ಹಸಿರು ಕಣಜದಲ್ಲಿ ಕಣ್ಣೀರಿನ ಕಥೆ: ಕೋನಸೀಮಾ ರೈತರಿಂದ ಮತ್ತೊಮ್ಮೆ ಬೆಳೆ ರಜೆ ಘೋಷಣೆ! Online Desk
ವಿಶೇಷ

ಅಕ್ಕಿಯ ಕಣಜದಲ್ಲಿ ಬೆಳೆ ರಜೆಯ ಕೂಗು: ಅನ್ನಪೂರ್ಣ ಗೋದಾವರಿ ಡೆಲ್ಟಾದಲ್ಲಿ ಭತ್ತದ ಗದ್ದೆಗಳನ್ನು ನುಂಗುತ್ತಿರುವ ಜಲಕೃಷಿ!

ಹಸಿರು ಕಣಜದಲ್ಲಿ ಕಣ್ಣೀರಿನ ಕಥೆ: ದಕ್ಷಿಣದ ಭಾರತದ ಅನ್ನಪೂರ್ಣೆ ಗೋದಾವರಿ ಡೆಲ್ಟಾದಲ್ಲಿ ಭತ್ತದ ಗದ್ದೆಗಳನ್ನು ನುಂಗುತ್ತಿರುವ ಜಲಕೃಷಿ. 2026ರ ಮುಂಗಾರಿನಲ್ಲಿ ಭತ್ತ ಬೆಳೆಯದಿರಲು ನಿರ್ಧಾರಿಸಿದ ರೈತರಿಂದ ಮತ್ತೊಮ್ಮೆ ಬೆಳೆ ರಜೆ ಘೋಷಣೆ! ಇಲ್ಲಿದೆ ಅಕ್ಕಿಯ ಕಣಜದ ಬೆಳೆ ರಜೆಯ ಒಳನೋಟ:

Godavari Delta Rice Crisis: ಒಂದು ಕಾಲದಲ್ಲಿ ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತಿದ್ದ ಗೋದಾವರಿ ತೀರದ ಭತ್ತದ ಗದ್ದೆಗಳು ಇಂದು ಬರಡಾಗುವ ಆತಂಕದಲ್ಲಿವೆ. ದಕ್ಷಿಣ ಭಾರತದ ಅನ್ನಪೂರ್ಣ ಎಂದು ಕರೆಸಿಕೊಂಡಿದ್ದ, ಲಕ್ಷಾಂತರ ಜನರ ಹಸಿವು ನೀಗಿಸಿದ್ದ ಆಂಧ್ರಪ್ರದೇಶದ ಈ ಅಕ್ಕಿಯ ಕಣಜದಲ್ಲಿ ಈಗ ಅನ್ನದಾತರೇ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಸರ್ ಆರ್ಥರ್ ಕಾಟನ್ ಕಟ್ಟಿದ ಬ್ಯಾರೇಜ್‌ನಿಂದಾಗಿ ಹಚ್ಚಹಸಿರಾಗಿದ್ದ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಮತ್ತು ಕೋನಸೀಮಾದ ಫಲವತ್ತಾದ ಭೂಮಿ ಇಂದು ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿದೆ. ಮಣ್ಣಿನ ಫಲವತ್ತತೆ ಇದ್ದರೂ, ನೀರಿದ್ದರೂ ಭತ್ತ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ಬೆಳೆಯಲು ಮಾಡುವ ಖರ್ಚು ಕೈಗೆ ಬರದಿರುವುದು, ಹೂಳು ತುಂಬಿ ಮುಚ್ಚಿಹೋಗಿರುವ ಕಾಲುವೆಗಳು, ಗದ್ದೆಗಳಿಗೆ ನುಗ್ಗುತ್ತಿರುವ ಸಮುದ್ರದ ಉಪ್ಪುನೀರು ಮತ್ತು ಕೃಷಿ ಭೂಮಿಯನ್ನು ಆಕ್ರಮಿಸುತ್ತಿರುವ ಮೀನು-ಸಿಗಡಿ ಸಾಕಣೆ ಹೊಂಡಗಳು ರೈತರ ಬದುಕನ್ನು ದುಸ್ತರಗೊಳಿಸಿವೆ. ಈ ಎಲ್ಲಾ ಸಂಕಷ್ಟಗಳಿಂದ ಬೇಸತ್ತ ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ರೈತರು 2026ರ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯದಿರಲು ನಿರ್ಧರಿಸಿ ಮತ್ತೊಮ್ಮೆ 'ಬೆಳೆ ರಜೆ' (ಕ್ರಾಪ್ ಹಾಲಿಡೇ) ಘೋಷಿಸಿದ್ದಾರೆ. ದೇಶಕ್ಕೆ ಅನ್ನ ನೀಡುತ್ತಿದ್ದ ಕೈಗಳೇ ಇಂದು ಕೃಷಿಯಿಂದ ವಿಮುಖವಾಗುತ್ತಿರುವುದು ಯಾಕೆ? ಗೋದಾವರಿ ಡೆಲ್ಟಾದ ಈ ಬಿಕ್ಕಟ್ಟಿನ ಆಳ-ಅಗಲಗಳೇನು ಎಂಬುದರ ಕುರಿತ ವಿವರ ಇಲ್ಲಿದೆ:

ಕೋನಸೀಮಾದಲ್ಲಿ ರೈತರು ಬೆಳೆ ರಜೆ ಘೋಷಿಸಿದ್ಯಾಕೆ?

ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಅಲ್ಲವರಂ ಮಂಡಲದ ತಾಡಿಕೋನ ಗ್ರಾಮದ ಭತ್ತದ ರೈತರು 2026ರ ಖರೀಫ್ ಋತುವಿನಲ್ಲಿ 210 ಎಕರೆಗಳಲ್ಲಿ ಬೆಳೆ ರಜೆಯನ್ನು ಘೋಷಿಸಿದ್ದಾರೆ. ಪೀಕಲೇರು ನೀರಾವರಿ ಕಾಲುವೆಯ ದೀರ್ಘಕಾಲದ ನಿರ್ಲಕ್ಷ್ಯವನ್ನು ಪ್ರತಿಭಟಿಸಲು ಅವರು ಈ ನಿರ್ಧಾರವನ್ನು ಕೈಗೊಂಡರು. ರೈತರ ಪ್ರಕಾರ, ಒತ್ತುವರಿಗಳು ಮತ್ತು ಅಸಮರ್ಪಕ ಹೂಳು ತೆಗೆಯುವಿಕೆಯಿಂದಾಗಿ ಕಾಲುವೆಯು ತೀವ್ರವಾಗಿ ಮುಚ್ಚಿಹೋಗಿದೆ. ಕಳಪೆ ಒಳಚರಂಡಿ ನಿರ್ವಹಣೆಯು ಕೃಷಿ ಕ್ಷೇತ್ರಗಳಲ್ಲಿ ನೀರು ನಿಲ್ಲುವಿಕೆಗೆ ಕಾರಣವಾಗಿದ್ದು, ಭತ್ತದ ಕೃಷಿಯನ್ನು ಕಷ್ಟಕರವಾಗಿಸಿದೆ. ಇದರೊಂದಿಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜಲಚರ ಸಾಕಣೆ ಘಟಕಗಳ ಬಗ್ಗೆಯೂ ರೈತರು ಚಿಂತಿತರಾಗಿದ್ದಾರೆ. ಈ ಫಾರ್ಮ್‌ಗಳಿಂದ ಉಪ್ಪುನೀರು ಕೃಷಿ ಕ್ಷೇತ್ರಗಳಿಗೆ ಪ್ರವೇಶಿಸಿ ನಿಂತಿರುವ ಭತ್ತದ ಬೆಳೆಗಳನ್ನು ಹಾನಿಗೊಳಿಸಬಹುದು ಎಂದು ಅವರು ಭಯಪಡುತ್ತಾರೆ. ಏತನ್ಮಧ್ಯೆ, ರೈತರ ಪ್ರತಿಭಟನೆಯ ನಂತರ, ಜಿಲ್ಲಾಧಿಕಾರಿ ಆರ್. ಮಹೇಶ್ ಕುಮಾರ್ ಅವರು ಪೀಡಿತ ಪ್ರದೇಶಗಳನ್ನು ಪರಿಶೀಲಿಸಲು ಅಧಿಕಾರಿಗಳ ತಂಡವನ್ನು ನಿಯೋಜಿಸಿದರು. ರೈತರ ಬೇಡಿಕೆಗಳನ್ನು, ವಿಶೇಷವಾಗಿ ಕಾಲುವೆಯನ್ನು ಅಗಲಗೊಳಿಸುವುದು ಮತ್ತು ಸಂಪೂರ್ಣ ಹೂಳು ತೆಗೆಯುವುದನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಆದರೆ, ಸಮಸ್ಯೆಯು ತಾಡಿಕೋನಕ್ಕೆ ಮಾತ್ರ ಸೀಮಿತವಾಗಿಲ್ಲ. ಗೋದಾವರಿ ಡೆಲ್ಟಾದ ತುದಿ ಭಾಗದಲ್ಲಿರುವ ಕರಾವಳಿ ಪ್ರದೇಶಗಳ ಕೃಷಿ ಭೂಮಿಗಳು ಹೆಚ್ಚುವರಿ ಮಳೆನೀರು ಮತ್ತು ಪ್ರವಾಹದ ನೀರನ್ನು ಹರಿಸುವಲ್ಲಿ ಆಗಾಗ್ಗೆ ತೊಂದರೆಗಳನ್ನು ಎದುರಿಸುತ್ತವೆ.

ಅವರು ಈ ಹಿಂದೆಯೂ ಇಂತಹ ಪ್ರತಿಭಟನೆಯ ಮಾರ್ಗವನ್ನು ಅನುಸರಿಸಿದ್ದರೇ?

ಕಳೆದ 15 ವರ್ಷಗಳಲ್ಲಿ ಬೆಳೆ ರಜೆಯ ಸಮಸ್ಯೆಯು ಪದೇ ಪದೇ ಕಾಣಿಸಿಕೊಂಡಿದೆ. 2011, 2016, 2021-22 ಮತ್ತು 2026ರಲ್ಲಿ ಪ್ರಮುಖ ಪ್ರತಿಭಟನೆಗಳು ವರದಿಯಾಗಿವೆ. ಅದರಲ್ಲೂ, 2011ರಲ್ಲಿ ಅತ್ಯಂತ ದೊಡ್ಡ ಮಟ್ಟದ ಬೆಳೆ ರಜೆ ಘೋಷಿಸಲಾಗಿತ್ತು; ಆ ಸಮಯದಲ್ಲಿ ಗೋದಾವರಿ ಪ್ರದೇಶದಲ್ಲಿ ಸುಮಾರು 85,761 ಎಕರೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸಾಗುವಳಿ ಮಾಡದೆ ಬಿಡಲಾಗಿತ್ತು. 2016ರಲ್ಲಿ ಐದು ಗ್ರಾಮಗಳ ಸುಮಾರು 5,000 ಎಕರೆ ಪ್ರದೇಶವು ಬೆಳೆ ರಜೆಯ ಭೀತಿಯನ್ನು ಎದುರಿಸಿತ್ತು. 2021ರಲ್ಲಿ ನೀರು ಹರಿದುಹೋಗುವ ಸಮಸ್ಯೆಯಿಂದ ಸುಮಾರು 800 ಎಕರೆ ಪ್ರದೇಶಕ್ಕೆ ತೊಂದರೆಯಾಗಿತ್ತು. 2022ರಲ್ಲಿ ಕೋನಸೀಮಾದ ಕೆಲವು ಭಾಗಗಳ ರೈತರು ಮತ್ತೆ ಬೆಳೆ ರಜೆಯ ಬೇಡಿಕೆಯನ್ನು ಮುಂದಿಟ್ಟಿದ್ದರು.

ಹಾಗಾದ್ರೆ, ಈ ಬಾರಿ ಸರ್ಕಾರದ ಪ್ರತಿಕ್ರಿಯೆ ಏನಾಗಿದೆ?

ಸಮಸ್ಯೆಯ ಗಂಭೀರತೆಯನ್ನು ಅರಿತಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಇತ್ತೀಚೆಗೆ ಪಶ್ಚಿಮ ಗೋದಾವರಿಯ ನರಸಾಪುರಂ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋದಾವರಿ ಡೆಲ್ಟಾದಾದ್ಯಂತ ಇಡೀ ಒಳಚರಂಡಿ ಜಾಲವನ್ನು ಸುಧಾರಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. ಈ ಉದ್ದೇಶಕ್ಕಾಗಿ ಸರ್ಕಾರವು 3,000 ಕೋಟಿ ರೂಪಾಯಿಗಳನ್ನು ಮೀಸಲಿಡಲು ಪ್ರಸ್ತಾಪಿಸಿದೆ. ಈ ಹಿಂದೆ, 2011ರ ಗೋದಾವರಿ ಡೆಲ್ಟಾ ಬೆಳೆ ರಜೆಗೆ ಪ್ರತಿಕ್ರಿಯಿಸಿದ್ದ ಸರ್ಕಾರವು ಮಾಜಿ ಮುಖ್ಯ ಕಾರ್ಯದರ್ಶಿ ಮೋಹನ್ ಕಂದಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತ್ತು. ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಅಂಗೀಕರಿಸಿದ್ದ ಸರ್ಕಾರವು, ಕಾಲುವೆ ಮತ್ತು ಒಳಚರಂಡಿ ಆಧುನೀಕರಣ, ಏಪ್ರಿಲ್ 15ರಿಂದ ಮೇ 15ರವರೆಗೆ ವಾರ್ಷಿಕ ಕಾಲುವೆ ಸ್ಥಗಿತ, ಸುಧಾರಿತ ಭತ್ತ ಖರೀದಿ ವ್ಯವಸ್ಥೆ, ಹೆಚ್ಚುವರಿ ಶೇಖರಣಾ ಸೌಲಭ್ಯಗಳು ಮತ್ತು ಕೇಂದ್ರದಿಂದ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ (MSP) ಪಡೆಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿತ್ತು. ಆದಾಗ್ಯೂ, ಹಲವು ಶಿಫಾರಸುಗಳು ಸರಿಯಾಗಿ ಜಾರಿಯಾಗಲಿಲ್ಲ; 2022ರ ಬೆಳೆ ರಜೆಯ ಸಮಯದಲ್ಲೂ ರೈತರು ಇದೇ ರೀತಿಯ ಸಮಸ್ಯೆಗಳನ್ನು ಎತ್ತಿದ್ದರು. ಅಂದಿನಿಂದ ಈ ಸಮಸ್ಯೆ ನಿರಂತರವಾಗಿ ಮುಂದುವರೆದಿದೆ.

ಗೋದಾವರಿ ಡೆಲ್ಟಾ ನೀರಾವರಿ ವ್ಯವಸ್ಥೆ ಎಷ್ಟು ಮುಖ್ಯವಾಗಿದೆ?

ಧವಳೇಶ್ವರಂನಲ್ಲಿರುವ ಸರ್ ಆರ್ಥರ್ ಕಾಟನ್ ಬ್ಯಾರೇಜ್ ಗೋದಾವರಿ ಡೆಲ್ಟಾದ ನೀರಾವರಿಯ ಮುಖ್ಯ ಮೂಲವಾಗಿದೆ. ಇದರ ಕಾಲುವೆ ಜಾಲವು ಹಿಂದಿನ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಸುಮಾರು 10.13 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಈ ನೀರಾವರಿ ವ್ಯವಸ್ಥೆಯು ಮೂರು ಮುಖ್ಯ ಕಾಲುವೆ ಜಾಲಗಳನ್ನು ಹೊಂದಿದೆ:

  • ಪೂರ್ವ ಡೆಲ್ಟಾ: 2.76 ಲಕ್ಷ ಎಕರೆ.

  • ಮಧ್ಯ ಡೆಲ್ಟಾ: 2.04 ಲಕ್ಷ ಎಕರೆ.

  • ಪಶ್ಚಿಮ ಡೆಲ್ಟಾ: 5.20 ಲಕ್ಷ ಎಕರೆ.

ಒಟ್ಟಾರೆಯಾಗಿ, ಈ ಕಾಲುವೆಗಳು ಸುಮಾರು 10.13 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತವೆ ಮತ್ತು ದೊಡ್ಡ ಪ್ರಮಾಣದ ಭತ್ತದ ಕೃಷಿಗೆ ಬೆನ್ನೆಲುಬಾಗಿವೆ.

ಭೂ ಬಳಕೆಯ ವಿಧಾನ ಹೇಗೆ ಬದಲಾಗುತ್ತಿದೆ?

ಹೆಚ್ಚಿನ ಪ್ರಮಾಣದ ಭತ್ತದ ಗದ್ದೆಗಳನ್ನು ಜಲಕೃಷಿ ಹೊಂಡಗಳಾಗಿ ಪರಿವರ್ತಿಸಲಾಗುತ್ತಿದೆ ಮತ್ತು ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ. 2025ರ ಕರಾವಳಿ ಜಲಕೃಷಿ ಪ್ರಾಧಿಕಾರದ ನೋಂದಣಿ ಮಾಹಿತಿಯ ಪ್ರಕಾರ, ನೋಂದಾಯಿತ ಕರಾವಳಿ ಜಲಕೃಷಿ ಪ್ರದೇಶಗಳು ಹೀಗಿವೆ:

  • ಪಶ್ಚಿಮ ಗೋದಾವರಿ: 0.051 ಲಕ್ಷ ಎಕರೆ.

  • ಕೋನಸೀಮಾ: 0.126 ಲಕ್ಷ ಎಕರೆ.

  • ಕಾಕಿನಾಡ: 0.043 ಲಕ್ಷ ಎಕರೆ.

ಈ ನೋಂದಾಯಿತ ಅಂಕಿಅಂಶಗಳು ವಾಸ್ತವದಲ್ಲಿ ಜಲಕೃಷಿಗೆ ಬಳಕೆಯಾಗುತ್ತಿರುವ ಪ್ರದೇಶದ ಸ್ಥಳೀಯ ಅಂದಾಜಿಗಿಂತ ಬಹಳ ಕಡಿಮೆಯಿವೆ. ಸ್ಥಳೀಯ ಅಂದಾಜಿನ ಪ್ರಕಾರ, ಹಿಂದಿನ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸುಮಾರು 90,000 ಎಕರೆ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 1.50 ಲಕ್ಷ ಎಕರೆ ಪ್ರದೇಶವನ್ನು ಜಲಕೃಷಿಗೆ ಬಳಸಲಾಗುತ್ತಿದೆ. ಜೊತೆಗೆ, ಪಶ್ಚಿಮ ಗೋದಾವರಿ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಯ ಅಂಕಿಅಂಶಗಳು ಸಹ ಈ ಬದಲಾವಣೆಯ ವ್ಯಾಪ್ತಿಯನ್ನು ತೋರಿಸುತ್ತವೆ. 2016 ಮತ್ತು 2020ರ ನಡುವೆ, ಜಲಕೃಷಿ ಹೊಂಡಗಳು 3,988 ಹೆಕ್ಟೇರ್‌ಗಳಷ್ಟು (ಅಂದರೆ ಸುಮಾರು 9,854 ಎಕರೆ) ವಿಸ್ತರಣೆಯಾಗಿವೆ. ಇದೇ ಅವಧಿಯಲ್ಲಿ, ಕೃಷಿ ಭೂಮಿಯನ್ನು ಜಲಕೃಷಿ ತೋಟಗಳು ಮತ್ತು ನಗರ ಪ್ರದೇಶಗಳಾಗಿ ಪರಿವರ್ತಿಸಿದ ಕಾರಣ ಒಟ್ಟು ಬೆಳೆ ಪ್ರದೇಶವು 10,848 ಹೆಕ್ಟೇರ್‌ಗಳಷ್ಟು ಕಡಿಮೆಯಾಗಿದೆ.

ನೀರಾವರಿ ಮತ್ತು ಒಳಚರಂಡಿ ಸೌಲಭ್ಯಗಳು ಏಕೆ ಹದಗೆಡುತ್ತಿವೆ?

ಗೋದಾವರಿ ಡೆಲ್ಟಾದ ನೀರಾವರಿ ಮತ್ತು ಒಳಚರಂಡಿ ವ್ಯವಸ್ಥೆಗಳು ವರ್ಷಗಳ ಕಾಲದ ಅಸಮರ್ಪಕ ನಿರ್ವಹಣೆ, ಹೂಳು ತೆಗೆಯುವಲ್ಲಿನ ವಿಳಂಬ ಮತ್ತು ಆಧುನೀಕರಣಕ್ಕೆ ಸಾಕಷ್ಟು ಹೂಡಿಕೆ ಇಲ್ಲದಿರುವುದರಿಂದ ಹದಗೆಟ್ಟಿವೆ. ಇವುಗಳ ಅವನತಿಗೆ ಹಲವಾರು ಸಮಸ್ಯೆಗಳು ಕಾರಣವಾಗಿವೆ:

  • ಹೂಳು ಶೇಖರಣೆ ಮತ್ತು ಒತ್ತುವರಿ: ಅನೇಕ ಕಾಲುವೆಗಳು ಮತ್ತು ಚರಂಡಿಗಳು ಸಂಗ್ರಹವಾದ ಹೂಳು, ದಟ್ಟವಾದ ಸಸ್ಯವರ್ಗ ಮತ್ತು ಅಕ್ರಮ ಒತ್ತುವರಿಗಳಿಂದ ಮುಚ್ಚಿಹೋಗಿವೆ. ಇದು ನೀರಾವರಿ ನೀರಿನ ಹರಿವಿಗೆ ಅಡ್ಡಿಪಡಿಸುತ್ತದೆ ಮತ್ತು ಕೃಷಿ ಭೂಮಿಯಿಂದ ಹೆಚ್ಚುವರಿ ನೀರು ಹೊರಹೋಗುವುದನ್ನು ತಡೆಯುತ್ತದೆ.

