ಸ್ಕ್ರ್ಯಾಪ್ ಬಳಸಿ ಇ-ಬೈಕ್ ತಯಾರಿಕೆ 
ವಿಶೇಷ

ವೀಲ್ಸ್ ಆಫ್ ನಾಗಾಸ್: ಮಹಿಳಾ ಐಪಿಎಸ್ ಅಧಿಕಾರಿಯ ಕನಸಿಗೆ ಜೀವ ತುಂಬಿದ ಡ್ರೈವರ್-ಮೆಕಾನಿಕ್; ಸ್ಕ್ರ್ಯಾಪ್ ಬಳಸಿ ಇ-ಬೈಕ್ ತಯಾರಿಕೆ!

ಭಾರತದ ಮಹಿಳಾ ಐಪಿಎಸ್ ಅಧಿಕಾರಿಯ ಕನಸಿಗೆ ಡ್ರೈವರ್-ಮೆಕಾನಿಕ್ ಜೀವತುಂಬುವ ಕೆಲಸ ಮಾಡಿದ್ದು, ಸ್ಕ್ರ್ಯಾಪ್ ಬಳಸಿ ಇ-ಬೈಕ್ ತಯಾರಿಸಿ ಇದೀಗ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.

ಗುವಾಹತಿ: ಭಾರತದ ಮಹಿಳಾ ಐಪಿಎಸ್ ಅಧಿಕಾರಿಯ ಕನಸಿಗೆ ಡ್ರೈವರ್-ಮೆಕಾನಿಕ್ ಜೀವತುಂಬುವ ಕೆಲಸ ಮಾಡಿದ್ದು, ಸ್ಕ್ರ್ಯಾಪ್ ಬಳಸಿ ಇ-ಬೈಕ್ ತಯಾರಿಸಿ ಇದೀಗ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.

ಮ್ಯಾನ್ಮಾರ್ ಗಡಿಯಲ್ಲಿರುವ ನಾಗಾಲ್ಯಾಂಡ್‌ನ ನೋಕ್ಲಾಕ್ ಜಿಲ್ಲೆಯ ಇಬ್ಬರು ನಾವೀನ್ಯಕಾರರು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬೈಕ್‌ಗಳನ್ನು ಹೆಚ್ಚಾಗಿ ಸ್ಕ್ರ್ಯಾಪ್ ಬಳಸಿ ತಯಾರಿಸಿದ್ದಾರೆ. ಈ ಬೈಕ್‌ನಲ್ಲಿರುವ 250W ಬ್ಯಾಟರಿ, ವೇಗವರ್ಧಕ ಮತ್ತು ಇತರ ಕೆಲವು ವಸ್ತುಗಳನ್ನು ಹೊರತುಪಡಿಸಿ, ಉಳಿದೆಲ್ಲವನ್ನೂ ಸ್ಕ್ರ್ಯಾಪ್‌ನಿಂದ ಅಂದರೆ ಅಳಿದುಳಿದ ಅವಶೇಷಗಳಿಂದ ತೆಗೆದುಕೊಂಡು ಬಳಸಲಾಗಿದೆ ಎನ್ನಲಾಗಿದೆ. 4.6 ಅಡಿ ಉದ್ದ ಮತ್ತು 3.6 ಅಡಿ ಎತ್ತರದ ಈ ಬೈಕ್ ಸುಮಾರು 120 ಕೆ.ಜಿ.ಯ ಭಾರವನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿದ್ದು, ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎನ್ನಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಪ್ರೀತ್ಪಾಲ್ ಕೌರ್ ಅವರು ಸ್ಥಾಪಿಸಿದ "ಇನ್ನೋವೇಟಿವ್ ನೋಕ್ಲಾಕ್" ಉಪಕ್ರಮದ ಅಡಿಯಲ್ಲಿ ಈ ವಿಶೇಷ ಬೈಕ್ ಅನ್ನು ತಯಾರಿಸಲಾಗಿದ್ದು, ಇ-ಬೈಕ್ ಅನ್ನು "ವೀಲ್ಸ್ ಆಫ್ ನಾಗಾಸ್" ಎಂಬ ಬ್ರಾಂಡ್ ಹೆಸರಿನಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು. ಇದಕ್ಕೆ ಪ್ರೀತ್ಪಾಲ್ ಕೌರ್ ಅವರು  "ಗನ್ ಅಲ್ಲ.. ಮಶಿನ್ ಎಂದು ಶೀರ್ಷಿಕೆ ನೀಡಿದ್ದಾರೆ. ಇ-ಬೈಕ್ ಬಿಡುಗಡೆ ವೇಳೆ ಜಿಲ್ಲಾಧಿಕಾರಿ ಹಿಯಾಜು ಮೇರು ಹಾಗೂ ಎಸ್ಪಿ ಉಪಸ್ಥಿತರಿದ್ದರು.

