ವಿಶೇಷ

ಹೊಸಪೇಟೆ: ಒಂದೇ ಪಾದದಲ್ಲಿ ಒಂಬತ್ತು ಕಾಲು ಬೆರಳೊಂದಿಗೆ ಜನಿಸಿದ ಮಗು, 'ದೇವರ ವರ' ಎಂದ ಕುಟುಂಬ!

Raghavendra Adiga

ಹೊಸಪೇಟೆ: ಇದನ್ನು ಪವಾಡವೆನ್ನಬೇಕು ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಡಾಕ್ಟಲಿ (polydactyly) ಎಂದು ಕರೆಯಬೇಕೋ ನೀವು ತೀರ್ಮಾನಿಸಿ! ನವಜಾತ ಶಿಶುವೊಂದು ಹುಟ್ಟುವಾಗಲೇ ಒಂದೇ ಕಾಲಿನಲ್ಲಿ ಒಂಬತ್ತು  ಬೆರಳನ್ನು ಹೊಂದಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂತಹಾ ಒಂದು ವಿಚಿತ್ರ ಗಂಡು ಮಗುವು ಜನಿಸಿದೆ.

ಹೆರಿಗೆ ಮಾಡಿಸಿದ್ದ ಡಾ.ಬಾಲಚಂದ್ರನ್, ಇದು ಅಪರೂಪದ ಪ್ರಕರಣ ಮತ್ತು ನವಜಾತ ಶಿಶು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. "ಪಾಲಿಡಾಕ್ಟಲಿ (polydactyly) ಬಗ್ಗೆ ಕುಟುಂಬಕ್ಕೆ ಅರ್ಥವಾಗುವಂತೆ ನಾವು ಹಿಂದಿನ ಪ್ರಕರಣಗಳು ಮತ್ತು ದಾಖಲೆಗಳನ್ನು ವಿವರಿಸಬೇಕಾಯಿತು" ಎಂದು ಅವರು ಹೇಳಿದರು.

ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಬಳ್ಳಾರಿಯ ಮಕ್ಕಳ ತಜ್ಞ ಡಾ. ಪ್ರಿಸ್ಸಿಲ್ಲಾ ಟಿ ಹೇಳಿದ್ದಾರೆ. "ಹಲವಾರು ಶಿಶುಗಳು ಹೆಚ್ಚುವರಿ ಕೈ ಬೆರಳು ಅಥವಾ ಕಾಲು ಬೆರಳುಗಳೊಡನೆ ಜನಿಸುತ್ತವೆ ಆದರೆ ಈ ಸಂದರ್ಭದಲ್ಲಿ ಮಗುವಿಗೆ ಒಂದೇ ಪಾದದಲ್ಲಿ ಒಂಬತ್ತು ಕಾಲು ಬೆರಳುಗಳಿವೆ. ಶಿಶು ಬೆಳೆದಂತೆ ಹೆಚ್ಚುವರಿ ಕಾಲು ಬೆರಳುಗಳ ಜತೆಗೇ ನಡೆಯಲು ಹೊಂದಿಕೊಳ್ಳುತ್ತವೆ” ಎಂದು ಅವರು ಹೇಳಿದರು.

ಕುಟುಂಬದ ಹಲವಾರು ಹಿರಿಯರು ಇದು ದೇವರ ವರ ಎಂದು ಹೇಳಿದರು ಮತ್ತು ಮಗು ಮತ್ತು ತಾಯಿಯ ಆರೋಗ್ಯ ಕಾಪಾಡಿದ ವೈದ್ಯರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

SCROLL FOR NEXT