  • ನೈಸರ್ಗಿಕ ನೀರಿನ ಹರಿವಿನ ಮಾರ್ಗದಲ್ಲಿ ಬದಲಾವಣೆ: ವಾಣಿಜ್ಯ ಜಲಕೃಷಿ ಹೊಂಡಗಳ ವಿಸ್ತರಣೆಯು ವಿಶೇಷವಾಗಿ ತಗ್ಗು ಪ್ರದೇಶದ ಕರಾವಳಿ ಭಾಗಗಳಲ್ಲಿ ನೈಸರ್ಗಿಕ ನೀರು ಹರಿದುಹೋಗುವ ಮಾರ್ಗಗಳನ್ನು ಬದಲಾಯಿಸಿದೆ. ಇದರಿಂದ ಮಳೆನೀರು ಮತ್ತು ಪ್ರವಾಹದ ನೀರು ಹರಿದುಹೋಗುವುದು ಕಷ್ಟಕರವಾಗಿದೆ.

  • ಉಪ್ಪುನೀರಿನ ಒಳನುಗ್ಗುವಿಕೆ: ಸಮುದ್ರದ ಉಬ್ಬರವಿಳಿತ ಮತ್ತು ನೀರಿನ ಸೋರಿಕೆಯಿಂದಾಗಿ ಕೃಷಿ ಭೂಮಿಗೆ ಉಪ್ಪುನೀರು ಪ್ರವೇಶಿಸುವ ಅಪಾಯ ಕೋನಸೀಮಾದ ಕೊನೆಯ ಭಾಗದ ರೈತರಿಗೆ ಹೆಚ್ಚಾಗಿದೆ. ಇದು ಮಣ್ಣಿನ ಗುಣಮಟ್ಟ ಮತ್ತು ಭತ್ತದ ಕೃಷಿಗೆ ಬೆದರಿಕೆಯೊಡ್ಡಿದೆ.

  • ಭಾರಿ ಮಳೆ ಮತ್ತು ಪ್ರವಾಹ: ಅನಿರೀಕ್ಷಿತ ಮಳೆ ಮತ್ತು ಆಗಾಗ್ಗೆ ಸಂಭವಿಸುವ ಪ್ರವಾಹಗಳು ಈಗಾಗಲೇ ಹಳೆಯದಾಗಿರುವ ನೀರಾವರಿ ಮತ್ತು ಒಳಚರಂಡಿ ಜಾಲದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿವೆ. ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಲ್ಲಿನ ವಿಳಂಬದ ಬಗ್ಗೆಯೂ ರೈತರು ದೂರುತ್ತಾರೆ. ಪರಿಣಾಮವಾಗಿ, ನೀರಾವರಿ ನೀರಿನ ಪೂರೈಕೆ ಮತ್ತು ಹೆಚ್ಚುವರಿ ನೀರಿನ ಹೊರಹರಿವು ಎರಡಕ್ಕೂ ತೊಂದರೆಯಾಗಿದೆ.

ಭತ್ತದ ಕೃಷಿ ಇನ್ನೂ ಆರ್ಥಿಕವಾಗಿ ಲಾಭದಾಯಕವಾಗಿದೆಯೇ?

ಗೋದಾವರಿ ಡೆಲ್ಟಾದಲ್ಲಿ ಭತ್ತದ ಕೃಷಿಗೆ ಗಣನೀಯ ವೆಚ್ಚ ತಗುಲುತ್ತದೆ, ಆದರೆ ಕೃಷಿ ವೆಚ್ಚವನ್ನು ಕಳೆದ ನಂತರ ರೈತರು ಗಳಿಸುವ ಆದಾಯ ತುಲನಾತ್ಮಕವಾಗಿ ಕಡಿಮೆಯಿರುತ್ತದೆ. ಕೃಷಿ ಅಧಿಕಾರಿಗಳು ಮತ್ತು ಸ್ಥಳೀಯ ರೈತರ ಪ್ರಕಾರ, ಸಾಂಪ್ರದಾಯಿಕ ಭತ್ತದ ಕೃಷಿಯ ಸರಾಸರಿ ವೆಚ್ಚ ಎಕರೆಗೆ ಸುಮಾರು 35,000 ದಿಂದ 40,000 ರೂಪಾಯಿಗಳಷ್ಟಿದೆ. ಈ ವೆಚ್ಚದಲ್ಲಿ ಕೃಷಿ ಕಾರ್ಮಿಕರ ಕೂಲಿಯೇ ಸಿಂಹಪಾಲು ಹೊಂದಿದೆ. ಎಕರೆಗೆ ಸರಾಸರಿ 25 ರಿಂದ 30 ಕ್ವಿಂಟಾಲ್ ಇಳುವರಿ ಬರುತ್ತದೆ. ಚಾಲ್ತಿಯಲ್ಲಿರುವ ಖರೀದಿ ಬೆಲೆಯಲ್ಲಿ, ಕೃಷಿ ವೆಚ್ಚವನ್ನು ಕಳೆದ ನಂತರ ರೈತರು ಸಾಮಾನ್ಯವಾಗಿ ಎಕರೆಗೆ ಸುಮಾರು 10,000 ದಿಂದ 20,000 ರೂಪಾಯಿಗಳ ನಿವ್ವಳ ಆದಾಯವನ್ನು ಗಳಿಸುತ್ತಾರೆ. ಗೇಣಿ ರೈತರ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಕೃಷಿ ವೆಚ್ಚದ ಜೊತೆಗೆ, ಅವರು ಭೂಮಾಲೀಕರಿಗೆ ನಿಗದಿತ ಗೇಣಿ ಬಾಡಿಗೆಯನ್ನು ಸಹ ಪಾವತಿಸಬೇಕಾಗುತ್ತದೆ. ಇದು ಅವರ ಗಳಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಬೆಳೆ ಹಾನಿಯಾದಾಗ ಅಥವಾ ಇಳುವರಿ ಕುಸಿದಾಗ ನಷ್ಟದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ, ಗೋದಾವರಿ ಡೆಲ್ಟಾ ಫಲವತ್ತಾದ ಕೃಷಿ ಭೂಮಿ ಮತ್ತು ಹೆಚ್ಚಿನ ಭತ್ತದ ಉತ್ಪಾದನೆಗೆ ಹೆಸರುವಾಸಿಯಾಗಿದ್ದರೂ, ಹೆಚ್ಚುತ್ತಿರುವ ವೆಚ್ಚ ಮತ್ತು ಸೀಮಿತ ಆದಾಯದಿಂದಾಗಿ ಕೃಷಿಯು ಆಕರ್ಷಣೆ ಕಳೆದುಕೊಳ್ಳುತ್ತಿದೆ.

ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ (MSP) ಎಷ್ಟಿದೆ, ಮತ್ತು ಖರೀದಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

2026–27ರ ಖಾರಿಫ್ ಮಾರುಕಟ್ಟೆ ಹಂಗಾಮಿಗೆ, ಸಾಮಾನ್ಯ ಭತ್ತದ ತಳಿಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಪ್ರತಿ ಕ್ವಿಂಟಾಲ್‌ಗೆ 2,441 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಾಲ್‌ಗೆ 72 ರೂಪಾಯಿಗಳ ಹೆಚ್ಚಳವಾಗಿದೆ. ಭತ್ತ ಖರೀದಿ ಪಾವತಿಯನ್ನು ವೇಗಗೊಳಿಸಲು ಸರ್ಕಾರವು ಸರಳೀಕೃತ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸಹ ಜಾರಿಗೆ ತಂದಿದೆ. ಈ ವ್ಯವಸ್ಥೆಯಡಿ, 24 ಗಂಟೆಗಳ ಒಳಗಾಗಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಸಕಾಲಿಕ ಖರೀದಿ ಮತ್ತು ಪಾವತಿಯು ಬಹಳ ಮುಖ್ಯವಾಗಿದೆ; ಏಕೆಂದರೆ ಇದು ರೈತರಿಗೆ ತಮ್ಮ ಕೃಷಿ ವೆಚ್ಚವನ್ನು ಮರಳಿ ಪಡೆಯಲು ಮತ್ತು ಕೊಯ್ಲಿನ ನಂತರದ ಆರ್ಥಿಕ ಸಂಕಷ್ಟಗಳಿಂದ ಪಾರಾಗಲು ಸಹಾಯ ಮಾಡುತ್ತದೆ. ಆದಾಗ್ಯೂ, ಕೃಷಿ ವೆಚ್ಚಗಳು, ಕೂಲಿ ವೆಚ್ಚಗಳು ಮತ್ತು ಗೇಣಿ ಬಾಡಿಗೆಗಳು ನಿರಂತರವಾಗಿ ಏರುತ್ತಿರುವಾಗ, ಕೇವಲ ಎಂಎಸ್‌ಪಿ (MSP) ಹೆಚ್ಚಳದಿಂದ ಮಾತ್ರ ರೈತರ ಆದಾಯವನ್ನು ಸುಧಾರಿಸಲು ಸಾಧ್ಯವಾಗದಿರಬಹುದು.

ಜಲಕೃಷಿಯ (ಅಕ್ವಾಕಲ್ಚರ್) ಬೆಳವಣಿಗೆಯು ಗೋದಾವರಿ ಡೆಲ್ಟಾವನ್ನು ಹೇಗೆ ಬದಲಾಯಿಸುತ್ತಿದೆ?

ಕಳೆದ ಮೂರು ದಶಕಗಳಲ್ಲಿ ಜಲಕೃಷಿಯ ವಿಸ್ತರಣೆಯು ಗೋದಾವರಿ ಡೆಲ್ಟಾದ ಕೃಷಿ ಚಿತ್ರಣದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಆಂಧ್ರ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಉಪಗ್ರಹ ಆಧಾರಿತ ಭೂ-ಬಳಕೆ ಅಧ್ಯಯನಗಳು 1996 ಮತ್ತು 2016ರ ನಡುವೆ ಕೃಷಿ ಭೂಮಿಯಲ್ಲಿ ತೀವ್ರ ಕುಸಿತವಾಗಿರುವುದನ್ನು ತೋರಿಸುತ್ತವೆ. ಈ ಅವಧಿಯಲ್ಲಿ:

  • ಕೃಷಿ ಭೂಮಿ: 462.6 ಚದರ ಕಿ.ಮೀ (46,260 ಹೆಕ್ಟೇರ್) ನಿಂದ 213 ಚದರ ಕಿ.ಮೀ (21,320 ಹೆಕ್ಟೇರ್) ಗೆ ಇಳಿಕೆಯಾಗಿದೆ.

  • ಜಲಕೃಷಿ ಮತ್ತು ಜಲಮೂಲಗಳ ಅಡಿಯಲ್ಲಿರುವ ಭೂಮಿ: 164.6 ಚದರ ಕಿ.ಮೀ (16,440 ಹೆಕ್ಟೇರ್) ನಿಂದ 418.6 ಚದರ ಕಿ.ಮೀ (41,820 ಹೆಕ್ಟೇರ್) ಗೆ ಹೆಚ್ಚಾಗಿದೆ. ಈ ಅಂಕಿಅಂಶಗಳ ಪ್ರಕಾರ, ಸುಮಾರು 62,850 ಎಕರೆ ಭೂಮಿಯನ್ನು ಜಲಕೃಷಿಗೆ ಪರಿವರ್ತಿಸಲಾಗಿದ್ದು, ಸರಿಸುಮಾರು 61,680 ಎಕರೆ ಕೃಷಿ ಭೂಮಿಯನ್ನು ಕಳೆದುಕೊಳ್ಳಲಾಗಿದೆ. ಜಲಕೃಷಿ, ವಿಶೇಷವಾಗಿ ಸಿಗಡಿ ಸಾಕಣೆಯು ಸೂಕ್ತ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತದೆ. ಇದು ಅನೇಕ ಭೂಮಾಲೀಕರನ್ನು ಭತ್ತದ ಕೃಷಿಯಿಂದ ಮೀನು ಮತ್ತು ಸಿಗಡಿ ಸಾಕಣೆಯತ್ತ ಮುಖ ಮಾಡಲು ಪ್ರೋತ್ಸಾಹಿಸಿದೆ. ಆದಾಗ್ಯೂ, ಕೃಷಿ ಭೂಮಿಯ ದೊಡ್ಡ ಪ್ರಮಾಣದ ಪರಿವರ್ತನೆಯು ಭತ್ತದ ಕೃಷಿಯ ಭವಿಷ್ಯ, ಕೃಷಿ ಭೂಮಿಯ ಲಭ್ಯತೆ ಮತ್ತು ಡೆಲ್ಟಾದ ಕೃಷಿ ಆರ್ಥಿಕತೆಯ ದೀರ್ಘಕಾಲೀನ ಸುಸ್ಥಿರತೆಯ ಬಗ್ಗೆ ಆತಂಕಗಳನ್ನು ಹುಟ್ಟುಹಾಕಿದೆ.

ಅಕ್ಕಿ ಗಿರಣಿ (ರೈಸ್ ಮಿಲ್) ಮಾಲೀಕರು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ?

