ಕ್ರೀಡೆ

2014ರ ಇಂಡಿಯನ್ ಜಿಪಿಗೆ ಕೊಕ್?

ಕಳೆದೆರಡು ವರ್ಷಗಳ ಹಿಂದೆ ಅದ್ಧೂರಿಯಾಗಿ ಆರಂಭಗೊಂಡ 'ಇಂಡಿಯನ್ ಗ್ರ್ಯಾನ್‌ಪ್ರೀ'ನ 2014ರ ಆವೃತ್ತಿಗೆ ಗ್ರಹಣ ಹಿಡಿಯುವ...

ನವದೆಹಲಿ: ಹೊಸ ಆಶಾಕಿರಣದೊಂದಿಗೆ ಕಳೆದೆರಡು ವರ್ಷಗಳ ಹಿಂದೆ ಅದ್ಧೂರಿಯಾಗಿ ಆರಂಭಗೊಂಡ 'ಇಂಡಿಯನ್ ಗ್ರ್ಯಾನ್‌ಪ್ರೀ'ನ 2014ರ ಆವೃತ್ತಿಗೆ ಗ್ರಹಣ ಹಿಡಿಯುವ ಅಪಾಯ ಎದುರಾಗಿದೆ.
ಪ್ರಸ್ತುತ ವರ್ಷ ಅಕ್ಟೋಬರ್ 27ರಂದು ನಿಗದಿತವಾಗಿ ಇಂಡಿಯನ್ ಜಿಪಿ ನಡೆಯಲಿದೆ. ಆದರೆ, ಮುಂದಿನ ವರ್ಷ ಇಲ್ಲಿ ಜಿಪಿ ನಡೆಯುವುದು ಅನುಮಾನ ಎನ್ನಲಾಗಿದೆ. ಅಂತಾರಾಷ್ಟ್ರೀ ಫಾರ್ಮುಲಾ ಒನ್ ಸಂಸ್ಥೆಯ ವ್ಯವಸ್ಥಾಪಕ ಮಂಡಳಿ (ಫಾರ್ಮುಲಾ ಒನ್ ಮ್ಯಾನೇಜ್‌ಮೆಂಟ್)ಯ ಅಧ್ಯಕ್ಷ ಬರ್ನಿ ಎಕ್ಸೆಲೆಸ್ಟೋನ್ ಅವರು 'ಮುಂದಿನ ವರ್ಷ ಇಂಡಿಯನ್ ಜಿಪಿ ನಡೆಯುವುದು ಬಹುತೇಕ ಅನುಮಾನ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಹೊಸದಾಗಿ ಮೂಡಿದ್ದ ಕ್ರೀಡೆಯೊಂದು ಮರೆಯಾಗುವ ಅನುಮಾನಕ್ಕೆ ಎಡೆಮಾಡಿದೆ.
ವಿಶ್ವಮಟ್ಟದ ಕ್ರೀಡೆಯೊಂದಕ್ಕೆ ನೆಲೆನೀಡುವ ಹಂಬಲದೊಂದಿಗೆ ಆಸಕ್ತರ ಕೈಗಳು 2011ರಲ್ಲಿ ಭಾರತದಲ್ಲಿ ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರೀ ನಡೆಸಲು ಸಹಾಯ ಮಾಡಿದ್ದವು. ವಿಜಯ್ ಮಲ್ಯ, ಜೆಪಿ ಗ್ರೂಪ್‌ನಂತಹ ದೈತ್ಯರ ಸಹಾಯದಿಂದ ಅದುವರೆಗೆ ಸಿರಿವಂತ ದೇಶಗಳ ಶ್ರೀಮಂತ ಕ್ರೀಡೆಯೆಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ಫಾರ್ಮುಲಾ ಒನ್ ಕಾರ್ ರೇಸ್, ಈಗ ಭಾರತಕ್ಕೂ ಬರುವಂತಾಯಿತು. ಆದರೆ, ಭಾರತದಲ್ಲಿ ಈ ಕ್ರೀಡೆ ನೆಲಕಂಡುಕೊಳ್ಳುವ ಮೊದಲೇ ಇಲ್ಲಿನ ಕಾಣದ ಕೈಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಇಲ್ಲಿಂದ ಪಲಾಯನವಾಗುವ ಹಂತ ತಲುಪಿದೆ.

