ವಿಶೇಷ

ಗಾಂಧಿ ಗುಡಿ: 7 ದಶಕಗಳ ಬಳಿಕ ನನಸಾಗುತ್ತಿದೆ ಕನಸು!

Manjula VN

ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಗದುಗಿಗೂ ಅವಿನಾಭಾವ ನಂಟು. ಗಾಂಧೀಜಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ್ದು 1944ರಲ್ಲಿ. ಅವರ ಗದಗ ಭೇಟಿಯ ನೆನಪಿಗಾಗಿ, ಗಾಂಧೀಜಿ ನಿಧನದ ನಂತರ ಬೆಟಗೇರಿಯ ಹೊಸಪೇಟೆ ಚೌಕ್ನಲ್ಲಿ ಗಾಂಧಿ ಸ್ಮಾರಕ ನಿರ್ಮಾಣ ಮಾಡುವ ಪ್ರಯತ್ನ ಶುರುವಾಗಿತ್ತು. 

ಹೊಸಪೇಟೆ ಚೌಕ್ ಭಾಗದ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟ ಗಾರರಾದ ಹನುಮಂತಸಾ ಬಾಕಳೆ, ಚಾಂದಸಾ ಬೊದ್ಲೇಖಾನ್, ನಾರಾಯಣಪ್ಪ ಬಗಾಡೆ, ಫಕೀರಪ್ಪ ಭರದ್ವಾಡ, ಸಂಕಪ್ಪ ಚೋಳಿನ, ಮಿರಜಕರ್ ಮತ್ತಿ ತರರು ಅಂದಿನ ಧಾರವಾಡ ಜಿಲ್ಲಾಧಿಕಾರಿ ಸಹಕಾರದೊಂದಿಗೆ ಗಾಂಧೀಜಿ ಅವರ ಚಿತಾಭಸ್ಮವನ್ನು ಗದುಗಿಗೆ ತಂದರು.

ಬೆಟಗೇರಿಯ ಹೊಸಪೇಟೆ ಚೌಕ್ನಲ್ಲಿರುವ ಬಾಕಳೆಯವರ ಮನೆಯ ಹತ್ತಿರ ಚಿತಾಭಸ್ಮ ಇದ್ದ ಕುಂಡವನ್ನು ಭೂಮಿಯಲ್ಲಿ ಸ್ಥಾಪಿಸಿ, ಅಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಈ ಸ್ಥಳಕ್ಕೆ ಗಾಂಧಿಗುಡಿ ಎಂದು ನಾಮಕರಣ ಮಾಡಿದರು. ಇಂದಿಗೂ ಈ ಓಣಿಯನ್ನು ಗಾಂಧಿ ಗುಡಿ ಓಣಿ ಎಂದೇ ಕರೆಯಲಾಗುತ್ತದೆ. 

ಗುಡಿಯಲ್ಲಿ ಗಾಂಧೀಜಿಯವರ ಮೂರ್ತಿ ಮೇಲೆ ಗಾಳಿ, ಧೂಳು, ಮಳೆ ಬೀಳುತ್ತಿತ್ತು. ಇದರಿಂದ ಬೇಸರಗೊಂಡಿದ್ದ ಸ್ಥಳೀಯರು ಸಾಕಷ್ಟು ಬಾರಿ ಮೇಲ್ಚಾವಣಿ ನಿರ್ಮಿಸಿ ಶೀಘ್ರಗತಿಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ತಡವಾಗಿಯೇ ಸಾಗಿತ್ತು. ಬಳಿಕ ಮೂರ್ತಿ ರಕ್ಷಣೆಗಾಗಿ ಕೆಲ ವರ್ಷಹಳ ಹಿಂದೆ ಅದನ್ನು ನಗರಸಭೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. 

ಪರಿಸ್ಥಿತಿ ಹೀಗಿದ್ದರೂ ಕೂಡ ಬೆಟಗೇರಿಯ ಜನರು ಮಾತ್ರ ಗಾಂಧಿ ಚಿತಾಭಸ್ಮಕ್ಕೆ ನಿತ್ಯವೂ ಪೂಜೆ ಸಲ್ಲಿಸುತ್ತಲೇ ಇದ್ದರು. ಈಗಲೂ ಈ ಪೂಜೆ ಮುಂದುವರೆಯುತ್ತಲೇ ಇದೆ. ಈ ಭಾಗದಿಂದ ಶಾಲೆಗೆ ಹೋಗುವ ಶಾಲಾ ಮಕ್ಕಳೆಲ್ಲಾ ಇದಕ್ಕೆ ನಮಸ್ಕರಿಸಿಯೇ ಹೊಗುತ್ತಾರೆ. ಈ ಭಾಗದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಪ್ರತಿನಿತ್ಯ ಈ ಗಾಂಧೀಗುಡಿಗೆ ನಮಸ್ಕರಿಸಿಯೇ ಮುನ್ನಡೆಯುತ್ತಿದ್ದಾರೆ. 

ಈ ಎಲ್ಲಾ ಬೆಳವಣಿಗೆ ಬಳಿಕ ಉಪ ಆಯುಕ್ತ ಸುಂದರೇಶ್ ಬಾಬು ಅವರು ಕೈಗೆತ್ತಿಕೊಂಡ ಕ್ರಮದಿಂದಾಗಿ ಇದೀಗ ಗುಡಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ. 

ಸುಂದರೇಶ್ ಬಾಬು ಅವರು ಗುಡಿ ನಿರ್ಮಾಣಕ್ಕೆ ಜಿಲ್ಲಾ ಆಡಳಿತ ಮಂಡಳಿಗೆ ಅನುದಾನ ಒದಗಿಸಿದ್ದು, ಅನುದಾನ ಬಿಡುಗಡೆಯಾಗುತ್ತಿದ್ದಂತೆಯೇ ಗದಗ ನಿರ್ಮಿತ ಕೇಂದ್ರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ, ಇದೀಗ ಗುಡಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ. 

ಬೆಟಗೇರಿ ನಿವಾಸಿಯಾದ ಗಣೇಶ್ ಸಿಂಗ್ ಬಯಲಿ ಎಂಬವವರು ಮಾತನಾಡಿ, ರಾಷ್ಟ್ರಪಿತನಿಗೆ ನೂತನ ಗುಡಿ ದಶಕಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಉಪ ಆಯುಕ್ತ ಸುಂದರೇಶ್ ಬಾಬು ಅವರಿಗೆ ನಾವೆಲ್ಲರೂ ಧನ್ಯವಾದ ಅರ್ಪಿಸುತ್ತೇವೆ. ಈಬಾರಿಯ ಗಾಂಧಿ ಜಯಂತಿಯು ನಮ್ಮೆಲ್ಲರಿಗೂ ವಿಶೇಷವಾಗಿದೆ ಮತ್ತು ನಾವು ಇದನ್ನು ಸಮುದಾಯ ಹಬ್ಬದಂತೆ ಆಚರಿಸಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ. 

SCROLL FOR NEXT