ಗೋದಾವರಿ ಪ್ರದೇಶದ ಅಕ್ಕಿ ಗಿರಣಿ ಮಾಲೀಕರು ಸಹ ಹೆಚ್ಚುತ್ತಿರುವ ಆರ್ಥಿಕ ಮತ್ತು ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಭತ್ತದ ಖರೀದಿ ಬೆಲೆಗಳು, ಏರುತ್ತಿರುವ ವಿದ್ಯುತ್ ದರಗಳು, ಹೆಚ್ಚಾದ ಕಾರ್ಮಿಕರ ವೇತನ ಮತ್ತು ದುಬಾರಿಯಾದ ಸಾರಿಗೆ ವೆಚ್ಚಗಳಿಂದಾಗಿ ಅಕ್ಕಿ ಗಿರಣಿಗಳನ್ನು ನಡೆಸುವ ವೆಚ್ಚ ಹೆಚ್ಚಾಗಿದೆ. ಈ ಏರುತ್ತಿರುವ ವೆಚ್ಚಗಳು ಅವರ ಲಾಭದ ಪ್ರಮಾಣವನ್ನು ಕಡಿಮೆ ಮಾಡಿವೆ. ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ, ಕಸ್ಟಮ್-ಮಿಲ್ಡ್ ರೈಸ್ (CMR - ಸರ್ಕಾರಿ ಹಂಚಿಕೆಗಾಗಿ ಗಿರಣಿಗಳಲ್ಲಿ ಸಂಸ್ಕರಿಸಿದ ಅಕ್ಕಿ) ಸಾಗಣೆ ಮತ್ತು ವಿಲೇವಾರಿಯಲ್ಲಿನ ವಿಳಂಬ. ಸರ್ಕಾರವು ಈ ಅಕ್ಕಿಯನ್ನು ಸಮಯಕ್ಕೆ ಸರಿಯಾಗಿ ಸಾಗಿಸದಿದ್ದಾಗ ಅಥವಾ ವಿಲೇವಾರಿ ಮಾಡದಿದ್ದಾಗ, ಗಿರಣಿ ಮಾಲೀಕರ ಚಾಲ್ತಿ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ಅವರಿಗೆ ಹೊಸದಾಗಿ ಭತ್ತವನ್ನು ಖರೀದಿಸಲು ಮತ್ತು ಕಾಲೋಚಿತ ನಿರ್ವಹಣಾ ವೆಚ್ಚಗಳನ್ನು ಭರಿಸಲು ಹಣದ ಕೊರತೆ ಉಂಟಾಗುತ್ತದೆ. ಅನಿರೀಕ್ಷಿತ ಭತ್ತದ ಆವಕವು (ಪೂರೈಕೆ) ಸಹ ಗಿರಣಿ ಮಾಲೀಕರಿಗೆ ತಮ್ಮ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಯೋಜಿಸಲು ಕಷ್ಟಕರವಾಗಿಸಿದೆ. ಒಟ್ಟಾರೆಯಾಗಿ, ಈ ಸಮಸ್ಯೆಗಳು ಅಕ್ಕಿ ಗಿರಣಿ ಉದ್ಯಮದ ಮೇಲೆ ಒತ್ತಡ ಹೇರುತ್ತಿವೆ.

ಗೇಣಿ ರೈತರು ಮತ್ತು ಕೃಷಿ ಕಾರ್ಮಿಕರ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ?

ಗೋದಾವರಿ ಪ್ರದೇಶದ ಕೃಷಿ ಕಾರ್ಮಿಕ ವರ್ಗದಲ್ಲಿ ಗೇಣಿ ರೈತರು ದೊಡ್ಡ ಪಾಲನ್ನು ಹೊಂದಿದ್ದಾರೆ. ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಹಿಂದಿನ ಗೋದಾವರಿ ಜಿಲ್ಲೆಗಳಲ್ಲಿ ಅವರ ಸಂಖ್ಯೆ ಹೀಗಿದೆ:

  • ಹಿಂದಿನ ಪೂರ್ವ ಗೋದಾವರಿ: 2,43,742.

  • ಅವಿಭಜಿತ ಪಶ್ಚಿಮ ಗೋದಾವರಿ: 3,55,716.

ಒಟ್ಟು ಸಂಖ್ಯೆ: 5,99,458 ಗೇಣಿ ರೈತರು. ಈ ರೈತರು ಹಲವಾರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರು ಭೂಮಾಲೀಕರಿಗೆ ನಿಗದಿತ ಗೇಣಿ ಬಾಡಿಗೆಯನ್ನು ಪಾವತಿಸಬೇಕು ಮತ್ತು ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು, ಕೂಲಿ ಹಾಗೂ ಇತರ ಕೃಷಿ ಪರಿಕರಗಳ ಹೆಚ್ಚುತ್ತಿರುವ ವೆಚ್ಚವನ್ನು ಭರಿಸಬೇಕು. ಸಾಂಸ್ಥಿಕ ಸಾಲದ (ಬ್ಯಾಂಕ್ ಸಾಲ) ಲಭ್ಯತೆಯು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಅಧಿಕೃತ ಬ್ಯಾಂಕ್ ಸಾಲಗಳನ್ನು ಹೆಚ್ಚಾಗಿ ಭೂಮಾಲೀಕರಿಗೆ ನೀಡಲಾಗುತ್ತದೆ; ಇದರಿಂದ ಗೇಣಿ ರೈತರಿಗೆ ಕೈಗೆಟುಕುವ ದರದಲ್ಲಿ ಸಾಲ ಸಿಗುವುದು ಕಷ್ಟವಾಗಿದೆ. ಪರಿಣಾಮವಾಗಿ, ಅನೇಕ ಗೇಣಿ ರೈತರು ಖಾಸಗಿ ಲೇವಾದೇವಿದಾರರನ್ನು ಅವಲಂಬಿಸಬೇಕಾಗುತ್ತದೆ ಮತ್ತು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯಬೇಕಾಗುತ್ತದೆ. ಕೃಷಿ ಕಾರ್ಮಿಕರು ಸಹ ಹೆಚ್ಚುತ್ತಿರುವ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಯಾಂತ್ರೀಕರಣವು ಅನೇಕ ಕೃಷಿ ಕೆಲಸಗಳಲ್ಲಿ ಮಾನವ ಶ್ರಮದ ಅಗತ್ಯವನ್ನು ಕಡಿಮೆ ಮಾಡಿದೆ. ಇದರ ಜೊತೆಗೆ, ಭತ್ತದ ಗದ್ದೆಗಳನ್ನು ಜಲಕೃಷಿ ಹೊಂಡಗಳಾಗಿ ಪರಿವರ್ತಿಸಿರುವುದರಿಂದ ಕೃಷಿ ಉದ್ಯೋಗಕ್ಕೆ ಲಭ್ಯವಿರುವ ಪ್ರದೇಶವೂ ಕಡಿಮೆಯಾಗಿದೆ. ಪರಿಣಾಮವಾಗಿ, ಕಾರ್ಮಿಕರಿಗೆ ಕೃಷಿ ಕೆಲಸದ ದಿನಗಳು ಕಡಿಮೆಯಾಗುತ್ತಿವೆ, ಆದರೆ ದಿನಗೂಲಿ ಮಾತ್ರ ಬಹುತೇಕ ಸ್ಥಿರವಾಗಿದೆ. ಇದು ಆದಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಜಲಕೃಷಿ ಮತ್ತು ಪರ್ಯಾಯ ಬೆಳೆಗಳು ಭತ್ತದ ಕೃಷಿಗೆ ಬದಲಿಯಾಗಬಲ್ಲವೇ?