ಬರ್ನಿ ಹೇಳೋದೇನು?: ಹಂಗೇರಿ ಜಿಪಿ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬರ್ನಿ ಅವರು, 'ಮುಂದಿನ ವರ್ಷ ಇಂಡಿಯನ್ ಜಿಪಿ ನಡೆಯುವುದು ಅನುಮಾನ' ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ 'ಭಾರತದಲ್ಲಿ ಸಿಕ್ಕಾಪಟ್ಟೆ ಪಾಲಿಟಿಕ್ಸ್‌' ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಆದರೆ, ರಾಜಕೀಯ ಕಾರಣಗಳೇನು ಎಂಬುದರ ಬಗ್ಗೆ ಅವರು ಸ್ಪಷ್ಟವಾಗಿ ಹೇಳಲಿಲ್ಲ.
ಅಲ್ಲದೇ, ಇಂಡಿಯನ್ ಜಿಪಿಯನ್ನು ನಡೆಸದಿರಲು ಚಿಂತನೆ ನಡೆಸದಿರುವುದು ಕೇವಲ 2014ನೇ ವರ್ಷಕ್ಕೆ ಮಾತ್ರ ಸೀಮಿತವೋ ಅಥವಾ ಮುಂದೆಂದೂ ಭಾರತದಲ್ಲಿ ಗ್ರ್ಯಾನ್ ಪ್ರೀ ನಡೆಸುವ ಗೋಜಿಗೇ ಹೋಗದಿರಲು ಚಿಂತನೆ ನಡೆದಿದೆಯೋ ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲಿಗೆ, ಭಾರತದಲ್ಲಿನ 'ರಾಜಕೀಯ' ಒಂದು ಅಂತಾರಾಷ್ಟ್ರೀಯ ಕ್ರೀಡೆಯು ಇಲ್ಲಿ ಚಿಗುರುವುದಕ್ಕೆ ಅವಕಾಶವಿಲ್ಲದಂತೆ ಮಾಡಿದೆ ಎಂಬುದಂತೂ ಸ್ಪಷ್ಟವಾಗಿದೆ.
ಈ ಬಾರಿ ಕೊನೆಯ ರೇಸ್ ?: ಬರ್ನಿ ಎಕ್ಸೆಲೆಸ್ಟೊನ್ ಅವರು, ಪ್ರತಿವರ್ಷದ ಗ್ರ್ಯಾನ್ ಪ್ರೀ ಕ್ಯಾಲೆಂಡರ್ ತಯಾರಿಸುತ್ತಾರೆ. ಅವರೇ ರೇಸ್ ನಡೆಯುವ ದಿನಾಂಕಗಳನ್ನು ನಿಗದಿಗೊಳಿಸುತ್ತಾರೆ. ದಶಕಗಳಿಂದ ಈ ಕಾಯಕದಲ್ಲಿ ನಿರತರಾಗಿರುವ ಪ್ರತಿ ವರ್ಷ ಆಗಸ್ಟ್ ವೇಳೆಗೆ ಮುಂದಿನ ವರ್ಷ ನಡೆಯುವ ಕ್ಯಾಲೆಂಡರ್ ತಯಾರಿಸಿ ಅಂತಾರಾಷ್ಟ್ರೀಯ ಆಟೊಮೊಬೈಲ್ ಫೆಡರೇಷನ್‌ನ ಆಡಳಿತ ಮಂಡಳಿಯ ಮುಂದಿಡುತ್ತಾರೆ. ಕ್ಯಾಲೆಂಡರ್ ಮೇಲೆ ಮಂಡಳಿ ಸದಸ್ಯರ ಚರ್ಚೆಯ ನಂತರವಷ್ಟೇ ಅದಕ್ಕೆ ಸೆಪ್ಟಂಬರ್ ವೇಳೆಗೆ ಮೊಹರು ಬೀಳುತ್ತದೆ. ಆಗ, ಅದು ಮುಂದಿನ ವರ್ಷದ ಅಧಿಕೃತ ಫಾರ್ಮುಲಾ ಒನ್ ರೇಸ್ ಕ್ಯಾಲೆಂಡರ್ ಆಗಿ ಅಧಿಕೃತ ವೇಳಾಪಟ್ಟಿಯಾಗುತ್ತದೆ.
ಈಗ ಜುಲೈ ತಿಂಗಳಿನಲ್ಲಿ, ಮುಂದಿನ ವರ್ಷದ ರೇಸ್ ಋತುವಿನಲ್ಲಿ ನಡೆಸಲಾಗುವ ರೇಸ್‌ಗಳ ಪಟ್ಟಿಯನ್ನು ಮಾಡಲಾಗುತ್ತಿದೆ. ಪಟ್ಟಿಯಲ್ಲಿ, ಇಂಡಿಯನ್ ಗ್ರ್ಯಾನ್ ಪ್ರೀಯನ್ನು ಸೇರಿಸುವುದೋ ಬೇಡವೋ ಎಂಬ ಜಿಜ್ಞಾಸೆ ಬರ್ನಿ ಅವರಿಗೆ ಕಾಡುತ್ತಿದೆಯಂತೆ. ಆದರೆ, ಯಾವುದೂ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, 'ಭಾರತದಲ್ಲಿನ ರಾಜಕೀಯ'ದ ಕಾರಣವನ್ನು ಹೇಳುತ್ತಿರುವ ಅವರೇನಾದರೂ ಇಂಡಿಯನ್ ಜಿಪಿಯನ್ನು ಕೈಬಿಡುವ ಪ್ರಸ್ತಾಪವನ್ನು ಅಂತಾರಾಷ್ಟ್ರೀಯ ಆಟೊಮೊಬೈಲ್ ಫೆಡರೇಷನ್‌ನ ಆಡಳಿತ ಮಂಡಳಿಯ ಮುಂದಿಡುತ್ತಾರೆ. ಅಂತಾರಾಷ್ಟ್ರೀಯ ಆಟೊಮೊಬೈಲ್ ಫೆಡರೇಷನ್, ಬರ್ನಿಯವರ ಚಿಂತನೆಗೆ ಬೆಂಬಲ ನೀಡಿದರೆ, ಮುಂದಿನ ವರ್ಷದ ಇಂಡಿಯನ್ ಜಿಪಿ ಕೈಬಿಟ್ಟ ಹಾಗಾಗುತ್ತದೆ ಎನ್ನಲಾಗುತ್ತಿದೆ.

