ಕ್ರೀಡೆ

ಜಿತು, ಅಭಿನವ್ ಬಿಂದ್ರಾ, ಗಗನ್ ಬಗ್ಗೆ ಭರವಸೆ

Srinivasamurthy VN

ನವದೆಹಲಿ: ಕೊರಿಯಾದ ಚಾಂಗ್ ವಾಂಗ್‍ನಲ್ಲಿ ಬುಧವಾರದಿಂದ ಆರಂಭಗೊಳ್ಳಲಿರುವ ಐಎಸ್‍ಎಸ್‍ಎಫ್ ರೈಫಲ್ ಹಾಗೂ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾಗವಹಿಸಲಿರುವ ಭಾರತೀಯ ತಂಡದಲ್ಲಿ ಹಿರಿಯ ಶೂಟರ್‍ಗಳಾದ ಜಿತು ರೈ, ಅಭಿನವ್ ಬಿಂದ್ರಾ ಹಾಗೂ ಗಗನ್ ನಾರಂಗ್ ಭಾಗವಹಿಸುತ್ತಿದ್ದು, ಅವರ ಮೇಲೆ ಪದಕ ನಿರೀಕ್ಷೆ ಹೆಚ್ಚಿವೆ.

ಈ ವಿಶ್ವಕಪ್ ಟೂರ್ನಿಯು 2016ರಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿರುವುದರಿಂದ ಮಹತ್ವವೆನಿಸಿದ್ದು, ಈ ಮೂವರೂ ಕ್ರೀಡಾಳುಗಳು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಒಲಿಂಪಿಕ್ಸ್ ಪಂದ್ಯಾವಳಿಗೆ ಅರ್ಹತೆ ಪಡೆಯಲು ಈ ಟೂರ್ನಿಯಲ್ಲಿ ಒಟ್ಟು 24 (14 ಪುರುಷರು, 10 ಮಹಿಳೆಯರು) ಕ್ರೀಡಾಳುಗಳಿಗೆ ಅವಕಾಶವಿದೆ. ಕಳೆದ ವರ್ಷ ಜಿತು ರೈ ಏಳು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದು ಅಪೂರ್ವ ಸಾಧನೆ ಮಾಡಿದ್ದರು.

ಇವುಗಳಲ್ಲಿ ಏಷ್ಯನ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಗಳಿಸಿದ ಚಿನ್ನದ ಪದಕ ಹಾಗೂ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಗಳಿಸಿದ ಬೆಳ್ಳಿ ಪದಕವೂ ಸೇರಿದೆ. ಇನ್ನು ಲಂಡನ್ ಒಲಿಂಪಿಕ್ಸ್‍ನ ಚಿನ್ನದ ಪದಕ ವಿಜೇತರಾಗಿರುವ ಬಿಂದ್ರಾ, ವಿಶ್ವಕಪ್ ಟೂರ್ನಿಯಲ್ಲಿ 10 ಮೀ. ಏರ್ ರೈಫಲ್ ವಿಭಾಗ ದಲ್ಲಿ ಸ್ಪರ್ಧಿಸಲಿದ್ದಾರೆ. ಲಂಡನ್ ಒಲಿಂಪಿಕ್ಸ್‍ನಲ್ಲಿ ಕಂಚಿನ ಗೌರವ ತಂದಿದ್ದ ಗಗನ್ ನಾರಂಗ್, ಸದ್ಯಕ್ಕೆ ವಿಶ್ವ ಶೂಟಿಂಗ್ ರ್ಯಾಂಕಿಂಗ್‍ನಲ್ಲಿ 6ನೇ ಸ್ಥಾನದಲ್ಲಿದ್ದು, ವಿಶ್ವಕಪ್ ಟೂರ್ನಿ ಯಲ್ಲಿ 50 ಮೀ. ರೈಫಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಭಾರತೀಯ ಮಹಿಳಾ ಶೂಟರ್‍ಗಳಾದ ಅಯೋನಿಕಾ ಪೌಲ್, ಹೀನಾ ಸಿಧು ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.

SCROLL FOR NEXT