ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ನಿಂದ ಕುಸ್ತಿಯನ್ನು ಕೈಬಿಡುವಂತೆ ಐಒಸಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಭಾರತದಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. ಈ ಕುರಿತಂತೆ ಮಾತನಾಡಿದ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್, 'ಯಾವ ಕಾರಣಕ್ಕಾಗಿ ಕುಸ್ತಿಯನ್ನು ನಿಷೇಧಿಸುವ ನಿರ್ಣಯವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಕೈಗೊಂಡಿದೆಯೋ ಗೊತ್ತಿಲ್ಲ. ಈ ಸುದ್ದಿಯನ್ನು ನನ್ನ ಕೈಲಿ ಅರಗಿಸಿಕೊಳ್ಳಲಾಗುತ್ತಿಲ್ಲ' ಎಂದು ಹೇಳಿದರು. 2011ರ ಲಂಡನ್ ಒಲಿಂಪಿಕ್ಸ್ನಲ್ಲಿ 66 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಶೀಲ್ ಬೆಳ್ಳಿ ಪದಕ ಗೆದ್ದಿದ್ದರು. ಐಒಸಿಯ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ಕುಸ್ತಿಪಟು ಯೋಗೇಶ್ವರ್ ದತ್, 'ಐಒಸಿಯ ಈ ನಿರ್ಧಾರದಿಂದ ಬೇಸರವಾಗಿದೆ. ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕದ ಖಚಿತತೆ ತಂದುಕೊಡುವ ಕ್ರೀಡೆಗಳಲ್ಲಿ ಕುಸ್ತಿಯೂ ಒಂದು. ಇದೀಗ, ಈ ಕ್ರೀಡೆಯನ್ನು ಒಲಿಂಪಿಕ್ಸ್ನಿಂದ ಕೈಬಿಟ್ಟರೆ, ಅದು ಮುಂದೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ಗಳಲ್ಲಿ ಭಾರತದ ಪದಕ ನಿರೀಕ್ಷೆಗೆ ಭಂಗ ತರುತ್ತದೆ' ಎಂದಿದ್ದಾರೆ.