ಬೆಂಗಳೂರು: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ ಪ್ರಕರಣ ರದ್ದು ಕೋರಿ ಮಹೇಂದ್ರ ಸಿಂಗ್ ಧೋನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಮೂರ್ತಿ ಎ.ಎನ್ ವೇಣುಗೋಪಾಲಗೌಡ ಅವರು ಧೋನಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಹಣಕ್ಕಾಗಿ ಸೆಲೆಬ್ರಿಟಿಗಳು ಏನೇನೆಲ್ಲಾ ದಾರಿ ಹಿಡಿತ್ತಾರೆ. ಇಂತ ಸೆಲೆಬ್ರಿಟಿಗಳ ಹಿಂದೆ ಜನರೂ ಬೀಳುತ್ತಾರೆ ಇದು ದುರಾದೃಷ್ಟಕರ. ಈ ಸೆಲೆಬ್ರಿಟಿಗಳು ಕಷ್ಟಪಟ್ಟು ದುಡಿಯಲ್ಲ, ಇವರಿಗೆ ಸುಲಭದಲ್ಲಿ ಹಣ ಬೇಕು ಎಂದು ಧೋನಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಹಾಜರಿದ್ದ ಧೋನಿ ಪರ ವಕೀಲರು ಈ ಜಾಹಿರಾತಿಗಾಗಿ ಧೋನಿ ಸಂಭಾವನೆ ಪಡೆದಿಲ್ಲ ಎಂದು ಹೇಳಿದರು. ಇದಕ್ಕೆ ನ್ಯಾಯಾಧೀಶರು ಜಾಹಿರಾತಿಗೆ ಧೋನಿ ಸಂಭಾವನೆ ಪಡೆದಿಲ್ಲ ಎನ್ನುವುದಾದರೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಇಂದು ಧೋನಿ ಹಾಜರಾಗಬೇಕಿತ್ತು. ಆದರೆ ಧೋನಿಗೆ ವಿನಾಯಿತಿ ನೀಡಲಾಗಿದೆ.
ಬಿಸಿನೆಸ್ ಟುಡೇ ವಾರಪತ್ರಿಕೆಯ ಜಾಹೀರಾತು ಒಂದರಲ್ಲಿ ಮಹೇಂದ್ರ ಸಿಂಗ್ ಧೋನಿಯು ವಿಷ್ಣು ದೇವರ ಅವತಾರದಲ್ಲಿ ಕೈಯಲ್ಲಿ ಶೂ ಹಾಗೂ ಇತರ ವಸ್ತುಗಳನ್ನು ಹಿಡಿದು ಕಾಣಿಸಿಕೊಂಡಿದ್ದರು. ಇದು ಹಿಂದೂ ಧರ್ಮಕ್ಕೆ ವಿರುದ್ದವಾಗಿತ್ತಲ್ಲದೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ಜಯಕುಮಾರ್ ಹೀರೆಮಠ್ ಎಂಬವರು ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದರು.