ಗದಗ: ಇಲ್ಲೊಬ್ಬ ಶಾಸಕರು ವೈದ್ಯ ಹಾಗೂ ಶಿಕ್ಷಕರೂ ಆಗಿದ್ದು, ಇದು ಗದಗಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಜನರಿಗೆ ವರದಾನವಾಗಿ ಪರಿಣಮಿಸಿದೆ.
ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವೈದ್ಯರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾಸಕ ಚಂದ್ರು ಲಮಾಣಿ ಅವರು ಕ್ಷೇತ್ರದ ಜನರಿಗೆ ಔಷಧಿಗಳನ್ನಷ್ಟೇ ಅಲ್ಲದೆ, ಶಿಕ್ಷಣದ ಅಗತ್ಯತೆಗಳನ್ನೂ ತಿಳಿಸುತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ಲಮಾಣಿ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಬೋಧನೆ ನೀಡುತ್ತಿದ್ದಾರೆ. ಲಕ್ಷ್ಮೇಶ್ವರದಲ್ಲಿ, ಲಮಾಣಿ ಅಭಿಮಾನಿಗಳ ಕ್ಲಬ್‌ನಿಂದ 2025-26 ಶೈಕ್ಷಣಿಕ ವರ್ಷಕ್ಕೆ (ಕನ್ನಡ ಮಾಧ್ಯಮ) ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಎರಡು ತಿಂಗಳ ಕಾಲ ಉಚಿತ ಶಿಬಿರವನ್ನು ನಡೆಸಲಾಯಿತು.
ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಈ ಉಚಿತ ತರಗತಿಗಳಿಗೆ ಹಾಜರಾಗುತ್ತಿದ್ದು, ಈ ವರ್ಷ 300 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮುಖ್ಯವಾಗಿ ಹಾವೇರಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ವಿದ್ಯಾರ್ಥಿಗಳು ಈ ತರಗತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿರುವುದು ಕಂಡು ಬಂದಿದೆ,
ಲಮಾಣಿ ಅವರು 2023 ರಲ್ಲಿ ಬಿಜೆಪಿ ಟಿಕೆಟ್ ಮೂಲಕ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಗೆಲುವಿನ ಬಳಿಕ ವೈದ್ಯಕೀಯ ಅಭ್ಯಾಸ ಮಾಡುವುದನ್ನು ನಿಲ್ಲಿಸಿದರು. ಆದರೆ, ಉಚಿತ ಬೋಧನಾ ತರಗತಿಗಳನ್ನು ಮಾತ್ರ ನಿಲ್ಲಿಸಲಿಲ್ಲ. ತಾವು ನಡೆಸುವ ಈ ತರಗತಿಗಳಿಗೆ ತಹಶೀಲ್ದಾರ್‌ಗಳು, ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು ಮತ್ತು ಇತರ ಅಧಿಕಾರಿಗಳಿಗೆ ಆಹ್ವಾನ ನೀಡಿ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡುವಂತೆ ಮಾಡುತ್ತಿದ್ದಾರೆ.
ಇದಲ್ಲದೆ ಕೋವಿಡ್-19 ಸಮಯದಲ್ಲಿ ಕ್ಷೇತ್ರದ ಜನರಿಗೆ ವೈದ್ಯಕೀಯ ಚಿಕಿತ್ಸೆಗಳನ್ನೂ ನೀಡಿದ್ದು, ಸಾಕಷ್ಟು ಮಂದಿಯ ಜೀವ ಉಳಿಸಿ, ಮನ ಗೆದ್ದಿದ್ದಾರೆ.
ಶಿಕ್ಷಣವು ಸಮಾಜದ ಕಾಯಿಲೆಗಳಿಗೆ ಅತ್ಯುತ್ತಮ ಔಷಧವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದೇನೆ. ಗದಗ, ಧಾರವಾಡ ಮತ್ತು ಬೆಂಗಳೂರಿನ ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ಕಾರಣ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಕೋಚಿಂಗ್ ಕೇಂದ್ರಗಳ ಅವಶ್ಯಕತೆಯಿದೆ. ಅಂತಹವರಿಗಾಗಿ ನಾವು ಉಚಿತ ಕೋಚಿಂಗ್ ಕೇಂದ್ರಗಳನ್ನು ಪ್ರಾರಂಭಿಸಿದೆವು. ಇಲ್ಲಿ ತರಬೇತಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆಂದು ಲಮಾಣಿಯವರು ಹೇಳಿದ್ದಾರೆ.