ಆಯೋಜಕರೇನು ಹೇಳ್ತಾರೆ ?
ಭಾರತದಲ್ಲಿ ಫಾರ್ಮುಲಾ ಒನ್ ರೇಸ್ ಆಯೋಜಕರಾಗಿರುವ ಜೇಪಿ ಸಂಸ್ಥೆ, ಮುಂದಿನ ವರ್ಷವೂ ಭಾರತದಲ್ಲಿ ಎಫ್1 ರೇಸ್ ನಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿರುವ ಅದು, 'ಫಾರ್ಮುಲಾ ಒನ್ ಸಂಸ್ಥೆಯೊಂದಿಗೆ ನಾವು (ಜೇಪಿ) ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, 2015ರವರೆಗೆ ಇಲ್ಲಿ ರೇಸ್ ನಡೆಯವುದು ನಿಶ್ಚಿತ. ಹಾಗಾಗಿರುವಾಗ, ರೇಸ್ ನಡೆಸದೇ ಇರಲು ಸಾಧ್ಯವಿಲ್ಲ. ರೇಸ್ ನಡೆಸಲು ನಾವು ಬದ್ಧರಾಗಿದ್ದೇವೆ' ಎಂದಿದೆ.

ತಂಡಗಳಿಂದ ದೂರು
ಭಾರತದಲ್ಲಿ ಈವರೆಗೆ ನಡೆದಿರುವ ಎರಡು ಗ್ರ್ಯಾನ್ ಪ್ರೀಗಳಲ್ಲಿ ಪಾಲ್ಗೊಂಡಿರುವ ತಂಡಗಳಿಂದಲೂ ಭಾರತದಲ್ಲಿನ ಪರಿಸ್ಥಿತಿಗಳ ಬಗ್ಗೆ ಕೆಲವು ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಜು. 28ರಂದು ನಡೆದ ಹಂಗೇರಿಯನ್ ಗ್ರ್ಯಾನ್ ಪ್ರೀ ನಂತರ, ಮುಂದಿನ ವರ್ಷದ ರೇಸ್ ಕ್ಯಾಲೆಂಡರ್ ನಿಮಿತ್ತ ಕರೆಯಲಾಗಿದ್ದ ಸಭೆಯಲ್ಲಿ, ಕೆಲ ತಂಡಗಳ ಪ್ರತಿನಿಧಿಗಳು, ಭಾರತದಲ್ಲಿ ರೇಸ್ ನಡೆಸಲು ಅನಾನುಕೂಲ ಪರಿಸ್ಥಿತಿ ಇದೆ ಎಂದು ದೂರಿದ್ದಾರೆ ಎನ್ನಲಾಗಿದೆ.

