ಖರ್ಜೂರದ ಹಬ್ಬ 
ವಿಶೇಷ

ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!

ಮೂರು ಸಹೋದರರಲ್ಲಿ ಎರಡನೆಯವರಾದ ದಿವಾಕರ್ ಅವರಿಗೆ ಆರಂಭದಲ್ಲಿ ಕೃಷಿ ಅವರ ಆಯ್ಕೆಯಾಗಿರಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ತಂದೆಯ ಆರೈಕೆಗಾಗಿ ನೆಮ್ಮದಿಯಂತಿದ್ದ ಶಿಕ್ಷಕ ವೃತ್ತಿಗೆ ವಿರಾಮ ನೀಡಬೇಕಾಯಿತು. ಆ ನಿರ್ಧಾರವೇ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ನೆಮ್ಮದಿಯ ಶಿಕ್ಷಕ ವೃತ್ತಿ, ನಗರ ಜೀವನದ ಅವಕಾಶಗಳು... ಇಂತಹ ಬದುಕನ್ನು ತೊರೆದು ಗ್ರಾಮದ ಮಣ್ಣಿನತ್ತ ಮರಳುವ ನಿರ್ಧಾರವನ್ನು ಯಾರಾದರೂ ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ದಿವಾಕರ್ ಚನ್ನಪ್ಪ ಮಾತ್ರ ಈ ಎಲ್ಲವನ್ನೂ ಬದಿಗೊತ್ತಿ ಹಳ್ಳಿಯತ್ತ ಮುಖ ಮಾಡಿದರು. ಇಂದು ಅವರು ಕೈಗೊಂಡ ಅಪರೂಪದ ಕೃಷಿ ಪ್ರಯೋಗ ಇಡೀ ದಕ್ಷಿಣ ಭಾರತದ ಗಮನ ಸೆಳೆಯುವಂತಾಗಿದೆ.

ಮರುಭೂಮಿಯಲ್ಲಿ ಮಾತ್ರ ಬೆಳೆಯಲು ಸಾಧ್ಯ ಎನ್ನಲಾಗುತ್ತಿದ್ದ ಖರ್ಜೂರವನ್ನು ಕರ್ನಾಟಕದ ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಸಿ, ದಕ್ಷಿಣ ಭಾರತದ ಮೊದಲ ಯಶಸ್ವಿ ಸಾವಯವ ಖರ್ಜೂರದ ರೈತ ಎನಿಸಿಕೊಂಡ ಇವರ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ.

ಕಾಡಿನಲ್ಲಿ ಎರಡು ದಾರಿಗಳು ಕವಲೊಡೆದಾಗ, ಕಡಿಮೆ ಜನರು ನಡೆದ ದಾರಿಯನ್ನು ನಾನು ಆರಿಸಿಕೊಂಡೆ. ಅದೇ ನನ್ನ ಬದುಕಿನಲ್ಲಿ ಬದಲಾವಣೆ ತಂದಿತು” ಎಂಬ ರಾಬರ್ಟ್ ಫ್ರಾಸ್ಟ್ ಅವರ ಕವಿತೆಯ ಸಾಲುಗಳು ದಿವಾಕರ್ ಚೆನ್ನಪ್ಪ ಅವರ ಬದುಕಿಗೆ ಅಕ್ಷರಶಃ ಹೊಂದಿಕೊಳ್ಳುತ್ತವೆ.

