ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಬಿಸಿಸಿಐ ತನಿಖಾ ಸಮಿತಿಯಿಂದ ಕ್ಲೀನ್ ಚಿಟ್ ಪಡೆಯುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ವಾಪಸಾಗಲು ಎನ್. ಶ್ರೀನಿವಾಸನ್ ಸಿದ್ಧರಾಗಿದ್ದಾರೆ.
ಆದರೆ, ಅವರ ಹಾದಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಡ್ಡಿ ಉಂಟುಮಾಡುವ ಸಾಧ್ಯತೆಗಳಿವೆ. ಕಾರಣ ಪ್ರಕರಣದ ಕುರಿತು ಪೊಲೀಸರ ತನಿಖೆ ಅಂತ್ಯವಾಗುವವರೆಗೂ ಕಾಯುವಂತೆ ಬಿಸಿಸಿಐಗೆ ಸೋಮವಾರ ಕೇಂದ್ರ ಕ್ರೀಡಾ ಸಚಿವಾಲಯ ತಾಕೀತು ಮಾಡಿದೆ.
ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ, ಬಿಸಿಸಿಐ ತನಿಖಾ ಸಮಿತಿ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಯಾಲ್ಸ್ ತಂಡಗಳ ಸಹ ಮಾಲೀಕರಿಗೆ ಕ್ಲೀನ್ ಚಿಟ್ ನೀಡಿರಬಹುದು. ಆದರೆ, ಈ ತೀರ್ಪಿಗೆ ಹೆಚ್ಚಿನ ಮಹತ್ವ ನೀಡುವುದು ಬೇಡ, ಪೊಲೀಸರು ನಡೆಸುತ್ತಿರುವ ತನಿಖೆ ಅಂತ್ಯವಾಗುವರೆಗೂ ಕಾಯಬೇಕು ಎಂದು ಕ್ರೀಡಾ ಸಚಿವಾಲ ಸ್ಪಷ್ಟಪಡಿಸಿದೆ.
'ಬಿಸಿಸಿಐ ಕಳಂಕಿತರಿಗೆ ಕ್ಲೀನ್ ಚಿಟ್ ನೀಡಿರಬಹುದು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪೊಲೀಸರ ತನಿಖೆ ಮುಕ್ತಾಯವಾಗುವರೆಗೂ ಕಾಯಬೇಕು' ಎಂದು ಕ್ರೀಡಾ ಕಾರ್ಯದರ್ಶಿ ಕೆ.ಪಿ ದೇಬ್ ಹೇಳಿದ್ದಾರೆ. ಹೈಕೋರ್ಟ್ ಮಾಜಿ ನ್ಯಾಯಮೂರ್ತಿಗಳಾದ ಜಯರಾಮ್ ಚೌಟಾ ಮತ್ತು ಆರ್. ಬಾಲಸುಬ್ರಮಣ್ಯನ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ಸಮಿತಿಯನ್ನು ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಲು ಬಿಸಿಸಿಐ ನೇಮಿಸಿತ್ತು. ಶ್ರೀನಿವಾಸನ್ ಅಳಿಯ ಗುರುನಾತ್ ಮೇಯಪ್ಪನ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಬಗ್ಗೆ, ಈ ತನಿಖಾ ಸಮಿತಿ ಕ್ಲೀನ್ ಚಿಟ್ ನೀಡಿತ್ತು.
ಕೋಲ್ಕತಾದಲ್ಲಿ ಭಾನುವಾರ ನಡೆದ ಬಿಸಿಸಿಐ ಸಭೆಯಲ್ಲಿ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಕಳಂಕಿತರ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯಗಳು ದೊರಕಿರಲಿಲ್ಲ ಎಂದು ತಿಳಿಸಲಾಗಿದೆ. 'ರಾಜ್ ಕುಂದ್ರಾ ಅಥವಾ ಗುರುನಾಥ್ ಮೇಯಪ್ಪನ್ ಯಾವುದೇ ರೀತಿ ತಪ್ಪು ಮಾಡಿರುವ ಕುರಿತು ತನಿಖೆಯಲ್ಲಿ ಸಾಕ್ಷ್ಯಗಳು ದೊರಕಿಲ್ಲ. ಈಗ ಈ ವರದಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಲಾಗುತ್ತದೆ. ಹೀಗಾಗಿ ಆಗಸ್ಟ್ 2ರಂದು ದೆಹಲಿಯಲ್ಲಿ ಸಭೆ ಸೇರಲಿರುವ ಅದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ' ಎಂದು ವರದಿ ಸ್ವೀಕರಿಸಿದ ನಂತರ ಬಿಸಿಸಿಐ ಉಪಾಧ್ಯಕ್ಷ ನಿರಂಜನ್ ಶಾ ಹೇಳಿದ್ದರು.