ಚಾಲಕ ಮತ್ತು ಮೆಕ್ಯಾನಿಕ್ ತಯಾರಿಸಿದ ಇ-ಬೈಕ್
ಇದು ಐಪಿಎಸ್ ಅಧಿಕಾರಿ ಪ್ರೀತ್ಪಾಲ್ ಕೌರ್‌ ಅವರ ಕನಸಿನ ಯೋಜನೆಯಾಗಿದ್ದು, ಪ್ರೀತ್ಪಾಲ್ ಕೌರ್ ಅವರ ತಮ್ಮ ಚಾಲಕ ಪಿ ಖುಮಿಂಗ್ ಮತ್ತು ಮೆಕ್ಯಾನಿಕ್ ತುಮೊಂಗ್ ಅವರ ಸಹಭಾಗಿತ್ವದಲ್ಲಿ ಈ ವಿಶೇಷ ಇ-ಬೈಕ್ ತಯಾರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರೀತ್ಪಾಲ್ ಕೌರ್ ಅವರು, ಖುಮಿಂಗ್ ಮತ್ತು ತುಮೊಂಗ್ ಇಬ್ಬರೂ ಅತ್ಯುತ್ತಮ ಮೆಕಾನಿಕ್ ಗಳಾಗಿದ್ದು, ಇಬ್ಬರೂ ನವೋದ್ಯಮಿಗಳು ಬಹಳ ವರ್ಷಗಳಿಂದ ಇ-ಬೈಕ್ ತಯಾರಿಸುವ ಕನಸು ಕಾಣುತ್ತಿದ್ದರು. ಇದೀಗ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ತುಮೊಂಗ್ ಮೊದಲು ಅಡುಗೆ-ಮತ್ತು-ಒಣಗಿಸುವ ಯಂತ್ರ, ತೈಲ ವಿತರಕ ಮತ್ತು ಇತರ ಕಡಿಮೆ-ವೆಚ್ಚದ ಯಂತ್ರಗಳನ್ನು ತಯಾರಿಸುತ್ತಿದ್ದ. ಈತನ ಯಂತ್ರಗಳು ಸ್ಥಳೀಯವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ. ಇದೇ ಕಾರಣಕ್ಕೆ ಪ್ರೀತ್ಪಾಲ್ ಕೌರ್ ಅವರು ತುಮೋಂಗ್ ಮೂಲಕ ಇ-ಬೈಕ್ ತಯಾರಿಗೆ ಮುಂದಾದರು. ಈ ಬಗ್ಗೆ ಖುಷಿಯಿಂದ ಹೇಳುವ ತುಮೊಂಗ್, ಎಸ್‌ಪಿ ಕೌರ್ ಅವರು ತಮ್ಮನ್ನು ಕೆಲವು ತಿಂಗಳ ಹಿಂದೆ ಎಲೆಕ್ಟ್ರಿಕ್ ಬೈಕು ತಯಾರಿಸಬಹುದೇ ಎಂದು ಕೇಳಿದ್ದರು. ಅದಕ್ಕೆ ನಾನು ಹೌದು ಎಂದು ಹೇಳಿದೆ. ಅದಕ್ಕೆ ಅವರು ನೀನೇ ತಯಾರಿಸು ಎಂದು ಹೇಳಿದರು. ಅದಕ್ಕೆ ನಾನು ಪ್ರಯತ್ನ ಮಾಡಬಹುದು. ಆದರೆ ಅದಕ್ಕೆ ಸಹಾಯಕ ಸೇರಿದಂತೆ ಕೆಲ ವಸ್ತುಗಳ ಅಗತ್ಯವಿದೆ ಎಂದರು. ಬಳಿಕ ಕೌರ್ ಅವರು ತುಮೊಂಗ್ ಗೆ ವೆಲ್ಡಿಂಗ್ ಯಂತ್ರವನ್ನು ವ್ಯವಸ್ಥೆಗೊಳಿಸಿದರು. ಅಲ್ಲದೆ ಆತನ ಸಹಾಯಕ್ಕೆ ತನ್ನ ಚಾಲಕನನ್ನು ನಿಯೋಜಿಸಿದರು. ಇದೀಗ ನಮ್ಮ ಶ್ರಮ ಫಲಿಸಿದೆ ಎಂದು ತುಮೊಂಗ್ TNIEಗೆ ತಿಳಿಸಿದರು.

ಅಂತೆಯೇ ಇದೇ ವಿಚಾರವಾಗಿ ಖುಷಿ ಹಂಚಿಕೊಂಡಿರುವ ಖುಮಿಂಗ್ ಅವರು 'ಯೋಜನೆಯ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಎಸ್‌ಪಿ ಮೇಡಂ ನನನ್ನು ಕೆಲಸಕ್ಕೆ ನಿಯೋಜಿಸಿದ ಬಳಿಕ ನಾನು ತುಮೊಂಗ್‌ಗೆ ಸೇರಿಕೊಂಡೆ. ನಾವು ಹೆಚ್ಚಾಗಿ ಸ್ಕ್ರ್ಯಾಪ್ ಅನ್ನು ಬಳಸಿ ವಸ್ತುಗಳನ್ನು ತಯಾರಿಸಿದೆವು. ಯೋಜನೆಯಲ್ಲಿ ಕೆಲಸ ಮಾಡುವುದು ಉತ್ತಮ ಅನುಭವವಾಗಿತ್ತು ಎಂದು ಅವರು ಹೇಳಿದರು.