ಭಾರತಕ್ಕೆ ರಷ್ಯಾ ಪೈಪೋಟಿ
ಇಂಡಿಯನ್ ಜಿಪಿಯನ್ನು ಕೈಬಿಡುವ ವಿಚಾರದ ಹಿಂದೆ ಮತ್ತೊಂದು ಕಾರಣವೂ ಇದೆ. ಅದು ರಷ್ಯಾ. ಹೌದು. ಫಾರ್ಮುಲಾ ಒನ್ ರೇಸ್ ಅನ್ನು ತನ್ನಲ್ಲೂ ಆರಂಭಿಸಲು ಉತ್ಸುಕವಾಗಿರುವ ರಷ್ಯಾ ದೇಶ, ಅಲ್ಲಿನ ಸೋಚಿ ಎಂಬಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕವಾದ ಫಾರ್ಮುಲಾ ಒನ್ ಟ್ರ್ಯಾಕ್ ಅನ್ನು ನಿರ್ಮಿಸಿದೆ. ಅಲ್ಲದೇ, ರೇಸ್‌ಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟು, ಎರಡೂ ಕೈಗಳಿಂದ ಈ ಕ್ರೀಡೆಯನ್ನು ತನ್ನೊಳಗೆ ಸ್ವಾಗತಿಸಲು ರಷ್ಯಾ ತುದಿಗಾಲಲ್ಲಿ ನಿಂತಿದೆ.
ರಷ್ಯಾದ ಈ ಉತ್ಸಾಹ, ಫಾರ್ಮುಲಾ ಒನ್ ರೇಸ್‌ನ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಸಂದರ್ಭದಲ್ಲಿ,  ಭಾರತದಲ್ಲಿ ಫಾರ್ಮುಲಾ ಒನ್ ಸ್ಪರ್ಧೆ ಆಯೋಜಿಸುವ ಬಗ್ಗೆ ಕೆಲವೊಂದು 'ಲಫಡಾ'ಗಳು ಎದ್ದಿರುವ ಹಿನ್ನೆಲೆಯಲ್ಲಿ ಬೇಸತ್ತಿರುವ ಅಂತಾರಾಷ್ಟ್ರೀಯ ಆಟೊಮೊಬೈಲ್ ಫೆಡರೇಷನ್, ಈಗ ತನ್ನ ದೃಷ್ಟಿಯನ್ನು ಭಾರತದಿಂದ ರಷ್ಯಾ ಕಡೆಗೆ ಹರಿಸಿದೆ.

ಕರಭಾರವೇ ಪ್ರಮುಖ ಸಮಸ್ಯೆ?
ಭಾರತದಲ್ಲಿ ಪ್ರತೀಬಾರಿಯೂ 'ಫಾರ್ಮುಲಾ ಒನ್ ಕಾರ್ ರೇಸ್‌' ನಡೆದಾಗ, ರೇಸ್ ಕಾರ್‌ಗಳು, ಅವುಗಳಲ್ಲಿ ಬಳಸಲಾಗುವ ಇಂಧನ ಒಳಗೊಂಡಂತೆ, ರೇಸ್‌ಗೆ ಸಂಬಂಧಿಸಿದ ಪ್ರತಿಯೊಂದು ಸಲಕರಣೆ, ಮಾನವ ಸಿಬ್ಬಂದಿಯೆಲ್ಲವನ್ನೂ ವಿದೇಶಗಳಿಂದಲೇ ಭಾರತಕ್ಕೆ ಆಮದು ಮಾಡಿಕೊಳ್ಳಬೇಕು.
ಅಷ್ಟೇ ಅಲ್ಲ, ರೇಸ್ ಮುಗಿದ ಮೇಲೆ ತಮ್ಮ ತವರಿಗೆ ಈ ಎಲ್ಲವನ್ನೂ ಪುನಃ ಎತ್ತೊಯ್ಯಬೇಕು.
ಇದರ ಖರ್ಚನ್ನೆಲ್ಲಾ ರೇಸ್‌ನಲ್ಲಿ ಪಾಲ್ಗೊಳ್ಳುವ ಆಯಾ ತಂಡಗಳ ಮಾಲೀಕರೇ ಭರಿಸಬೇಕು. ಹೀಗೆ, ಪ್ರತಿಯೊಂದನ್ನೂ ಭಾರತದೊಳಕ್ಕೆ ತರುವಾಗ ಇಲ್ಲಿ ವಿಧಿಸಲಾಗುವ ಆಮದು ಹಾಗೂ ಮತ್ತಿತರ ಸುಂಕಗಳು, ತಂಡಗಳ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
ಕಳೆದ ಬಾರಿ ಗ್ರ್ಯಾನ್ ಪ್ರೀ ನಡೆದಾಗಲೂ ಕೆಲವೊಂದು ತಂಡದ ಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದರು.
ಎಫ್ 1 ತಂಡ 'ಸೌಬರ್‌'ನ ಮುಖ್ಯಸ್ಥೆಯಾಗಿರುವ ಮೊನಿಶಾ ಕಾಲ್ಟೆಂಬರ್ನ್, 'ಭಾರತದಲ್ಲಿ ತೆರಿಗೆಯದ್ದೇ ದೊಡ್ಡ ಸಮಸ್ಯೆಯಾಗಿದೆ. ಇದೇ ಕಾರಣದಿಂದ, ಫಾರ್ಮುಲಾ ಒನ್ ಕ್ರೀಡೆ ಭಾರತದಿಂದ ಕಾಲ್ತೆಗೆದರೆ, ಅದು ನಿಜಕ್ಕೂ ಖೇದಕರ' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!