋವಿಡ್ ಪೀಡಿತ ಗರ್ಭಿಣಿಯರಲ್ಲಿ 28 ಮಂದಿ ಚಿಕಿತ್ಸೆಗೆ ಸ್ಪಂದಿಸದೆಯೇ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳನ್ನು ಕೂಡ ಎದುರಿಸಿದವರಾಗಿದ್ದಾರೆ. ತಾಯಿಯಿಂದ ಶಿಶುಗಳಿಗೆ ಸೋಂಕು ಹರಡುವುದನ್ನು ತಡೆಗಟ್ಟುವ  ಸಲುವಾಗಿ ಆಸ್ಪತ್ರೆಯಲ್ಲಿ ಆರು ಗರ್ಭಪಾತಗಳನ್ನು ಸಹ ನಡೆಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

ಆರೋಗ್ಯ ಸಚಿವರಿಂದ ಶ್ಲಾಘನೆ
ಇದೇ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ವೈದ್ಯರ ಈ ಕಾರ್ಯಕ್ಕೆ ಶುಭಹಾರೈಸಿದ್ದಾರೆ. 

SCROLL FOR NEXT