ಅನಿವಾರ್ಯತೆ ಸೃಷ್ಟಿಸಿದ್ದೇ ಈ ಇ-ಬೈಕ್: ಎಸ್ ಪಿ ಪ್ರೀತ್ಪಾಲ್ ಕೌರ್ 
ಇನ್ನು ದಂತ ವೈದ್ಯೆಯೂ ಆಗಿರುವ ಐಪಿಎಸ್ ಅಧಿಕಾರಿ ಪ್ರೀತ್ಪಾಲ್ ಕೌರ್ ಅವರು ಅನಿವಾರ್ಯತೆ ಸೃಷ್ಟಿಸಿದ್ದೇ ಈ ಇ-ಬೈಕ್. ರಾಜ್ಯದ ವಿಶೇಷ ಕಾರ್ಯದರ್ಶಿ (ಗೃಹ) ಎಸ್‌ಆರ್ ಸರವಣನ್ ಅವರು ನನಗೆ ಮತ್ತು ಇಬ್ಬರು ಆವಿಷ್ಕಾರಕರನ್ನು ಪ್ರೇರೇಪಿಸಿದ್ದಾರೆ. ಜನರ ಕಷ್ಟವನ್ನು ಗಮನಿಸಿ ಎಲೆಕ್ಟ್ರಿಕ್ ಬೈಕ್ ತಯಾರಿಸುವಂತೆ ಕೇಳಿಕೊಂಡಿದ್ದೆ. ದ್ವಿಚಕ್ರ ವಾಹನವನ್ನು ಖರೀದಿಸಲು ರಾಜ್ಯದ ವಾಣಿಜ್ಯ ಕೇಂದ್ರವಾದ ದಿಮಾಪುರ್ ಅಥವಾ ರಾಜ್ಯದ ರಾಜಧಾನಿ ಕೊಹಿಮಾಕ್ಕೆ ಹೋಗಲು ಸ್ಥಳೀಯರು 15-16 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಅವರು ತಮ್ಮ ಸ್ವಂತ ಬೈಕುಗಳನ್ನು ತಯಾರಿಸಬೇಕೆಂದು ನಾನು ಬಯಸಿದ್ದೆ. ಅದರಂತೆ ಅವರು ಇ-ಬೈಕ್ ತಯಾರಿಸಿದ್ದಾರೆ. ಅವರು ಭವಿಷ್ಯದಲ್ಲಿ ತಮ್ಮ ಪ್ರಯೋಗದಲ್ಲಿ ಸುಧಾರಣೆ ಕಾಣುತ್ತಾರೆ. ವಿಷ್ಯದಲ್ಲಿ ಉತ್ತಮ ಮಾದರಿಗಳೊಂದಿಗೆ ಬರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಕೌರ್ ಹೇಳಿದರು.

ನೋಕ್ಲಾಕ್‌ನಲ್ಲಿರುವ ಕೆಲವರು ಸುಂದರವಾದ ಬಂದೂಕುಗಳನ್ನು ತಯಾರಿಸುತ್ತಾರೆ. ಮೊದಲು ಇಲ್ಲಿನ ರೈತರು ದೊಡ್ಡ ಏಲಕ್ಕಿಯನ್ನು ಕಟ್ಟಿಗೆ ಸುಟ್ಟು ಒಣಗಿಸುತ್ತಿದ್ದರೂ ಹೊಗೆ ಬರುತ್ತಿದ್ದು, ಏಲಕ್ಕಿಯ ರುಚಿಯೇ ಮಾಯವಾಗುತ್ತಿತ್ತು. ಇದರಿಂದಾಗಿ ಅದರ ಬೆಲೆ ಕುಸಿಯಲಾರಂಭಿಸಿತು. ನಂತರ, ತುಮೊಂಗ್ ಏಲಕ್ಕಿ ಒಣಗಿಸುವ ಕಡಿಮೆ ವೆಚ್ಚದ ಯಂತ್ರವನ್ನು ನಿರ್ಮಿಸಿದರು ಮತ್ತು ಇದು ಜನರಿಗೆ ಮಹತ್ತರವಾಗಿ ಸಹಾಯ ಮಾಡುತ್ತಿದೆ. ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಿರುದ್ಯೋಗಿಗಳಿಗೆ ಜೀವನೋಪಾಯವನ್ನು ನೀಡುತ್ತಿದೆ. ನೊಕ್ಲಾಕ್ ಹೊರತುಪಡಿಸಿ, ಪಕ್ಕದ ಜಿಲ್ಲೆಗಳಲ್ಲಿ ಅವರಿಗೆ ಮಾರುಕಟ್ಟೆ ಸಿಗುತ್ತಿದೆ ಎಂದು ಕೌರ್ ಹೇಳಿದ್ದಾರೆ.

ನೊಕ್ಲಾಕ್ ಯುವಕರಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದು, ತಯಾರಾದ ಎಲೆಕ್ಟ್ರಿಕ್ ಬೈಕ್ ಎಲ್ಲರಿಗೂ ಪ್ರೇರಣೆ ನೀಡಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT