ಬೆಂಗಳೂರು: ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸುವಲ್ಲಿ ಯಶಸ್ವಿಯಾಗಿರುವ ಭಾರತ ಪ್ರಮುಖ ಆಟಗಾರರು ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್‌ನ ನಾಕೌಟ್ ಸುತ್ತಿಗೆ ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.
ಚಾಂಪಿಯನ್‌ಶಿಪ್‌ನ ನಾಲ್ಕನೇ ದಿನವಾದ ಶನಿವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಕರ್ನಾಟಕದ ಆಟಗಾರ್ತಿ ಚಿತ್ರ ಮಗಿಮೈ ರಾಜನ್ ಹಾಗೂ ಮುಂಬೈನ ಅಮೀ ಕಮಾನಿ ಗೆಲವು ದಾಖಲಿಸುವ ಮೂಲಕ ಅಂತಿಮ 24ರ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರಾ ಮಗಿಮೈ ರಾಜನ್ ತಮ್ಮ ಎದುರಾಳಿ ಭಾರತದವರೇ ಆದ ಮೀನಲ್ ಠಾಕೂರ್ ವಿರುದ್ಧ 3-1(51-39, 61-71, 52-42, 53-24) ಫ್ರೇಮ್ ಗೆದ್ದ ಚಿತ್ರಾ, ಎರಡನೇ ಫ್ರೇಮ್ ಕೈ ಚೆಲ್ಲಿದರು. ನಂತರ ತಪ್ಪು ತಿದ್ದುಕೊಂಡು ಉಳಿದ ಎರಡು ಫ್ರೇಮ್ ಗೆದ್ದು ಗೆಲುವಿನ ನಗೆ ಬೀರಿದರು.
ಇನ್ನು ಭಾರತದ ಯುವ ಪ್ರತಿಭೆ ಅಮೀ ಕಮಾನಿ ಸಹ ತಮ್ಮ ಎದುರಾಳಿ ಇರಾನ್‌ನ ಅಕ್ರಮ್ ಮೊಹಮದ್ದೀ ಅಮಿನಿ ವಿರುದ್ಧ 3-0 ಫ್ರೇಮ್‌ಗಳ ಅಂತರದ ಅರ್ಹ ಗೆಲುವು ದಾಖಲಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಪ್ರಾಬಲ್ಯ ಮೆರೆದ ಅಮೀ, ಗಮನಾರ್ಹ ಪ್ರದರ್ಶನ
ತೋರಿದರು. ಮೊದಲ ಫ್ರೇಮ್‌ನಲ್ಲಿ 43-22 ಅಂತರದ ಮುನ್ನಡೆಯೊಂದಿಗೆ ಶುಭಾರಂಭ ಮಾಡಿದ ಅಮೀ, ಎರಡನೇ ಸೆಟ್‌ನಲ್ಲಿ 81-18 ಅಂಕಗಳ ಬೃಹತ್ ಅಂತರ ಕಾಯ್ದುಕೊಂಡರು.
ಇನ್ನು ಮೂರನೇ ಫ್ರೇಮ್‌ನಲ್ಲೂ ಅಬ್ಬರಿಸಿದ ಕಮಾನಿ 71-1 ಅಂತರದಿಂದ ಸುಲಭವಾಗಿ ಗೆಲುವಿನ ನಗೆ ಬೀರಿದರು. ಇನ್ನು ನೀನಾ ಪ್ರವೀಣ್ ಅಂತರದಲ್ಲಿ ಸೋಲನುಭವಿಸಿ ನಿರಾಸೆ ಮೂಡಿಸಿದರು.
ಭಾರತದ ಮತ್ತೋರ್ವ ಸ್ನೂಕರ್ ತಾರೆ ವಿದ್ಯಾ ಪಿಳ್ಳೈ, ತಮ್ಮ ಎದುರಾಳಿ ನಿಕೊಲಾ ಇಲೆಸೆ ವಿರುದ್ಧ 3-2(79-21, 54-66, 09-56, 52-24, 53-44) ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಈ ಮೂಲಕ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ.
ನಾಕೌಟ್ ಸುತ್ತಿಗೆ ಪ್ರವೇಶಿಸುವ ವಿಶ್ವಾಸವಿತ್ತು. ಆದರೆ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವುದು ಪ್ರಮುಖ. ಪಂದ್ಯದಲ್ಲಿ ಫ್ರೇಮ್ ಕೈಚೆಲ್ಲಿದ್ದು, ನಿರಾಸೆ ಮೂಡಿಸಿತು. ಮುಂದಿನ ಪಂದ್ಯಗಳಲ್ಲಿ ತಾಳ್ಮೆ ಕಾಯ್ದುಕೊಂಡು, ಉತ್ತಮ ಅಂತರದಲ್ಲಿ ಗೆಲುವು ದಾಖಲಿಸಬೇಕಿದೆ.
-ಚಿತ್ರಾ ಮಗಿಮೈರಾಜನ್, ಕರ್ನಾಟಕದ ಆಟಗಾರ್ತಿ
ಪಂಕಜ್‌ಗೆ ಪೈಪೋಟಿ ನೀಡಿದ ಲಕ್ಕಿ ವಟ್ನಾನಿ
ಭಾರತದ ಆಟಗಾರ ಹಾಗೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಪಂಕಜ್ ಆಡ್ವಾಣಿ ತಮ್ಮ ನಾಲ್ಕನೇ ಪಂದ್ಯದಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರಾದರೂ, ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಭಾರತದವರೇ ಆದ ಲಕ್ಕಿ ವಟ್ನಾನಿ ವಿರುದ್ಧ ಆಡಿದ ಪಂಕಜ್ 4-2(44-74, 60-32, 12-60, 98-0, 80-3, 72-21) ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಮೊದಲ ಫ್ರೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಪಂಕಜ್, ಎರಡನೇ ಫ್ರೇಮ್ ಗೆದ್ದರು. 3ನೇ ಫ್ರೇಮ್‌ನಲ್ಲಿ ಸೋಲುವ ಮೂಲಕ ಪಂಕಜ್ ಒತ್ತಡಕ್ಕೆ ಸಿಲುಕಿದರು. ನಂತರ ತಮ್ಮ ಲಯ ಕಂಡುಕೊಂಡ ಆಡ್ವಾಣಿ ನಂತರದ ಮೂರು ಫ್ರೇಮ್ ಗೆಲ್ಲುವ ಮೂಲಕ ಪಂದ್ಯದಲ್ಲಿ ಜಯ ಸಾಧಿಸಿದರು.
ಇನ್ನು ಕಮಲ್ ಚಾವ್ಲಾ, ರಷ್ಯಾದ ಎದುರಾಳಿ ಮಿಖೈಲ್ ತೆರೆಕೊವ್ ವಿರುದ್ಧ 4-1 ಫ್ರೇಮ್‌ಗಳಇಂದ ಗೆದ್ದರು. ಆರಂಭಿಕ ಫ್ರೇಮ್‌ನಲ್ಲಿ 99-0 ಅಂತರದ ಅದ್ಭುತ ಆರಂಭ ಪಡೆದ ಕಮಲ್, ನಂತರ 29-72 ಅಂತರದ ಹಿನ್ನಡೆ ಅನುಭವಿಸಿದರು. ನಂತರ ಎಚ್ಚೆತ್ತ ಕಮಲ್ ನಂತರದ ಮೂರು ಫ್ರೇಮ್‌ಗಳಲ್ಲಿ ಕ್ರಮವಾಗಿ 67-28, 92-7, 121-6ರ ಗೆಲುವು ದಾಖಲಿಸಿದರು.
- ಸೋಮಶೇಖರ್ ಪಿ.ಭದ್ರಾವತಿ