ವಿಶೇಷ

ಸಂಕಟದ ನಡುವೆ ಸ್ಫೂರ್ತಿಯ ಕಥೆ: ಒಂದೇ ಶ್ವಾಸಕೋಶವಿದ್ದೂ 14 ದಿನಗಳಲ್ಲಿ ಕೊರೋನಾ ಗೆದ್ದ ನರ್ಸ್!

Raghavendra Adiga

ಭೋಪಾಲ್: ಮನೋಬಲ ಮತ್ತು ಬದುಕುವ ಹಂಬಲವಿದ್ದಲ್ಲಿ ಎಂತಹ ಪರ್ವತವೇ ಅಡ್ಡ ಬಂದರೂ ಅದನ್ನು ದಾಟಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಈ ವರದಿಯೇ ಹೊಸ ಉದಾಹರಣೆ.

ಬಾಲ್ಯದಲ್ಲಿ ನಡೆದ ಅಪಘಾತವೊಂದರಲ್ಲಿ ಶ್ವಾಸಕೋಶವೊಂದನ್ನು ಕಳೆದುಕೊಂಡ ಮಧ್ಯಪ್ರದೇಶದ ನರ್ಸ್ ಒಬ್ಬರು ಒಂದೇ ಶ್ವಾಸಕೋಶವಿದ್ದರೂ ಸಹ ಕೊರೋನಾ ವಿರುದ್ಧ ಹೋರಾಡಿ ಜಯಿಸಿದ್ದಾರೆ.

ಪ್ರಫುಲ್ಲಿಟ್ ಪೀಟರ್ (39) ಎನ್ನುವವರೇ ಇಂತಹಾ ಅದೃಷ್ತಶಾಲಿ ನರ್ಸ್. ಈಕೆ ಟಿಕಮ್‍ಘರ್ ಸಿವಿಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿದಾಗ ಅನೇಕರು ಆಕೆ ಬದುಕುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಫುಲ್ಲಿಟ್  ಮಾತ್ರ ತನ್ನ ಸಂಪೂರ್ಣ ಮನೋಬಲ ಮತ್ತು ದೃಢ ನಿಶ್ಚಯದ ಪರಿಣಾಮ 14 ದಿನಗಳ ಕಾಲ ಹೋಮ್ ಐಸೋಲೇಷನ್ ಆಗಿದ್ದು ನಂತರ ಕೊರೋನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಹಾಗಾದರೆ ಇದು ಹೇಗೆ ಸಾಧ್ಯವಾಯಿತು? ಅದು ಆಕೆ ನಿಯಮಿತವಾಗಿ ಮಾಡುತ್ತಿದ್ದ ಯೋಗ ಹಾಗೂ ಪ್ರಾಣಾಯಾಮದಿಂದ. ಆದಲ್ಲದೆ ಆಕೆ ಇದರೊಡಣೆ ಕೊರೋನಾ ಲಸಿಕೆಯ ಎರಡೂ ಡೋಸ್ ಗಳನ್ನು ಸಹ ಪಡೆದಿದ್ದರು. ಇದು ಅವರಲ್ಲಿನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಗುಣಮುಖವಾಗಿರುವ ನರ್ಸ್ ಪ್ರಫುಲ್ಲಿಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ನಮ್ಮ ರಾಜ್ಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ (103 ವರ್ಷ) ಸಹ ಸೋಂಕಿನ ವಿರುದ್ಧ ಯಶಸ್ವಿಯಾಗಿ ಹೋರಾಡಿ ಜಯಿಸಿದ್ದಾರೆ. ಅವರು  ತಾವು ಆಸ್ಪತ್ರೆಗೆ ದಾಖಲಾಗಿ ವೈದ್ಯರ ಸಲಹೆಯನ್ನು ಸೂಕ್ಷ್ಮವಾಗಿ ಅನುಸರಿಸಿದರು, ಇದರಿಂದಾಗಿ ನಿಜವಾದ "ಹೀರೋ" ಆಗಿ ಮನೆಗೆ ಮರಳಿದ್ದಾರೆ.

SCROLL FOR NEXT