ಗೋದಾವರಿ ಡೆಲ್ಟಾದ ಸೂಕ್ತ ಪ್ರದೇಶಗಳಲ್ಲಿ ಜಲಕೃಷಿ (ವಿಶೇಷವಾಗಿ ಸಿಗಡಿ ಸಾಕಣೆ) ಮತ್ತು ತೋಟಗಾರಿಕೆ ಬೆಳೆಗಳು ಹೆಚ್ಚಿನ ಆದಾಯವನ್ನು ನೀಡಬಲ್ಲವು. ಆದಾಗ್ಯೂ, ಈ ಚಟುವಟಿಕೆಗಳು ಭತ್ತದ ಕೃಷಿಗೆ ಪೂರಕವಾಗಿರಬಹುದೇ ಹೊರತು, ಅದನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ. ಆಹಾರ ಉತ್ಪಾದನೆ ಮತ್ತು ಆಹಾರ ಭದ್ರತೆಯಲ್ಲಿ ಈ ಪ್ರದೇಶದ ಪಾತ್ರದಿಂದಾಗಿ ಭತ್ತವು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೆ, ಎಲ್ಲಾ ಕೃಷಿ ಭೂಮಿಗಳು ಜಲಕೃಷಿ ಅಥವಾ ಪರ್ಯಾಯ ಬೆಳೆಗಳಿಗೆ ಸೂಕ್ತವಾಗಿರುವುದಿಲ್ಲ. ಸ್ಥಳೀಯ ಮಣ್ಣಿನ ಗುಣಮಟ್ಟ, ನೀರಿನ ಲಭ್ಯತೆ ಮತ್ತು ಪರಿಸರ ಅಂಶಗಳು ಸಹ ಯಾವ ಬೆಳೆ ಅಥವಾ ಚಟುವಟಿಕೆಯನ್ನು ಅಳವಡಿಸಿಕೊಳ್ಳಬಹುದು ಎಂಬುದರ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ, ಗೋದಾವರಿ ಡೆಲ್ಟಾದ ಭವಿಷ್ಯವು ಸಂಪೂರ್ಣವಾಗಿ ಜಲಕೃಷಿಯ ವಿಸ್ತರಣೆಯ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ಭತ್ತದ ಕೃಷಿ, ಪರ್ಯಾಯ ಬೆಳೆಗಳು ಮತ್ತು ಇತರ ಸೂಕ್ತ ಕೃಷಿ ಚಟುವಟಿಕೆಗಳ ನಡುವೆ ಸಮತೋಲನದ ಅಗತ್ಯವಿದೆ.

ಗೋದಾವರಿ ಡೆಲ್ಟಾದಲ್ಲಿ ಕೃಷಿಯನ್ನು ರಕ್ಷಿಸಲು ಯಾವ ಕ್ರಮಗಳ ಅಗತ್ಯವಿದೆ?

ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರವು ಈ ಪ್ರದೇಶದ ಮೂಲಸೌಕರ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರೈತ ಸಂಘಟನೆಗಳು ಮತ್ತು ನೀತಿ ತಜ್ಞರು ನಂಬಿದ್ದಾರೆ. ಪ್ರಮುಖ ಕ್ರಮಗಳು ಹೀಗಿವೆ:

  • ನೀರಾವರಿ ಮತ್ತು ಒಳಚರಂಡಿ ವ್ಯವಸ್ಥೆಗಳ ಆಧುನೀಕರಣ: ಸರ್ಕಾರವು ಅಸ್ತಿತ್ವದಲ್ಲಿರುವ ಕಾಲುವೆ ಮತ್ತು ಒಳಚರಂಡಿ ಜಾಲಗಳನ್ನು ದುರಸ್ತಿ ಮಾಡಿ ಆಧುನೀಕರಿಸಬೇಕು. ನೀರಿನ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಮತ್ತು ಸಕಾಲದಲ್ಲಿ ಹೂಳು ತೆಗೆಯಬೇಕು.

  • ವಿಶ್ವಾಸಾರ್ಹ ನೀರಾವರಿ ಮತ್ತು ಖರೀದಿ ವ್ಯವಸ್ಥೆ: ರೈತರಿಗೆ ನೀರಾವರಿ ನೀರಿನ ನಿರಂತರ ಪೂರೈಕೆ ಸಿಗಬೇಕು. ಭತ್ತ ಖರೀದಿಯು ಸಮಯಕ್ಕೆ ಸರಿಯಾಗಿ ನಡೆಯಬೇಕು ಮತ್ತು ಯಾವುದೇ ವಿಳಂಬವಿಲ್ಲದೆ ರೈತರಿಗೆ ಹಣ ತಲುಪಬೇಕು.

  • ಗೇಣಿ ರೈತರ ರಕ್ಷಣೆ: ಗೇಣಿ ರೈತರಿಗೆ ಸಾಂಸ್ಥಿಕ ಸಾಲ, ಸರ್ಕಾರಿ ಬೆಂಬಲ ಮತ್ತು ಕಾನೂನು ರಕ್ಷಣೆ ಉತ್ತಮವಾಗಿ ಸಿಗುವಂತಾಗಬೇಕು. ಕೃಷಿ ನೀತಿಗಳಲ್ಲಿ ಅವರ ಆರ್ಥಿಕ ಮತ್ತು ಕೃಷಿ ಅಗತ್ಯಗಳನ್ನು ಗುರುತಿಸಬೇಕು.

  • ಕೃಷಿ ವೆಚ್ಚಗಳಿಗೆ ಬೆಂಬಲ: ಕೃಷಿ ಪರಿಕರಗಳ ಮೇಲೆ ಉದ್ದೇಶಿತ ಸಬ್ಸಿಡಿಗಳನ್ನು ನೀಡುವುದು ಮತ್ತು ಕೈಗೆಟುಕುವ ದರದಲ್ಲಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸುವುದು ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ಜಲಕೃಷಿ ವಿಸ್ತರಣೆಗೆ ನಿಯಂತ್ರಣ: ಕೃಷಿ ಭೂಮಿಯನ್ನು ಜಲಕೃಷಿ ಹೊಂಡಗಳಾಗಿ ಪರಿವರ್ತಿಸುವುದನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು; ವಿಶೇಷವಾಗಿ ಇಂತಹ ಪರಿವರ್ತನೆಗಳು ನೈಸರ್ಗಿಕ ನೀರಿನ ಹರಿವಿನ ವ್ಯವಸ್ಥೆ ಮತ್ತು ಕೃಷಿ ಭೂಮಿಯ ದೀರ್ಘಕಾಲೀನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಕಡೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ರೈತರ ಜೀವನೋಪಾಯವನ್ನು ರಕ್ಷಿಸಲು ಮತ್ತು ಗೋದಾವರಿ ಡೆಲ್ಟಾದ ಕೃಷಿ ಮಹತ್ವವನ್ನು ಕಾಪಾಡಿಕೊಳ್ಳಲು ಈ ಕ್ರಮಗಳು ಅತ್ಯಗತ್ಯವಾಗಿವೆ.

ಕೃಷಿ ಭೂಮಿ ಕಡಿಮೆಯಾದರೂ ಭತ್ತದ ಉತ್ಪಾದನೆ ಹೇಗೆ ಬದಲಾಗಿದೆ?