ಲಮಾಣಿಯವರು ಶಾಸಕರಾಗಿರುವ ಕಾರಣ ತಮ್ಮ ಬಿಡುವಿನ ಸಮಯದಲ್ಲಿ ಕೋಚಿಂಗ್ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ಈ ವೇಳೆ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಯಾವ ರೀತಿ ಉತ್ತರ ಬರೆಯಬೇಕು, ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಮತ್ತು ಪರೀಕ್ಷೆಗಳ ಸಮಯದಲ್ಲಿ ಸಮಯ ನಿರ್ವಹಣೆಯ ಕಲೆಯ ಕುರಿತಂತೆಯೂ ಮಾಹಿತಿ ನೀಡುತ್ತಾರೆ.
ತರಗತಿಗಳಿಗೆ ಹಾಜರಾದ ವಿದ್ಯಾರ್ಥಿ ರಾಮಕುಮಾರ್ ಪೂಜಾರ್ ಎಂಬುವವರು ಮಾತನಾಡಿ, ನಾನು ಲಕ್ಷ್ಮೇಶ್ವರದ ಗ್ರಾಮೀಣ ಭಾಗದ ವಿದ್ಯಾರ್ಥಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ದೂರದ ಸ್ಥಳಗಳಿಗೆ ಹೋಗಿ ವಿಶೇಷ ತರಬೇತಿ ತರಗತಿಗಳನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಿಲ್ಲ. ಧಾರವಾಡ ಮತ್ತು ಇತರ ಸ್ಥಳಗಳಿಂದ ಶಿಕ್ಷಕರನ್ನು ವ್ಯವಸ್ಥೆ ಮಾಡಿದ್ದಕ್ಕಾಗಿ ನಾವು ಡಾ. ಚಂದ್ರು ಅವರಿಗೆ ಕೃತಜ್ಞರಾಗಿರುತ್ತೇವೆ. ನಾವು ಪದೇ ಪದೇ ಅನುಮಾನಗಳನ್ನು ಕೇಳಿದರೂ ಅವರು ನಮಗೆ ತಾಳ್ಮೆಯಿಂದ ಕಲಿಸುತ್ತಾರೆಂದು ಹೇಳಿದರು.
ಲಮಾಣಿ ಅಭಿಮಾನಿಗಳ ಸಂಘವು ನಮಗೆಲ್ಲರಿಗೂ ಉಚಿತ ತರಗತಿಗಳನ್ನು ನಡೆಸುತ್ತಿದ್ದು, ನಾವು ಅದೃಷ್ಟವಂತರೇ ಸರಿ. ಇಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಶಾಸಕರೇ ಉತ್ತಮ ಶಿಕ್ಷಕರು. ಅವರು ನಮಗೆ ಪಾಠ ಮಾಡಿದರೆ, ಮತ್ತೆ ಓದುವ ಅಗತ್ಯವೇ ಎದುರಾಗುವುದಿಲ್ಲ, ಈ ಬಾರಿಯ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ಪಡೆಯಲು ನಮಗೆ ಸಹಾಯ ಮಾಡುತ್ತಿರುವ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆಂದು ತಿಳಿಸಿದ್ದಾರೆ.
ಲಮಾಣಿ ಅಭಿಮಾನಿ ಸಂಘದ ಅಧ್ಯಕ್ಷ ನವೀನ್ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ವಿಜಯ ಮೆಕ್ಕಿ ಮತ್ತು ಕೆ ಆರ್ ಲಮಾಣಿ ಇವರ ಪರಿಶ್ರಮದಿಂದ ಉಚಿತ ತರಗತಿಗಳು ನಡೆಯುತ್ತಿದ್ದು, ಕ್ಷೇತ್ರದ ಇತರೆ ವಿದ್ಯಾರ್ಥಿಗಳು ಈ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.