ವಿಶೇಷ

ಯಾದಗಿರಿ ಜಿಲ್ಲೆಯ ಕಟಗಿ-ಶಹಪುರ ಗ್ರಾಮಸ್ಥರಿಂದ ಸ್ವಯಂಪ್ರೇರಿತ ಲಾಕ್ ಡೌನ್: ಗ್ರಾಮ ಕೊರೋನಾ ಮುಕ್ತ!

Sumana Upadhyaya

ಯಾದಗಿರಿ: ಕೋವಿಡ್ ಎರಡನೇ ಅಲೆ ನಿಧಾನವಾಗಿ ಗ್ರಾಮೀಣ ಪ್ರದೇಶಗಳಿಗೆ ಕಾಲಿಡುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಸರಿಯಾಗಿ ಮಾಸ್ಕ್ ಹಾಕುವುದಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ ಕೊರೋನಾ ನಿಯಮ ಪಾಲಿಸುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ, ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಗ್ರಾಮಸ್ಥರು ಕೊರೋನಾ ನಿಯಂತ್ರಿಸುವಲ್ಲಿ ಮಾದರಿಯಾಗಿದ್ದಾರೆ. ಕಟಗಿ ಶಹಪುರ ಗ್ರಾಮ ಇಂದು ಕೊರೋನಾ ಸೋಂಕು ಮುಕ್ತವಾಗಿದ್ದು ಕೊರೋನಾ ಎರಡನೇ ಗ್ರಾಮಕ್ಕೆ ಪ್ರವೇಶಿಸಿದಾಗಲೇ ಸೂಕ್ತ ಕ್ರಮಗಳಿಂದ ನಿಯಂತ್ರಿಸಿದ್ದರು.

ಕಳೆದ ವರ್ಷ ಕೊರೋನಾ ಮೊದಲನೇ ಅಲೆ ಆರಂಭವಾದಾಗಲೂ ಗ್ರಾಮಸ್ಥರು ಇದೇ ಕ್ರಮ ಅನುಸರಿಸಿದ್ದರು. ಕಟಗಿ ಶಹಪುರ ಗ್ರಾಮದ ಹಟ್ಟಿಕುನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರಾಮಕೃಷ್ಣ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಆರಂಭದಲ್ಲಿ ಕಟಗಿ ಶಹಪುರದಲ್ಲಿ 9 ಕೊರೋನಾ ಪ್ರಕರಣ ವರದಿಯಾಗಿತ್ತು. ಮೊನ್ನೆ ಮೇ 16ರಿಂದ ಒಂದೇ ಒಂದು ಕೇಸು ವರದಿಯಾಗಿಲ್ಲ. ಆರ್ ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕಳೆದ ತಿಂಗಳು 9 ಪ್ರಕರಣಗಳು ವರದಿಯಾಗಿದ್ದವಷ್ಟೆ. ಮೊನ್ನೆ ಭಾನುವಾರ, ಮರುಪರೀಕ್ಷೆ ಮಾಡಿದ ನಂತರವೂ ನೆಗೆಟಿವ್ ಬಂದಿತ್ತು. ರ್ಯಾಂಡಮ್ ಆರ್ ಟಿ-ಪಿಸಿಆರ್ ಪರೀಕ್ಷೆ ಗ್ರಾಮದಲ್ಲಿ ಇನ್ನು ಕೆಲವು ದಿನಗಳು ಕಳೆದ ನಂತರ ಮಾಡುತ್ತೇವೆ ಎಂದರು.

ಆದರೆ ಗ್ರಾಮಸ್ಥರು ಹೇಳುವ ಪ್ರಕಾರ, ಗ್ರಾಮದಲ್ಲಿ ಯಾವುದೇ ಕೊರೋನಾ ಪ್ರಕರಣಗಳು ಸದ್ಯಕ್ಕಿಲ್ಲ, ಕೊರೋನಾ ಎರಡನೇ ಅಲೆ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಆರೋಗ್ಯ ಕಾಳಜಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಗ್ರಾಮಸ್ಥರು ತೆಗೆದುಕೊಂಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ.

ಗ್ರಾಮಸ್ಥರು ಮಾಡಿದ್ದೇನು?: ಜಿಲ್ಲೆಯ ಬೇರೆ ಕಡೆಗಳಲ್ಲಿ, ಬೇರೆ ಜಿಲ್ಲೆಗಳಲ್ಲಿ ಕೊರೋನಾ ಎರಡನೇ ಅಲೆ ಪರಿಣಾಮ ತೀವ್ರವಾಗಿದೆ ಎಂದು ಕಂಡುಬಂದ ತಕ್ಷಣ ಕಳೆದ ವಾರ ಗ್ರಾಮದ ಹಿರಿಯಸ್ಥರು ಒಟ್ಟು ಸೇರಿದರಂತೆ. ಗ್ರಾಮಕ್ಕೆ ಹೊರಗಿನಿಂದ ಬರುವವರೆಗೆ ಕಡ್ಡಾಯಾಗಿ ನಿಷೇಧ ಹೇರಲಾಯಿತು. ಗ್ರಾಮದ ಒಳಗೆ ಕೂಡ ಜನರು ಓಡಾಡುವುದಕ್ಕೆ ತಡೆ ಒಡ್ಡಲಾಯಿತು. ಕೇವಲ ಗ್ರಾಮ ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗುವುದು ಬಿಟ್ಟರೆ ಬೇರಾವ ಕೆಲಸಗಳಿಗೂ ಹೊರಹೋಗುವಂತಿಲ್ಲ.

ಕಳೆದ ಶುಕ್ರವಾರದಿಂದ ಮಂಗಳವಾರದವರೆಗೆ ಪ್ರತಿದಿನ ರಾತ್ರಿ, ಹಗಲು ದೀಪ ಬೆಳಗಲು ಪ್ರತಿ ಮನೆಯಿಂದ ದೀಪದ ಎಣ್ಣೆ ನೀಡಲಾಗಿತ್ತು. ನೈವೇದ್ಯ ಮಾಡುವುದು ಕೂಡ ಸರದಿ ಪ್ರಕಾರ ಮುಂದುವರಿದಿತ್ತು. ಹೊರಗೆ ಚಲನವಲನ ನಿಯಂತ್ರಿಸಿ ಕೊರೋನಾದಿಂದ ಗ್ರಾಮಸ್ಥರು ಮುಕ್ತರಾಗಿದ್ದಾರೆ.

ಯಾದಗಿರಿ ತಹಶಿಲ್ದಾರ್ ಚೆನ್ನಮಲ್ಲಪ್ಪ, ಕಟಗಿ ಶಹಪುರ ಗ್ರಾಮಸ್ಥರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ, ಕೊರೋನಾ ಕಾರ್ಯಕರ್ತರು ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಬೇಕು.ಗ್ರಾಮಸ್ಥರಿಗೆ ನಾವು ಲಾಕ್ ಡೌನ್ ಹೇರಲು ಹೇಳಿರಲಿಲ್ಲ, ಅವರಾಗಿಯೇ ಕ್ರಮ ಕೈಗೊಂಡಿದ್ದು ಎನ್ನುತ್ತಾರೆ.

SCROLL FOR NEXT