ಜಲಂಧರ್: ಜಸ್ಟಿನ್ ರೈಡ್ ರಾಸ್ ಅವರು ಗಳಿಸಿದ ಎರಡು ಗೋಲುಗಳ ಸಹಾಯದಿಂದ ರಾಂಚಿ ರೈನೋಸ್ ತಂಡ, ಸೋಮವಾರ ನಡೆದ ಹಾಕಿ ಇಂಡಿಯಾ ಲೀಗ್ ಪಂದ್ಯದಲ್ಲಿ ಪಂಜಾಬ್ ವಾರಿಯರ್ಸ್ ವಿರುದ್ಧ 3-2 ಅಂತರದ ಜಯ ಸಾಧಿಸಿತು.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಪಂಜಾಬ್ ತಂಡ ಮೊದಲು ಗೋಲ್ನ ಖಾತೆ ತೆರೆಯಿತು. ಆಸ್ಟ್ರೇಲಿಯಾದ ಕೀರನ್ ಗೋವರ್ಸ್ ಅವರು ಪಂದ್ಯದ 34ನೇ ನಿಮಿಷದಲ್ಲಿ ಗೋಲು ಗಳಿಸಿ, ಪಂಜಾಬ್ಗೆ 1-0ರ ಮುನ್ನಡೆ ತಂದುಕೊಟ್ಟರು. ನಂತರ, ಕ್ರಿಸ್ಟೊಫರ್ ಸಿರೆಲ್ಲೊ ಅವರು 50ನೇ ನಿಮಿಷದಲ್ಲಿ ಗಳಿಸಿದ ಗೋಲ್ನಿಂದಾಗಿ ಪಂಜಾಬ್ 2-0 ಮುನ್ನಡೆ ಪಡೆದುಕೊಂಡಿತು.
ಆದರೆ, ಇಲ್ಲಿಂದ ಮುಂದಿನ ನಿಮಿಷಗಳಲ್ಲಿ ರಾಂಚಿ ತಂಡದ ಆಟಗಾರರು ಸೆಡ್ಡು ಹೊಡೆದರು. 52ನೇ ನಿಮಿಷದಲ್ಲಿ ರೈಡ್ ರೋಸ್ ಅವರು ಗಳಿಸಿದ ಗೋಲು ಹಾಗೂ 53ನೇ ನಿಮಿಷದಲ್ಲಿ ಮನದೀಪ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲುಗಳಿಂದ ರಾಂಚಿ, 2-2ರ ಸಮಬಲವನ್ನು ಸಾಧಿಸಿತು. ನಂತರ, ಪಂದ್ಯದ 69ನೇ ನಿಮಿಷದಲ್ಲಿ ರೈಡ್ ರೋಸ್ ಅವರು ತಮ್ಮ ತಂಡಕ್ಕಾಗಿ ಗಳಿಸಿದ ಮೂರನೇ ಹಾಗೂ ನಿರ್ಣಾಯಕ ಗೋಲು, ರಾಂಚಿ ತಂಡಕ್ಕೆ ಗೆಲುವು ತಂದುಕೊಟ್ಟಿತು.