ನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಪದಕವನ್ನು ತಿರಸ್ಕರಿ ವಿವಾದ ಸೃಷ್ಟಿಸಿದ್ದ ಭಾರತದ ಮಹಿಳಾ ಬಾಕ್ಸಿಂಗ್ ಪಟು ಸರಿತಾದೇವಿ ಅವರಿಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಸಂಸ್ಥೆಯು 1 ವರ್ಷ ನಿಷೇಧ ಹೇರಿದೆ.
ಸರಿತಾ ದೇವಿ ಪ್ರಕರಣವನ್ನು ಇಂದು ವಿಚಾರಣೆಗೆ ತೆಗೆದುಕೊಂಡ ಎಐಬಿಎ ಸರಿತಾದೇವಿ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸರಿತಾ ದೇವಿ ಸೇರಿದಂತೆ ವಿದೇಶಿ ಕೋಚ್ ಬಿ.ಫರ್ನಾಂಡಿಸ್ ಅವರಿಗೂ 2 ವರ್ಷ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಮುಂದಿನ ವಿಚಾರಣೆವರೆಗೂ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸದಿರುವಂತೆ ಸೂಚಿಸಿದೆ.
ಅ.22ರ ಏಷ್ಯನ್ ಗೇಮ್ಸ್‌ನಲ್ಲಿ ರೆಫರಿಗಳು ನೀಡಿದ್ದ ತೀರ್ಪಿನಲ್ಲಿ ತಪ್ಪಾಗಿದೆ ಎಂದು ಆರೋಪಿದ್ದ ಸರಿತಾ ದೇವಿ ಕಂಚಿನ ಪದಕವನ್ನು ತಿರಸ್ಕರಿಸಿ ವಿವಾದ ಸೃಷ್ಟಿಸಿದ್ದರು. ಸೆಮಿ ಫೈನಲ್ಸ್‌ನ 57-60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಸೋತಿದ್ದ ಸರಿತಾ ದೇವಿ ಪದಕ ಪ್ರದಾನದ ವೇಳೆ ಕಂಚಿನ ಪದಕವನ್ನು ಕೊರಳಿಗೆ ಹಾಕಿಸಿಕೊಳ್ಳದೇ ಬಹುಮಾನವನ್ನು ನಿರಾಕರಿಸಿದ್ದರು. ಅಲ್ಲದೆ, ಏಷಿಯನ್ ಗೇಮ್ಸ್‌ನ ಸೆಮಿ ಫೈನಲ್ಸ್ ತೀರ್ಪುಗಾರರು ತಪ್ಪು ನಿರ್ಣಯ ಕೈಗೊಂಡಿದ್ದರಿಂದಲೇ ತಮಗೆ ಸೋಲಾಯಿತು ಎಂದು ತೀರ್ಪುಗಾರರ ವಿರುದ್ಧ ಬಹಿರಂಗವಾಗಿ ಅಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿಂದೆ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಸರಿತಾ ದೇವಿ ಅವರಿಗೆ ಶಿಕ್ಷೆ ನೀಡದಂತೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.