ಅವರು ಆರಿಸಿಕೊಂಡ ದಾರಿ ಕಡಿಮೆ ಜನರು ನಡೆದಿದ್ದಲ್ಲ; ಯಾರೂ ನಡೆದಿರದ ಹಾದಿಯಾಗಿತ್ತು. ಶಿಕ್ಷಕ ವೃತ್ತಿಯನ್ನು ತೊರೆದು ಕೃಷಿಯತ್ತ ಹೆಜ್ಜೆ ಇಟ್ಟ ಅವರು, ಕರ್ನಾಟಕದಲ್ಲಿ ಖರ್ಜೂರ ಬೆಳೆಯುವ ಮೂಲಕ ಇಂದು ಯಶಸ್ವಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

ಮೂರು ಸಹೋದರರಲ್ಲಿ ಎರಡನೆಯವರಾದ ದಿವಾಕರ್ ಅವರಿಗೆ ಆರಂಭದಲ್ಲಿ ಕೃಷಿ ಅವರ ಆಯ್ಕೆಯಾಗಿರಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ತಂದೆಯ ಆರೈಕೆಗಾಗಿ ನೆಮ್ಮದಿಯಂತಿದ್ದ ಶಿಕ್ಷಕ ವೃತ್ತಿಗೆ ವಿರಾಮ ನೀಡಬೇಕಾಯಿತು. ಆ ನಿರ್ಧಾರವೇ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ದಿವಾಕರ್ ಅವರ ತೋಟದಲ್ಲಿ ತಾಜಾ ಖರ್ಜೂರವನ್ನು ಕೊಯ್ಲು ಮಾಡುತ್ತಿರುವ ಮಹಿಳೆ ಮತ್ತು ಮಗ.

ದಿವಾಕರ್ ಅವರ ತಂದೆ ಚೆನ್ನಪ್ಪ ಅವರು ಮೂವರು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿದ್ದರು. ತಾವೇ ಹೊಲದಲ್ಲಿ ದುಡಿದು ಮಕ್ಕಳನ್ನು ಓದಿಸಿದ್ದ ಅವರು, ಮಕ್ಕಳಲ್ಲಿ ಯಾರೂ ಕೃಷಿ ವೃತ್ತಿಗೆ ಬರಬಾರದು ಎಂಬುದು ಅವರ ಆಶಯವಾಗಿತ್ತು. ಗೌರಿಬಿದನೂರಿನಲ್ಲಿ ಏಳೂವರೆ ಎಕರೆ ಕೃಷಿ ಜಮೀನು ಹೊಂದಿದ್ದರೂ, ಮಕ್ಕಳ ಭವಿಷ್ಯ ಕೃಷಿಯಲ್ಲಿರಬಾರದು ಎಂದು ಬಯಸಿದ್ದರು.

ಬೆಂಗಳೂರಿನ ದೊಡ್ಡಬೇಗೂರಿನಲ್ಲಿದ್ದ ಅವರ ಜಮೀನು ಸರ್ಕಾರಿ ವಸತಿ ಯೋಜನೆಗಾಗಿ ಸ್ವಾಧೀನಕ್ಕೆ ಒಳಪಟ್ಟಿತ್ತು. ಆಸ್ತಿ ಕಳೆದುಕೊಂಡು ಭೂಮಿಯಿಲ್ಲದ ಸ್ಥಿತಿ ಎದುರಾಗಬಹುದು ಎಂಬ ಆತಂಕದಿಂದ, ಸಹೋದರಿ ಮದುವೆಯಾಗಿ ಹೋಗಿದ್ದ ಗೌರಿಬಿದನೂರಿನಲ್ಲೇ ಕೈಗೆಟುಕುವ ಬೆಲೆಗೆ ಕೃಷಿ ಜಮೀನು ಖರೀದಿಸಿದ್ದರು. ಅದೇ ಜಮೀನು ಮುಂದೆ ದಿವಾಕರ್ ಅವರ ವಿಭಿನ್ನ ಪ್ರಯೋಗಕ್ಕೆ ವೇದಿಕೆಯಾಯಿತು.

