ಅಡಿಲೇಡ್: ಭಾರತದ ಬೌಲರ್‌ಗಳು ಉತ್ತಮ ದಾಳಿ ನಡೆಸಿ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಗ್ಲಿಡರಲ್ ಕ್ರೀಡಾಣಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಇಲೆವನ್ ಮೊದಲ ಇನ್ನಿಂಗ್ಸ್‌ನಲ್ಲಿ 219 ರನ್‌ಗಳ ಸಾಧಾರಣ ಮೊತ್ತಕ್ಕೆ ಪತನಗೊಂಡಿತು.
ಉತ್ತರವಾಗಿ ಭಾರತ, ಮೊದಲ ದಿನದಾಟ ನಿಂತಾಗ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 55 ಗನ್‌ಗಳಿಸಿತ್ತು. ಆರಂಭಿಕ ಶಿಖರ್‌ಧವನ್ ಕೇವಲ 10 ರನ್‌ಗಳಿಸಿ ವಿಕೆಟ್ ಕೈಚೆಲ್ಲಿದರೆ, ಮತ್ತೊಬ್ಬ ಆರಂಭಿಕ ಮುರಳಿ ವಿಜಯ್ 32 ಮತ್ತು ಮೂರನೇ ಕ್ರಮಾಂಕದಲ್ಲಿ ಬಂದ ಚೇತೇಶ್ವರ್ ಪೂಜಾರ್ 13 ರನ್‌ಗಳಿಸಿ ಅಜೇಯರಾಗುಳಿದಿದ್ದರು.
ಉತ್ತಮ ಹೊಡೆತಗಳನ್ನು ಬಾರಿಸಿದ ಮುರಳಿ ವಿಜಯ್, 50 ಎಸೆತಗಳನ್ನು ಎದುರಿಸಿ ತಮ್ಮ ಖಾತೆಯಲ್ಲಿ 4 ಬೌಂಡರಿ ಸೇರಿಸಿದರು. ಪೂಜಾರ ಕೂಡ ಆತ್ಮವಿಶ್ವಾಸದಿಂದಲೇ ಚೆಂಡನ್ನು ಎದುರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಇಲೆವೆನ್ ಪರ ಆರಂಭಿಕ ರಯಾನ್ ಕಾರ್ಟರ್ಸ್ ಅರ್ಧಶತಕ(58) ಹಾಗೂ ಹ್ಯಾರಿ ನೀಲ್ಸನ್(43) ಮತ್ತು ಕೆಲ್ವಿನ್ ಸ್ಮಿತ್(40) ಅವರು ಭಾರತದ ಬೌಲರ್‌ಗಳಿಗೆ ಸ್ವಲ್ಪ ಖಾರವಾದ ಉತ್ತರ ನೀಡುವಲ್ಲಿ ಯಶಸ್ವಿಯಾದರೆ, ಇತರೆ ಬ್ಯಾಟ್ಸ್ ಮನ್‌ಗಳು ವೈಫಲ್ಯ ಅನುಭವಿಸಿದರು.
ಭಾರತದ ದಾಳಿಯಲ್ಲಿ ಗಮನಸೆಳೆದ ವರುಣ್ ಅರುಣ್ 3 ಹಾಗೂ ಕರಣ್ ಶರ್ಮಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರು.