ಶಿವಮೊಗ್ಗ: ಮುಚ್ಚುವ ಮತ್ತು ಸಮೀಪದ ನಾರಾಯಣಪುರ ಶಾಲೆಯೊಂದಿಗೆ ವಿಲೀನಗೊಳಿಸುವ ಹಂತದಲ್ಲಿದ್ದ ಶಿವಮೊಗ್ಗ ತಾಲ್ಲೂಕಿನ ಹಿಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಾಲಾಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿ (ಎಸ್‌ಡಿಎಂಸಿ) ಸದಸ್ಯರು, ಗ್ರಾಮಸ್ಥರು ಮತ್ತು ಪೋಷಕರ ಪರಿಶ್ರಮದಿಂದ ಉಳಿಸಲಾಗಿದೆ.
ಗ್ರಾಮದ ಪ್ರತಿಯೊಂದು ಮಗುವು ಸರ್ಕಾರಿ ಶಾಲೆ ಸೇರಬೇಕು ಎಂದು ಗ್ರಾಮಸ್ಥರು ಒಟ್ಟಾಗಿ ನಿರ್ಧರಿಸಿದ್ದು, ಖಾಸಗಿ ಶಾಲೆಗಳಿಂದ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡಿ ಈ ಶಾಲೆಗೆ ಸೇರಿಸಿದ್ದಾರೆ. ಸ್ಪೋಕೆನ್ ಇಂಗ್ಲೀಷ್ ಶಿಕ್ಷಕರನ್ನು ಕೂಡಾ ನೇಮಿಸಿದ್ದಾರೆ. ಗ್ರಾಮಸ್ಥರ ಸಾಂಘಿಕ ಹಿತಾಸಕ್ತಿಯಿಂದ ಮುಚ್ಚುವ ಹಂತದಲ್ಲಿದ್ದ ಹಿಟ್ಟೂರು ಗ್ರಾಮದ ಸರ್ಕಾರಿ ಶಾಲೆ ಉಳಿದಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹಿಟ್ಟೂರು ಗ್ರಾಮದ ನಿವಾಸಿ ರಾಜು, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲು 35-40 ವಿದ್ಯಾರ್ಥಿಗಳಿದ್ದರು. ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಪ್ರಭಾವದಿಂದ ಹಳ್ಳಿಯ ಪೋಷಕರು ತಮ್ಮ ಮಕ್ಕಳು ಆಂಗ್ಲ ಮಾಧ್ಯಮದ ಕಲಿಕೆಯ ವಾತಾವರಣದಲ್ಲಿ ಕಲಿತು ಬೆಳೆಯಲಿ ಎಂಬ ಹಂಬಲದಿಂದ ಖಾಸಗಿ ಶಾಲೆಗಳಿಗೆ ಕಳುಹಿಸತೊಡಗಿದರು. ಇದರೊಂದಿಗೆ ಗ್ರಾಮದಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾತಿ ಹೆಚ್ಚಿದ್ದು, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 12ಕ್ಕಿಂತ ಕಡಿಮೆಯಾಗಿದೆ. ಸರ್ಕಾರದ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳ ಸಂಖ್ಯೆ 12 ಕ್ಕಿಂತ ಕಡಿಮೆಯಾದರೆ, ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಬೇಕು. ಅದರಂತೆ ಬಿಇಒ ಶಾಲೆಯನ್ನು ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸುವಂತೆ ಸೂಚಿಸಿದರು. ಹಾಗಾಗಿ ಶಾಲೆ ಉಳಿಸಲು ಪೋಷಕರ ಮನವೊಲಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪ್ರಯತ್ನಿಸಲಾಗಿದೆ ಎಂದರು.
''40 ಸಾವಿರ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಬದಲು ಸರ್ಕಾರಿ ಶಾಲೆಗಳಲ್ಲಿ ಸುಮಾರು 10 ಸಾವಿರ ರೂ.ಗೆ ಸಮವಸ್ತ್ರ, ಶೂ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಬೆಳಗ್ಗೆ 7 ಗಂಟೆಗೆ ಶಾಲೆಗೆ ಕಳುಹಿಸುವ ಬದಲು ಪೋಷಕರು 9 ಗಂಟೆಯೊಳಗೆ ಅವರನ್ನು ಕಳುಹಿಸಬಹುದು ಮತ್ತು ಅದೇ ಗ್ರಾಮದ ಜನರ ಮುಂದೆ ಕಲಿಯುತ್ತಾರೆ, ಪ್ರಸ್ತುತ ಜಗತ್ತಿಗೆ ಸ್ಪರ್ಧಿಸಲು ಇಂಗ್ಲಿಷ್ ಶಿಕ್ಷಕರನ್ನು ಪೋಷಕರು ತಾವೇ ಹಣ ಪಾವತಿ ಮೂಲಕ ನೇಮಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಗ್ರಾಮದ ಮಕ್ಕಳು ಖಾಸಗಿ ಶಾಲೆಗೆ ಹೋಗದಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಹೀಗಾಗಿ ಪ್ರಸ್ತುತ ಹಿಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 26 ವಿದ್ಯಾರ್ಥಿಗಳಿದ್ದಾರೆ ಎಂದು ಅವರು ತಿಳಿಸಿದರು.
ಎಸ್ ಡಿಎಂಸಿ ಅಧ್ಯಕ್ಷ ಹೆಚ್.ಎಂ. ನಾಗರಾಜ್ ಮಾತನಾಡಿ, ಈ ಹಿಂದೆ ಕೇವಲ ಇಬ್ಬರು ಶಿಕ್ಷಕರಿದ್ದರು. ಗ್ರಾಮಸ್ಥರು ಹಾಗೂ ಎಸ್ ಡಿಎಂಸಿ ಸಮಿತಿ ಸದ್ಯಸ್ಯರು ತಾವೇ ಪಾವತಿ ಮಾಡುವ ಮೂಲಕ ಸ್ಪೋಕೆನ್ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಲಾಗಿದೆ. ಇದರೊಂದಿಗೆ ಪ್ರಸ್ತುತ ಶಾಲೆಯಲ್ಲಿ ನಾಲ್ವರು ಶಿಕ್ಷಕರಿದ್ದಾರೆ ಎಂದು ಹೇಳಿದರು. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದಂತೆ ಎಸ್ ಡಿಎಂಸಿ ಸದಸ್ಯರು ಮನವೊಲಿಸುವ ಮೂಲಕ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆ ಉಳಿಸಿದ್ದಾರೆ.ಕಲಿಕೆಗೆ ಸಂಬಂಧಿಸಿದಂತೆ ಮಕ್ಕಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬರುತ್ತಿದೆ ಎಂದು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ತಿಳಿಸಿದರು.
ಸರ್ಕಾರಿ ಶಾಲೆ ಉಳಿಸಲು ಗ್ರಾಮಸ್ಥರು ಮತ್ತು ಎಸ್ ಡಿಎಂಸಿ ಸದಸ್ಯರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಮೆಚ್ಚುವಂತಹದ್ದು, ಈ ಹೋರಾಟ ಹಳ್ಳಿಗಳಲ್ಲಿ ಸರ್ಕಾರಿ ಶಾಲೆ ಉಳಿಸುವುದಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾದ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಿಇಒ ರಮೇಶ್ ಹೇಳಿದರು.