ಬೆಂಗಳೂರು ವಿಶ್ವವಿದ್ಯಾಲಯದಿಂದ 2000ನೇ ಬ್ಯಾಚ್‌ನಲ್ಲಿ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿವಾಕರ್, ತುಮಕೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

2008ರಲ್ಲಿ ತಂದೆಗೆ ಪಾರ್ಶ್ವವಾಯು ಬಂದಾಗ ಅವರನ್ನು ನೋಡಿಕೊಳ್ಳಲು ಒಂದು ವರ್ಷದ ರಜೆ ಪಡೆದರು. ಹಿರಿಯ ಸಹೋದರ ಅಮೆರಿಕದಲ್ಲಿದ್ದರೆ, ಕಿರಿಯ ಸಹೋದರ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ ತಂದೆಯ ಆರೈಕೆಯ ಜವಾಬ್ದಾರಿಯನ್ನು ದಿವಾಕರ್ ವಹಿಸಿಕೊಂಡರು.

ಆ ಸಂದರ್ಭದಲ್ಲಿ ಮುಂದಿನ ಬದುಕಿನ ಬಗ್ಗೆ ಹಲವು ಆಯ್ಕೆಗಳನ್ನು ಪರಿಶೀಲಿಸಿದ ಅವರು ಕೊನೆಗೆ ಕೃಷಿಯನ್ನೇ ಆಯ್ಕೆ ಮಾಡಿಕೊಂಡರು. “ತಂದೆ ಎಂದಿಗೂ ತಮ್ಮ ಮಕ್ಕಳು ರೈತರಾಗಬೇಕು ಎಂದು ಬಯಸಿರಲಿಲ್ಲ. ಆದರೆ ನನ್ನ ಹಣೆಬರಹ ಕೃಷಿಯಲ್ಲಿತ್ತು” ಎಂಬುದು ದಿವಾಕರ್ ಅವರ ಮಾತು.

ಆರಂಭದಲ್ಲಿ ತಂದೆಯಂತೆ ಜೋಳ ಮತ್ತು ರಾಗಿ ಬೆಳೆಯಲು ಮುಂದಾದರು. ಆದರೆ, ಅದರಿಂದ ಗಳಿಸಿದ್ದು ಕೇವಲ 12 ಸಾವಿರ ರೂಪಾಯಿ. ಬದುಕು ಸಾಗಿಸಲು ವಿಭಿನ್ನವಾದದ್ದೇನಾದರೂ ಮಾಡಬೇಕು ಎಂಬ ಅರಿವು ಆಗ ಮೂಡಿತು. ಇದೇ ಸಂದರ್ಭದಲ್ಲಿ ಹಲವು ವರ್ಷಗಳ ಹಿಂದೆ ಕಂಡಿದ್ದ ಖರ್ಜೂರದ ಸಸಿಗಳ ನೆನಪು ಅವರಲ್ಲಿ ಹೊಸ ಆಲೋಚನೆ ಹುಟ್ಟಿಸಿತು.

1998ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾಗ ಧರ್ಮಪುರಿ ಜಿಲ್ಲೆಯ ವ್ಯಕ್ತಿಯೊಬ್ಬರು ಖರ್ಜೂರದ ಸಸಿಗಳನ್ನು ಮಾರಾಟ ಮಾಡುತ್ತಿದ್ದರು. ಆಗ ದಿವಾಕರ್ ಅದನ್ನು ನಂಬಿರಲಿಲ್ಲ. ರೈತರನ್ನು ಮೋಸಗೊಳಿಸುವ ಪ್ರಯತ್ನ ಇರಬಹುದು ಎಂದುಕೊಂಡಿದ್ದರು. ಆದರೆ, ಕೃಷಿಗೆ ಬಂದ ಬಳಿಕ ಆ ವ್ಯಕ್ತಿಯ ಬಗ್ಗೆ ಹುಡುಕಾಟ ನಡೆಸಿದರು. ಅವರ ಹೆಸರು ನಿಜಾಮುದ್ದೀನ್ ಎಂಬುದು ತಿಳಿದುಬಂತು.

