ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಡಂಕನ್ ಫ್ಲೆಚರ್ ಅವರನ್ನು ಬದಲಿಸುವ ಸಮಯ ಬಂದಿದೆ. ಈ ಸಂಬಂಧ ಈಗಾಗಲೇ ಟೀಂ ಇಂಡಿಯಾಗೆ ಯಾರು ಕೋಚ್ ಆಗಬೇಕು ಎಂಬ ಬಗ್ಗೆಯೂ ಬಿಸಿಸಿಐನೊಳಗೆ ಚರ್ಚೆ ನಡೆಯುತ್ತಿದೆ. ಮತ್ತೆ ವಿದೇಶಿಗನಿಗೆ ಮಣೆ ಹಾಕಬೇಕೆ ಅಥವಾ ತವರಿನ ವ್ಯಕ್ತಿಗೆ ಅವಕಾಶ ನೀಡಬೇಕೇ ಎಂಬ ಬಗ್ಗೆಯೂ ಬಿಸಿಬಿಸಿ ಚರ್ಚೆ ಶುರುವಾಗಿದೆ.
ದೇಶದ ಅನೇಕ ಮಾಜಿ ಆಟಗಾರರು ತವರಿನವರನ್ನೇ ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಫೈನಲ್ ಗೆ ತಲುಪಿಸಿದ್ದ ಅದರ ಕೋಚ್ ಸಂಜಯ್ ಬಂಗಾರ್ ಬಗ್ಗೆಯೂ ಹಿರಿಯ ಆರಂಭಿಕ ಬ್ಯಾಟ್ಸ್‍ಮನ್ ವೀರೇಂದ್ರ ಸೆಹ್ವಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಬಂಗಾರ್, ಆಟಗಾರರೊಂದಿಗೆ ಸ್ನೇಹಿತರಂತೆ ಇರುತ್ತಾರೆ. ಹಾಗಾಗಿ, ಆಟಗಾರರಿಗೆ ಮುಕ್ತವಾಗಿ ಕೋಚ್ ಜೊತೆ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ ಎಂದು ಸೆಹ್ವಾಗ್ ಈ ಮುನ್ನ ಹೇಳಿದ್ದರು.
ಭಾರತ ತಂಡ ವಿಶ್ವಕಪ್ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ಎದುರು ಸೋತ ನಂತರ ಕೋಚ್ ಡಂಕನ್ ಫ್ಲೆಚರ್ ಅವರ ಅವಧಿ ಮುಕ್ತಾಯವಾಗಿದೆ. ಕಳೆದ ಆಗಸ್ಟ್ ನಲ್ಲಿ ಫ್ಲೆಚರ್‍ಗೆ ನೆರವಾಗಲು ಬಂಗಾರ್‍ರನ್ನು ನೇಮಿಸಲಾಗಿತ್ತು. ಅವರೊಂದಿಗೆ ಫೀಲ್ಡಿಂಗ್ ಲ್ಡಿಂಗ್ ಕೋಚ್ ಆರ್. ಶ್ರೀಧರ್ ಕೂಡ ಇದ್ದರು.
ಬಳಿಕ ತಂಡದ ನಿರ್ದಶಕನ ರೂಪದಲ್ಲಿ ರವಿಶಾಸ್ತ್ರಿ ಸಹ ಫ್ಲೆಚರ್ ಗೆ ಸಾಥ್ ಕೊಟ್ಟಿದ್ದರು. ಕೋಚ್ ಆಗಿ ಫ್ಲೆಚರ್ ವಿಫಲರಾದ ಕಾರಣಕ್ಕೆ ಅವರ ವಿರುದ್ಧ ಅನೇಕ ಟಿಕೆಗಳು ವ್ಯಕ್ತವಾಗಿದ್ದಾಗ ಈ ರೀತಿಯ ಬದಲಾವಣೆಗಳು ಅನಿವಾರ್ಯವಾಗಿದ್ದವು.
ವಿದೇಶಿ ಕೋಚ್‍ಗೆ ತಂಡದ 15 ಆಟಗಾರರ ಬಗ್ಗೆ ಮಾತ್ರ ಗೊತ್ತಿರುತ್ತದೆ. ಮಿಕ್ಕ ದೇಶೀಯ ಪ್ರತಿಭೆಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಆಟಗಾರರಿಗೂ ಸಹ ಮುಕ್ತವಾಗಿ ಬೆರೆಯಲು ಕಷ್ಟವಾಗುತ್ತದೆ. ಆದರೆ, ಸ್ವದೇಶರಾದವರಿಗೆ ಪ್ರತಿಯೊಬ್ಬ ಆಟಗಾರ ನಾಡಿಮಿಡಿತ ತಿಳಿದಿರುತ್ತದೆ.
ಅವರಿಂದ ಹೆಚ್ಚೆಚ್ಚು ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ನಮ್ಮಲ್ಲಿಯೇ ಕೋಚ್ ಹುದ್ದೆಗೆ ಸಮರ್ಥರು ಇರುವಾಗ ವಿದೇಶಿಗರ ಅನಿವಾರ್ಯತೆ ಏಕೆ ಎಂದು ಭಾರತ ತಂಡ ಮಾಜಿ ನಾಯಕ ಹಾಗೂ ಮುಖ್ಯ ಆಯ್ಕೆದಾರರೂ ಆಗಿದ್ದ ದಿಲೀಪ್ ವೆಂಗ್‍ಸರ್ಕಾರ್ ಹೇಳಿದ್ದಾರೆ.
ಎಲ್ಲ ಸಂದರ್ಭದಲ್ಲೂ ವಿದೇಶಿ ಕೋಚ್ ಹೊಂದುವುದು ಸರಿಯಲ್ಲ. ನಮ್ಮಲ್ಲಿಯೂ ಉತ್ತಮ ಕೋಚ್‍ಗಳಿದ್ದಾರೆ ಎಂಬುದು ಮಾಜಿ ವಿಕೆಟ್ ಕೀಪರ್ ಹಾಗೂ ಮುಖ್ಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದ ಕಿರಣ್ ಮೋರೆ ಪ್ರತಿಕ್ರಿಯಿಸಿದ್ದಾರೆ.