ಮುಂಬೈ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ, ಈ ಬಾರಿಯ ಮಹಿಳಾ ವಿಶ್ವಕಪ್ನ 'ಗ್ರೂಪ್ ಎ' ವಿಭಾಗದಿಂದ ಸೂಪರ್ ಸಿಕ್ಸ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಮಂಗಳವಾರ ನಡೆದ ತನ್ನ ಪಾಲಿನ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಸೋಲಿಸಿದ ಇಂಗ್ಲೆಂಡ್, ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಪಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ವೆಸ್ಟ್ ಇಂಡೀಸ್ ತಂಡವನ್ನು 101 ರನ್ಗಳ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಇಂಗ್ಲೆಂಡ್, ನಂತರ 35 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ, ಜಯ ಸಾಧಿಸಿತು.
ಎಡವಿದ ವೆಸ್ಟ್ ಇಂಡೀಸ್: ಮೊದಲು ಬ್ಯಾಟಿಂಗ್ಗೆ ಇಳಿದ ವೆಸ್ಟ್ ಇಂಡೀಸ್, ಆರಂಭದಿಂದಲೂ ಎಡವುತ್ತಾ ಸಾಗಿತು. ಕೇವಲ 1 ರನ್ ಮೊತ್ತಕ್ಕೆ ಕಿಸಿಯಾ ನೈಟ್ ಅವರನ್ನು ಕಳೆದುಕೊಂಡ ವಿಂಡೀಸ್, ತಂಡದ ಮೊತ್ತ 4 ರನ್ ಆಗಿದ್ದಾಗ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಟೇಲರ್ ಅವರನ್ನು ಕಳೆದುಕೊಂಡಿತು.
ಇನ್ನು, ತಂಡದ ಮೊತ್ತಕ್ಕೆ 10 ರನ್ ಸೇರುವಷ್ಟರಲ್ಲಿ ಕ್ಯಾಂಪ್ಬೆಲ್ ಔಟಾದರು. ಹೀಗೆ, ಎಡವುತ್ತಾ ಸಾಗಿದ ವೆಸ್ಟ್ ಇಂಡೀಸ್ ಪರ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ಕಿಶೋನಾ ನೈಟ್ ಅವರು, ತಂಡವನ್ನು ಕುಸಿತದಿಂದ ಪಾರು ಮಾಡಲು ಯತ್ನಿಸಿದರಾದರೂ, ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ.
ಅವರ ನಂತರ, ಮಧ್ಯಮ ಕ್ರಮಾಂಕದ ಡೇಲೇ ಅವರೂ ಕೊಂಚ ಜಿಗುಟು ಆಟ ಪ್ರದರ್ಶಿಸಿದರು. ಆದರೆ, ನಿರಂತರವಾಗಿ ವಿಕೆಟ್ಗಳು ಉರುಳುತ್ತಲೇ ಸಾಗಿದ್ದರಿಂದಾಗಿ, ವೆಸ್ಟ್ ಇಂಡೀಸ್ 36.4 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ತಂಡದ ಬ್ರಿಂಡಲ್ ಅವರು ತಾವು ಮಾಡಿದ ಎರಡು ಓವರ್ಗಳಲ್ಲಿ ಯಾವುದೇ ರನ್ ನೀಡದೇ 3 ವಿಕೆಟ್ ಗಳಿಸಿದ್ದು ವಿಶೇಷವಾಗಿತ್ತು. ಮತ್ತೊಬ್ಬ ಬೌಲರ್ ಶ್ರುಭ್ಸೋಲ್ ಅವರು ತಾವು ಮಾಡಿದ 8.4 ಓವರ್ಗಳಲ್ಲಿ 3 ಮೇಡನ್ ಓವರ್ ಮಾಡಿದರಲ್ಲದೇ, 21 ರನ್ ನೀಡಿ, 4 ವಿಕೆಟ್ ಪಡೆದರು.
ಸುಲಭ ಜಯ: ವೆಸ್ಟ್ ಇಂಡೀಸ್ ನೀಡಿದ್ದ ಸುಲಭ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ಆರಂಭಿಕರಾದ ವ್ಯಾಟ್, ಬ್ರಿಂಡಲ್ ಅಗತ್ಯ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್ಗೆ ಈ ಜೋಡಿ 66 ರನ್ ಸೇರಿಸಿತು. ಆದರೆ, ಅದೇ ಮೊತ್ತಕ್ಕೆ ಬ್ರಿಂಡಲ್ ಹಾಗೂ ಅವರ ನಂತರ ಬಂದಿದ್ದ ಟೇಲರ್ ಇಬ್ಬರೂ ಔಟಾದರು.
ಆಗ ಜೋಡಿಯಾದ ವ್ಯಾಟ್ ಹಾಗೂ ಗ್ರೀನ್ವೇ 3ನೇ ವಿಕೆಟ್ಗೆ ಕೇವಲ 6 ರನ್ ಸೇರಿಸುವಷ್ಟರಲ್ಲಿ ಬೇರ್ಪಟ್ಟಿತು. ತಂಡದ ಮೊತ್ತ 72 ರನ್ ಆಗಿದ್ದಾಗ ವ್ಯಾಟ್ ಔಟಾದರೆ, ಈ ಮೊತ್ತಕ್ಕೆ 7 ರನ್ ಸೇರಿಸುವಷ್ಟರಲ್ಲಿ ಗ್ರೀನ್ವೇ ವಿಕೆಟ್ ಒಪ್ಪಿಸಿದರು. ಆನಂತರ, ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ನೈಟ್ ಹಾಗೂ ಗನ್ ಇಬ್ಬರೂ ತಂಡಕ್ಕೆ ಜಯ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 101/10 (36.4 ಓವರ್)
ಕಿಶೋನಾ ನೈಟ್ 33 (86), ಡೇಲೇ ಅಜೇಯ 30 (76)
ಬೌಲಿಂಗ್: ಶ್ರಬ್ಸೋಲ್ 21/4, ಬ್ರಿಂಡಲ್ 0/3
ಇಂಗ್ಲೆಂಡ್: 103/4 (35 ಓವರ್)
ವ್ಯಾಟ್ 40 (80), ಹೆತರ್ ನೈಟ್ 18 (26)
ಬೌಲಿಂಗ್: ಡಾಟಿನ್ 20/3, ಮುನ್ರೋ 22/1
ಪಂದ್ಯಶ್ರೇಷ್ಠ: ಶ್ರಬ್ಸೋಲ್