ನಿಜಾಮುದ್ದೀನ್ ಅವರನ್ನು ಭೇಟಿಯಾಗಿ ಅವರ ಖರ್ಜೂರ ತೋಟವನ್ನು ನೋಡಿದ ದಿವಾಕರ್ ಅವರಿಗೆ ಹೊಸ ಭರವಸೆ ಮೂಡಿತು. ಧರ್ಮಪುರಿಯ ಹವಾಮಾನ ಹಾಗೂ ಗೌರಿಬಿದನೂರಿನ ಹವಾಮಾನದಲ್ಲಿ ಸಾಮ್ಯತೆ ಇರುವುದನ್ನು ಗಮನಿಸಿ, ತಮ್ಮ ಜಮೀನಿನಲ್ಲಿ ಖರ್ಜೂರ ಬೆಳೆಯುವ ನಿರ್ಧಾರ ಕೈಗೊಂಡರು.

ಆದರೆ, ಮನೆಯಲ್ಲೇ ಮೊದಲ ವಿರೋಧ ಎದುರಾಯಿತು. ತಾಯಿ ವಿಜಯಾ ಅವರು ಉಳಿತಾಯದ ಹಣವನ್ನು ಕೃಷಿಯಲ್ಲಿ ಹೂಡಿಕೆ ಮಾಡುವುದಕ್ಕೆ ವಿರೋಧಿಸಿದರು. ಒಂದು ಖರ್ಜೂರದ ಸಸಿಗೆ 3,000 ರೂಪಾಯಿ ವೆಚ್ಚವಾಗುತ್ತಿತ್ತು. ತಮ್ಮ ಆರು ಲಕ್ಷ ರೂಪಾಯಿ ಉಳಿತಾಯದಲ್ಲಿ 4.5 ಲಕ್ಷ ರೂಪಾಯಿಯನ್ನು ಖರ್ಚು ಮಾಡಿ 150 ಸಸಿಗಳನ್ನು ಖರೀದಿಸಿದರು. ಸುತ್ತಮುತ್ತಲಿನ ರೈತರು ಕೂಡ ಅವರನ್ನು ಹಾಸ್ಯ ಮಾಡಿದರು. ಖರ್ಜೂರದ ಸಸಿಗಳನ್ನು ನೋಡಿ, “ಹೆಂಡದ ಮರಗಳನ್ನು ನೆಡುತ್ತಿದ್ದಾರೆ” ಎಂದು ಗೇಲಿ ಮಾಡುತ್ತಿದ್ದರು.

ಆರಂಭಿಕ ವರ್ಷಗಳು ಮತ್ತಷ್ಟು ಕಠಿಣವಾಗಿದ್ದವು. 150 ಸಸಿಗಳ ಪೈಕಿ 50 ಮರಗಳು ಮೊದಲ ಕೆಲವು ವರ್ಷಗಳಲ್ಲೇ ನಷ್ಟವಾದವು. ಆದರೂ ದಿವಾಕರ್ ಹಿಂಜರಿಯಲಿಲ್ಲ. ಕೊನೆಗೂ ನಾಲ್ಕು ವರ್ಷಗಳ ಬಳಿಕ ತೋಟದಲ್ಲಿ ಮೊದಲ ಖರ್ಜೂರದ ಫಸಲು ಕೈಗೆ ಬಂತು. ಟೀಕಿಸಿದ್ದವರ ಮಾತುಗಳು ನಿಧಾನವಾಗಿ ಮೆಚ್ಚುಗೆಯಾದಿ ಬದಲಾದವು.

ಆದರೆ. ಹೊಸ ಸಮಸ್ಯೆ ಎದುರಾಯಿತು. ಬೆಳೆದ ಖರ್ಜೂರವನ್ನು ಮಾರಾಟ ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿತು. ನಿಜಾಮುದ್ದೀನ್ ನೀಡಿದ ಕೆಲವು ಸಲಹೆಗಳು ನಿರೀಕ್ಷಿತ ಫಲ ನೀಡಲಿಲ್ಲ. ಆಗ ದಿವಾಕರ್ ತಮ್ಮದೇ ಆದ ಮಾರ್ಗ ಕಂಡುಕೊಂಡರು. ತಮ್ಮ ತೋಟದಲ್ಲೇ ಖರ್ಜೂರ ಉತ್ಸವ ಆಯೋಜಿಸಿ, ಬಂದವರಿಗೆ ಮರದಿಂದಲೇ ಖರ್ಜೂರ ಕೀಳುವ ಅವಕಾಶ ನೀಡಿದರು. ಈ ಪ್ರಯೋಗ ಭರ್ಜರಿ ಯಶಸ್ಸು ಕಂಡಿತು. ಮುಂದೆ ಅದು ಅವರ ತೋಟದ ವಿಶೇಷ ಆಕರ್ಷಣೆಯಾಯಿತು.

ಖರ್ಜೂರ ಕೃಷಿ ಆರಂಭಿಸಿ 12 ವರ್ಷಗಳಾಗಿರುವ ವೇಳೆಗೆ ಗೌರಿಬಿದನೂರಿನ ಅವರ ‘ಮರಳಿ ಮಣ್ಣಿಗೆ’ ಎಂಬ ತೋಟವೇ ಹಲವು ರೈತರಿಗೆ ಪ್ರೇರಣೆಯಾಗಿದೆ. ಆರಂಭದ ದಿನಗಳಲ್ಲಿ ರಸ್ತೆ ಬದಿಯಲ್ಲೂ ಖರ್ಜೂರ ಮಾರಾಟ ಮಾಡುತ್ತಿದ್ದ ದಿವಾಕರ್, ಇಂದು ರಾಜ್ಯದ ವಿವಿಧ ಭಾಗಗಳ ಖರೀದಿದಾರರಿಂದಲೇ ಬೇಡಿಕೆ ಪಡೆಯುತ್ತಿದ್ದಾರೆ.

ಪ್ರತಿ ವರ್ಷ ಖರ್ಜೂರ ಮಾರಾಟದಿಂದ ಕನಿಷ್ಠ 12 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಅದರಲ್ಲಿ ಸುಮಾರು ಎರಡು ಲಕ್ಷ ರೂಪಾಯಿಯನ್ನು ತೋಟದ ನಿರ್ವಹಣೆ ಹಾಗೂ ಇತರ ಖರ್ಚುಗಳಿಗೆ ಮೀಸಲಿಡುತ್ತಾರೆ. ಒಮ್ಮೆ ಹೊಸ ಪ್ರಯೋಗ ಎಂದು ಆರಂಭಿಸಿದ ಕೃಷಿ ಇಂದು ಅವರ ಜೀವನೋಪಾಯದ ಪ್ರಮುಖ ಆಧಾರವಾಗಿದೆ.

ಲಾಲ್‌ಬಾಗ್‌ನಲ್ಲೂ ಗಮನ ಸೆಳೆದ ಖರ್ಜೂರ

ಬೆಂಗಳೂರು ಲಾಲ್‌ಬಾಗ್‌ನಲ್ಲಿ ನಡೆಯುವ ಹೂವು ಮತ್ತು ತೋಟಗಾರಿಕಾ ಪ್ರದರ್ಶನದಲ್ಲಿ ಖರ್ಜೂರದ ಮಳಿಗೆ ಹಾಕಲು ದಿವಾಕರ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ, ಎಲ್ಲಾ ಮಳಿಗೆಗಳು ಭರ್ತಿಯಾಗಿವೆ ಎಂದು ಆರಂಭದಲ್ಲಿ ಅವರಿಗೆ ತಿಳಿಸಲಾಯಿತು. ಆದರೆ, ಅವರು ಮಾರಾಟ ಮಾಡುತ್ತಿದ್ದ ಉತ್ಪನ್ನದ ಬಗ್ಗೆ ತಿಳಿದ ಬಳಿಕ ಅಧಿಕಾರಿಗಳು ಅವರಿಗೆ ಜಾಗ ಕಲ್ಪಿಸಿದರು.

ಮಳಿಗೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಜನರು ಖರ್ಜೂರ ಖರೀದಿಸಲು ಮುಗಿಬಿದ್ದರು. ಒಮ್ಮೆ ಕೆಲವು ಮಂದಿ ಖರ್ಜೂರವನ್ನು ಇಷ್ಟಪಟ್ಟರೂ ಖರೀದಿಸಲು ಅವರ ಬಳಿ ಸಾಕಷ್ಟು ಹಣ ಇರಲಿಲ್ಲ. ಅಪರಿಚಿತರ ಮೇಲೂ ನಂಬಿಕೆ ಇಟ್ಟ ದಿವಾಕರ್, ಖರ್ಜೂರವನ್ನು ತೆಗೆದುಕೊಂಡು ಹೋಗಿ ಬಳಿಕ ತಮ್ಮ ಖಾತೆಗೆ ಹಣ ವರ್ಗಾಯಿಸುವಂತೆ ಹೇಳಿದರು. ಅಚ್ಚರಿಯೆಂದರೆ, ಅದೇ ರಾತ್ರಿ ಹಣ ಅವರ ಖಾತೆಗೆ ಜಮೆಯಾಗಿತ್ತು.

ಮಕ್ಕಳಿಗೆ ಮಣ್ಣಿನ ಬದುಕಿನ ಪಾಠ

‘ಮರಳಿ ಮಣ್ಣಿಗೆ’ ಕೇವಲ ಖರ್ಜೂರ ತೋಟವಲ್ಲ; ಮಕ್ಕಳಿಗೆ ಕೃಷಿ ಮತ್ತು ಗ್ರಾಮೀಣ ಬದುಕಿನ ಪರಿಚಯ ಮಾಡಿಸುವ ಕಲಿಕೆಯ ಸ್ಥಳವೂ ಹೌದು.

ದಿವಾಕರ್ ಪ್ರತಿವರ್ಷ ಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಾರೆ. ಈ ಶಿಬಿರಗಳಲ್ಲಿ ಮಕ್ಕಳು ರೈತರಾಗಿ ಕೆಲಸ ಮಾಡುವ ಅನುಭವ ಪಡೆಯುತ್ತಾರೆ. ಗ್ರಾಮೀಣ ಜೀವನದ ರೀತಿಯನ್ನು ಅರಿಯುವುದರ ಜೊತೆಗೆ ಅಪಾಯ ಎದುರಿಸುವ ಧೈರ್ಯ, ಸಾಹಸ ಮನೋಭಾವ ಹಾಗೂ ಸ್ವಾವಲಂಬನೆಯ ಪಾಠವನ್ನೂ ಕಲಿಯುತ್ತಾರೆ.

ಮಕ್ಕಳೊಂದಿಗೆ ಗ್ರಾಮಗಳಿಗೆ ಕಾಲ್ನಡಿಗೆ ಯಾತ್ರೆಯನ್ನೂ ಆಯೋಜಿಸುತ್ತಾರೆ. ಗ್ರಾಮಸ್ಥರು ಅವರಿಗೆ ಊಟದ ವ್ಯವಸ್ಥೆ ಮಾಡುತ್ತಾರೆ. ನಗರದ ಮಕ್ಕಳಿಗೆ ಮಣ್ಣಿನ ಬದುಕನ್ನು ನೇರವಾಗಿ ಪರಿಚಯಿಸುವ ಈ ಪ್ರಯತ್ನವೂ ‘ಮರಳಿ ಮಣ್ಣಿಗೆ’ ತೋಟದ ವಿಶೇಷತೆಯಾಗಿದೆ.

ವರ್ಷಕ್ಕೊಮ್ಮೆ ಖರ್ಜೂರದ ಹಬ್ಬ

ದಿವಾಕರ್ ಅವರ ತೋಟದಲ್ಲಿ ವರ್ಷಕ್ಕೊಮ್ಮೆ ನಡೆಯುವ ಖರ್ಜೂರ ಉತ್ಸವ ಈಗ ಜನಪ್ರಿಯವಾಗಿದೆ. ನೂರಾರು ಮಂದಿ ಈ ಹಬ್ಬದಲ್ಲಿ ಭಾಗವಹಿಸಲು ತೋಟಕ್ಕೆ ಆಗಮಿಸುತ್ತಾರೆ. ಪ್ರವಾಸಿಗರಿಗೆ ಎತ್ತಿನಗಾಡಿ ಸವಾರಿ, ಊಟ, ನೀರು ಹಾಗೂ ವಿವಿಧ ಉಪಹಾರಗಳ ವ್ಯವಸ್ಥೆ ಮಾಡಲಾಗುತ್ತದೆ. ಸಾವಯವ ಕೃಷಿಕರಿಗೂ ತಮ್ಮ ಉತ್ಪನ್ನಗಳ ಮಳಿಗೆಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ.

ಈ ಉತ್ಸವಕ್ಕಾಗಿ ಪ್ರತಿವರ್ಷ ಸುಮಾರು 40 ಸಾವಿರ ರೂಪಾಯಿಯನ್ನು ಮೀಸಲಿಡುತ್ತಾರೆ. ಒಂದು ಕಾಲದಲ್ಲಿ ಸುತ್ತಮುತ್ತಲಿನವರಿಂದ ಹಾಸ್ಯಕ್ಕೆ ಗುರಿಯಾಗಿದ್ದ ಖರ್ಜೂರದ ಸಸಿಗಳು ಇಂದು ಜನರನ್ನು ತಮ್ಮ ತೋಟದತ್ತ ಸೆಳೆಯುತ್ತಿವೆ.

ಶಿಕ್ಷಕನಾಗಿ ನೆಮ್ಮದಿಯ ಬದುಕು ನಡೆಸಬಹುದಾಗಿದ್ದ ದಿವಾಕರ್, ಪರಿಸ್ಥಿತಿಯ ಒತ್ತಡದಿಂದ ಕೃಷಿಗೆ ಬಂದರು. ಆದರೆ ಕೃಷಿಯಲ್ಲೂ ಎಲ್ಲರೂ ನಡೆದ ಹಾದಿಯನ್ನೇ ಅನುಸರಿಸದೆ, ಯಾರೂ ಪ್ರಯತ್ನಿಸದ ಬೆಳೆ ಆಯ್ಕೆ ಮಾಡಿಕೊಂಡರು. ಆರಂಭದ ಟೀಕೆ, ನಷ್ಟ, ಅನುಮಾನಗಳನ್ನೆಲ್ಲ ಮೆಟ್ಟಿ ನಿಂತು ಖರ್ಜೂರ ಕೃಷಿಯನ್ನು ಯಶಸ್ಸಿನ ಮಾದರಿಯನ್ನಾಗಿ ರೂಪಿಸಿರುವ ದಿವಾಕರ್ ಚೆನ್ನಪ್ಪ ಅವರ ಕಥೆ, ಮಣ್ಣಿನಲ್ಲಿ ಅವಕಾಶ ಹುಡುಕುವವರಿಗೆ ನಿಜಕ್ಕೂ ಒಂದು ಪ್ರೇರಣೆಯ ಪಯಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC Gyanesh Kumar ಗೆ ಕೇರಳಂ ಸಂಕಷ್ಟ: 2006 ರ ಕೇಸ್ ತನಿಖೆಗೆ ಆದೇಶ!

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಕುಸಿದ ಅಮೆರಿಕ; ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ: ಇನ್ನು ಮುಂದೆ EMPs ಪ್ರಬಲ- EAM Jaishankar

2.5 ಲಕ್ಷ ರೂ. ಲಂಚ ಪ್ರಕರಣ: CBI ಬಲೆಗೆ DGCA ಅಧಿಕಾರಿ, ವಿಮಾನಯಾನ ಸಂಸ್ಥೆಯ ನಿರ್ದೇಶಕ!

'ನನಗೆ ಆಗ 20 ವರ್ಷ': ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ - ನಟಿ ಸ್ವರಾ ಭಾಸ್ಕರ್