ವಿಶೇಷ

ರೂ.1 ಕೋಟಿ ಮೌಲ್ಯದ ಆಸ್ತಿಯನ್ನು ರಿಕ್ಷಾ ಚಾಲಕನಿಗೆ ದಾನ ಮಾಡಿದ ವೃದ್ಧೆ!

Manjula VN

ಕಟಕ್‌: ವಯಸ್ಸಾದ ಮಹಿಳೆಯೊಬ್ಬರು ತನಗೆ ಮತ್ತು ತನ್ನ ಕುಟುಂಬಕ್ಕೆ 25 ವರ್ಷಗಳಿಂದ ಸೇವೆಯನ್ನು ಮಾಡಿದ ರಿಕ್ಷಾ ಚಾಲಕನಿಗೆ ತನ್ನ ಒಂದು ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿರುವ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ.

ಸುತಾಹತ್‌ನ 63 ವರ್ಷದ ಮಿನಾಟಿ ಪಟ್ನಾಯಕ್ ಅವರು ತಮ್ಮ ಮೂರು ಅಂತಸ್ತಿನ ಮನೆ, ಚಿನ್ನಾಭರಣಗಳು ಮತ್ತು ತನ್ನೆಲ್ಲ ಆಸ್ತಿಯನ್ನು ರಿಕ್ಷಾ ಚಾಲಕ ಬುಧಾ ಸಮಲ್‌ಗೆ ದಾನ ಮಾಡಿದ್ದಾರೆ.

ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಪತಿಯನ್ನು ಕಳೆದುಕೊಂಡ ನಂತರ ಮಗಳೊಂದಿಗೆ ಮಿನಾಟಿ ವಾಸಿಸುತ್ತಿದ್ದರು. ಇತ್ತೀಚೆಗೆ ಹೃದಯ ಸ್ತಂಭನದಿಂದ ಮಗಳು ಕೋಮಲ್ ಕೂಡ ಮೃತಪಟ್ಟರು. ಹಾಗಾಗಿ ಪತಿ ಮತ್ತು ತನ್ನ ಕುಟುಂಬಕ್ಕೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಡ ರಿಕ್ಷಾ ಚಾಲಕನಿಗೆ ಇವರು ಆಸ್ತಿಯನ್ನು ನೀಡಿದ್ದಾರೆ.

ನನ್ನ ಪತಿ ಮತ್ತು ಮಗಳ ಸಾವಿನ ನಂತರ ನಾನು ನೊಂದು, ದುಃಖದಲ್ಲಿ ಬದುಕುತ್ತಿದ್ದೇನೆ. ನಾನು ಕಷ್ಟದಲ್ಲಿ ಇದ್ದಾಗ ನನ್ನ ಸಂಬಂಧಿಕರು ನನಗೆ ಸಹಾಯ ಮಾಡಲಿಲ್ಲ. ನಾನು ಸಂಪೂರ್ಣವಾಗಿ ಒಬ್ಬಂಟಿಯಾಗಿದ್ದೆ. ಆದರೆ, ಈ ರಿಕ್ಷಾ ಚಾಲಕ ಮತ್ತು ಅವನ ಕುಟುಂಬ ಕಷ್ಟದ ಸಮಯದಲ್ಲಿ ನನಗೆ ಬೆಂಬಲಕ್ಕೆ ನಿಂತಿತು. ಅಲ್ಲದೇ ಅವರು ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನನ್ನ ಆರೋಗ್ಯವನ್ನು ನೋಡಿಕೊಂಡರು ಎಂದು ಮಿನಾಟಿ ಪಟ್ನಾಯಕ್ ಹೇಳಿದ್ದಾರೆ.

ನನ್ನ ಮರಣದ ನಂತರ ಯಾರೂ ಅವರಿಗೆ ಕಿರುಕುಳ ನೀಡಬಾರದೆಂದು, ಅವನ ಕುಟುಂಬಕ್ಕೆ ಎಲ್ಲವನ್ನೂ ಕಾನೂನುಬದ್ಧವಾಗಿ ದಾನ ಮಾಡಲು ನಿರ್ಧರಿಸಿದೆ ಎಂದು ಮಿನಾಟಿ ಹೇಳಿದ್ದಾರೆ.

ರಿಕ್ಷಾ ಚಾಲಕ ಬುಧಾನಿಗೆ ಹೆಂಡತಿ ಮತ್ತು ಮೂವರು ಮಕ್ಕಳು ಇದ್ದಾರೆ. ಮಾ (ಮಿನಾಟಿ) ಅವರು ತಮ್ಮ ಆಸ್ತಿಯನ್ನು ನಮಗೆ ನೀಡುವ ನಿರ್ಧಾರದ ಬಗ್ಗೆ ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. ನಾನು ಎರಡು ದಶಕಗಳಿಗೂ ಹೆಚ್ಚು ಕಾಲ ಈ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಮತ್ತು ನಾನು ಸಾಯುವವರೆಗೂ ಅವರ ಸೇವೆ ಮಾಡುತ್ತೇನೆ ಎಂದು ಬುಧಾ ಅವರು ಹೇಳಿದ್ದಾರೆ.

ನನ್ನ ಮತ್ತು ನನ್ನ ಕುಟುಂಬದ ಜೀವನದ ಮೇಲೆ ಪ್ರಭಾವ ಬೀರುವಂತಹ ಮಹತ್ವದ ನಿರ್ಧಾರವನ್ನು ಮಾ ತೆಗೆದುಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಈಗ ನನ್ನ ಕುಟುಂಬದೊಂದಿಗೆ ಒಂದೇ ಸೂರಿನಡಿ ಬದುಕಬಲ್ಲೆಎಂದು ಬುಧ ಸಮಲ್ ಹೇಳಿದರು.

SCROLL FOR NEXT