ಹೀಗಾಗಿ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷರಾಗಿ ಮರಳಲು ಹಾದಿ ಸುಗಮವಾಗಿತ್ತು. ಆದರೆ, ಕೇಂದ್ರ ಕ್ರೀಡಾ ಸಚಿವಾಲಯ ಪೊಲೀಸ್ ತನಿಖೆ ಅಂತ್ಯವಾಗುವವರೆಗೂ ಕಾಯಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಪ್ರಕರಣ ಯಾವ ಹಾದಿ ಹಿಡಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಿಸಿಸಿಐಗೆ ಆರ್ಟಿಐ ಅನ್ವಯ: ನ್ಯಾ. ಮುದ್ಗಲ್
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾದ ಹೆಸರನ್ನು 'ಭಾರತ' ಎಂದು ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂಸ್ಥೆಯು, ಮಾಹಿತಿ ಹಕ್ಕು ವ್ಯಾಪ್ತಿಯೊಳಗೆ ಬರಬೇಕು ಎಂದು ನ್ಯಾ. ಮುಕುಲ್ ಮುದ್ಗಲ್ ಆಗ್ರಹಿಸಿದ್ದಾರೆ.
2013ರ ಕ್ರೀಡಾ ಮಸೂದೆಯ ಕರಡು ಪ್ರತಿ ತಯಾರಿಸಲು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟಿರುವ ಸಮಿತಿಯ ಅಧ್ಯಕ್ಷರಾಗಿರುವ ನ್ಯಾ. ಮುದ್ಗಲ್, ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬಿಸಿಸಿಐ ಮಾತ್ರವಲ್ಲದೇ, ದೇಶದ ಎಲ್ಲಾ ಕ್ರೀಡಾಸಂಸ್ಥೆಗಳೂ ಮಾಹಿತಿ ಹಕ್ಕು ಕಾಯ್ದೆಯಡಿ ಬರಬೇಕು ಎಂದ ಅವರು, 'ಮಾಹಿತಿ ಕಾಯ್ದೆ ಬಿಸಿಸಿಐ ಮಾತ್ರವಲ್ಲದೇ, ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಪ್ರತಿಯೊಂದು ಸರಣಿ ಅಥವಾ ಪಂದ್ಯಗಳಿಗೆ ಆಟಗಾರರ ಆಯ್ಕೆ ಸೇರಿದಂತೆ, ಆಟಗಾರರು ಹಾಗೂ ಸಂಸ್ಥೆಗಳ ನಡುವಿನ ಒಪ್ಪಂದ, ಆಟಗಾರರ ವೈದ್ಯಕೀಯ ವಿವರ, ಫಿಟ್ನೆಸ್ ವಿವರ ಮುಂತಾದ ವಿಚಾರಗಳ ಬಗ್ಗೆ ಜನರು ಪ್ರಶ್ನೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಸಂಸ್ಥೆಗಳೂ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತದೆ' ಎಂದರು.
'ಬಿಸಿಸಿಐ ಕಾನೂನಿಗಿಂತ ದೊಡ್ಡದಾ ?'
ನವದೆಹಲಿ: 'ದೇಶದ ಕಾನೂನಿಗಿಂತ ಬಿಸಿಸಿಐ ದೊಡ್ಡದಾ... ?' ಎಂಬ ಪ್ರಶ್ನೆಯನ್ನು ಮಾಜಿ ಕ್ರಿಕೆಟಿಗ ಹಾಗೂ ರಾಜಕೀಯ ನೇತಾರ ಕೀರ್ತಿ ಆಜಾದ್ ಎತ್ತಿದ್ದಾರೆ. ಐಪಿಎಲ್ ಫಿಕ್ಸಿಂಗ್ ಆರೋಪಗಳನ್ನು ಹೊತ್ತಿದ್ದ ಬಿಸಿಸಿಐನ ಮಾಜಿ ಅಧ್ಯಕ್ಷ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯಸ್ಥ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸಹ-ಮಾಲೀಕ ರಾಜ್ ಕುಂದ್ರಾ ಅವರಿಗೆ, ಬಿಸಿಸಿಐ ನೇಮಿಸಿದ್ದ 'ತನಿಖಾ ಸಮಿತಿ' ಕ್ಲೀನ್ಚಿಟ್ ನೀಡಿರುವುದನ್ನು ಪ್ರಶ್ನಿಸಿದ ಅವರು, ಹೀಗೆ ಖಾರವಾಗಿ ಪ್ರತಿಕ್ರಯಿಸಿದರು.
'ಐಪಿಎಲ್ ಫಿಕ್ಸಿಂಗ್ಗಳ ಬಗ್ಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅತ್ತ, ದೆಹಲಿ ಪೊಲೀಸರೂ ತನಿಖೆ ಮುಂದುವರಿಸಿದ್ದಾರೆ. ಹೀಗಿರುವಾಗ, ಬಿಸಿಸಿಐ ಮಾತ್ರ ತನ್ನ ತನಿಖೆಯನ್ನು ಬೇಗನೇ ಮುಗಿಸಿ, ಆರೋಪಿಗಳಿಗೆ ಕ್ಲೀನ್ ಚಿಟ್ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ? ಬಿಸಿಸಿಐ ಏನು ಕಾನೂನಿಗಿಂತ ದೊಡ್ಡದಾ ?' ಎಂದು ಅವರು ಪ್ರಶ್ನಿಸಿದರು.