ಗೋದಾವರಿ ಡೆಲ್ಟಾದ ಒಂದು ಕುತೂಹಲಕಾರಿ ಅಂಶವೆಂದರೆ, ಸಾಗುವಳಿ ಪ್ರದೇಶ ಕಡಿಮೆಯಾಗಿದ್ದರೂ, ವರ್ಷಗಳಿಂದ ಭತ್ತದ ಉತ್ಪಾದನೆಯು ಬಲವಾಗಿಯೇ ಉಳಿದಿದೆ. ಹಿಂದಿನ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಉತ್ಪಾದನಾ ಅಂಕಿಅಂಶಗಳು ಈ ಪ್ರವೃತ್ತಿಯನ್ನು ತೋರಿಸುತ್ತವೆ:

  • 2010–11ರಲ್ಲಿ: ಪೂರ್ವ ಗೋದಾವರಿಯಲ್ಲಿ ಸುಮಾರು 13.07 ಲಕ್ಷ ಟನ್ ಮತ್ತು ಪಶ್ಚಿಮ ಗೋದಾವರಿಯಲ್ಲಿ ಸುಮಾರು 14.90 ಲಕ್ಷ ಟನ್ ಭತ್ತ ಉತ್ಪಾದನೆಯಾಗಿತ್ತು.

  • 2016–17ರಲ್ಲಿ: ಪ್ರತಿ ಜಿಲ್ಲೆಯಲ್ಲಿ ಭತ್ತದ ಉತ್ಪಾದನೆಯು ಸುಮಾರು 25 ಲಕ್ಷ ಟನ್‌ಗಳಿಗೆ ಏರಿಕೆಯಾಯಿತು.

  • 2025–26ರ ಖಾರಿಫ್ ಹಂಗಾಮಿನಲ್ಲಿ: ಹಿಂದಿನ ಪೂರ್ವ ಗೋದಾವರಿಯಲ್ಲಿ 15.94 ಲಕ್ಷ ಟನ್ ಮತ್ತು ಹಿಂದಿನ ಪಶ್ಚಿಮ ಗೋದಾವರಿಯಲ್ಲಿ 12.04 ಲಕ್ಷ ಟನ್ ಭತ್ತ ಉತ್ಪಾದನೆಯಾಗಿದೆ. ಒಟ್ಟು ಉತ್ಪಾದನೆಯು 27.98 ಲಕ್ಷ ಟನ್‌ಗಳಷ್ಟಿತ್ತು. ಕೃಷಿ ಭೂಮಿ ಕಡಿಮೆಯಾದ ಹೊರತಾಗಿಯೂ, ಈ ಪ್ರದೇಶವು ಆಂಧ್ರಪ್ರದೇಶದ ಭತ್ತದ ಉತ್ಪಾದನೆಗೆ ಗಣನೀಯ ಕೊಡುಗೆ ನೀಡುವುದನ್ನು ಮುಂದುವರೆಸಿದೆ ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತವೆ.

ಇದಕ್ಕೆ ಕಾರಣಗಳೇನು?

ಸಾಗುವಳಿ ಭೂಮಿ ಕಡಿಮೆಯಾದರೂ ಭತ್ತದ ಉತ್ಪಾದನೆ ಹೆಚ್ಚಾಗಲು ಕೃಷಿ ಉತ್ಪಾದಕತೆಯಲ್ಲಿನ ಸುಧಾರಣೆಯೇ ಮುಖ್ಯ ಕಾರಣವಾಗಿದೆ. ಸುಧಾರಿತ ಕೃಷಿ ಪದ್ಧತಿಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಪ್ರತಿ ಎಕರೆಗೆ ಹೆಚ್ಚು ಭತ್ತವನ್ನು ಬೆಳೆಯುತ್ತಿದ್ದಾರೆ. ಪ್ರಮುಖ ಕಾರಣಗಳು ಹೀಗಿವೆ:

  • ಹೆಚ್ಚಿನ ಇಳುವರಿ ನೀಡುವ ಬೀಜದ ತಳಿಗಳು: ಸುಧಾರಿತ ಬೀಜಗಳು ಪ್ರತಿ ಎಕರೆಗೆ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಿವೆ.

  • ಉತ್ತಮ ರಸಗೊಬ್ಬರ ನಿರ್ವಹಣೆ: ರಸಗೊಬ್ಬರಗಳ ಹೆಚ್ಚು ಪರಿಣಾಮಕಾರಿ ಬಳಕೆಯು ಬೆಳೆಯ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಸುಧಾರಿಸಿದೆ.

  • ಕೃಷಿ ಯಾಂತ್ರೀಕರಣ: ಯಂತ್ರೋಪಕರಣಗಳ ಬಳಕೆಯು ಹಲವಾರು ಕೃಷಿ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಿದೆ.

  • ಬಹು ಬೆಳೆ ಪದ್ಧತಿ: ವರ್ಷದಲ್ಲಿ ಒಂದೇ ಭೂಮಿಯಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುವುದರಿಂದ ಲಭ್ಯವಿರುವ ಕೃಷಿ ಪ್ರದೇಶದಿಂದ ಒಟ್ಟು ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಸಾಧ್ಯವಾಗಿದೆ. ಸಾಗುವಳಿ ಪ್ರದೇಶ ಕಡಿಮೆಯಾಗಿದ್ದರೂ ಒಟ್ಟಾರೆ ಭತ್ತದ ಉತ್ಪಾದನೆಯನ್ನು ಕಾಯ್ದುಕೊಳ್ಳಲು ಈ ಸುಧಾರಣೆಗಳು ಸಹಾಯ ಮಾಡಿವೆ.

ಹಾಗಾದ್ರೆ, ಸರ್ಕಾರದ ಪ್ರಸ್ತುತ ಒಳಚರಂಡಿ (ನೀರು ಹರಿದುಹೋಗುವ) ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಿದೆ?

ಇತ್ತೀಚೆಗೆ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಪ್ರದೇಶದ ಎತ್ತರದ ಪ್ರದೇಶಗಳಿಂದ (ಅಪ್‌ಲ್ಯಾಂಡ್) ಹೆಚ್ಚುವರಿ ನೀರನ್ನು ಯನಮದುರ್ರು ಕಾಲುವೆಗೆ ಮತ್ತು ಅಂತಿಮವಾಗಿ ಸಮುದ್ರಕ್ಕೆ ಹರಿಸುವ 'ಯೆರ್ರಾ ಕಾಲುವೆ'ಯನ್ನು ಅಭಿವೃದ್ಧಿಪಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಯೆರ್ರಾ ಕಾಲುವೆ ಮತ್ತು ಯನಮದುರ್ರು ಕಾಲುವೆ ಎರಡರ ನೀರು ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಈಗ ಯೋಜನೆಗಳನ್ನು ರೂಪಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಿ: ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಡಿಕೆಶಿ ಮನವಿ!

ಬಾಂಗ್ಲಾ ಜೊತೆ ಭಾರತ ಸಕಾರಾತ್ಮಕ ಮತ್ತು ರಚನಾತ್ಮಕ ಸಂಬಂಧಗಳನ್ನು ಬಯಸುತ್ತದೆ: ವಿದೇಶಾಂಗ ಸಚಿವಾಲಯ

₹1000 ಕೋಟಿ ಬಾಚಿಕೊಂಡ್ರೆ ಏನು? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ಯಶ್ ನಟನೆಯ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!

PM Modi visit to Mysuru | ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ; ಭಾರತವು ಅನೇಕ ಶ್ರೇಷ್ಠ ಖಗೋಳಶಾಸ್ತ್ರಜ್ಞರ ತವರುಮನೆ- ಮೋದಿ

ಭಾರತದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಜೊತೆಯಾಗಿ ಸಾಗುತ್ತವೆ: ಕಾಸ್ಮೋಸ್- ಮೈಸೂರು ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ!