ಕ್ರೀಡೆ

ಶ್ರೀನಿವಾಸನ್ ಕುರಿತ ಆದೇಶದ ಬಗ್ಗೆ ಬಿಸಿಸಿಐ ಸದಸ್ಯರಲ್ಲೇ ಭಿನ್ನಾಭಿಪ್ರಾಯ

Srinivas Rao BV

ಚೆನ್ನೈ: ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಈಗ ಬಿಸಿಸಿಐ ಸದಸ್ಯರನ್ನೇ ಭಿನ್ನಾಭಿಪ್ರಾಯ ಮೂಡಿಸಿದೆ.

ಫೆಬ್ರವರಿಯಲ್ಲಿ ನೀಡಿದ್ದ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಬಿಸಿಸಿಐ ಸದಸ್ಯರಲ್ಲೇ ಒಡಕು ಮೂಡಿಸಿದ್ದು, ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಸಮಿತಿಯ ಸಭೆಗಳಲ್ಲಿ ಭಾಗವಹಿಸುವ ವಿಚಾರದಲ್ಲಿ ಗೊಂದಲ ಉಂಟಾಗಿದೆ. 

ಕೆಲವು ಸದಸ್ಯರು ಶ್ರೀನಿವಾಸನ್ ಅವರು ತಮಿಳುನಾಡು ಕ್ರಿಕೆಟ್ ಸಮಿತಿಯ ಪ್ರತಿನಿಧಿಯಾಗಿ ಭಾಗವಹಿಸಬಹುದು ಎಂದು ವಾದಿಸುತ್ತಿದ್ದರೆ ಇನ್ನೂ ಕೆಲವರು ಶ್ರೀನಿವಾಸನ್ ಸ್ಥಾನಮಾನದ ಬಗ್ಗೆ ಗೊಂದಲ ಇರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎನ್ನುತ್ತಿದ್ದಾರೆ.

ಶ್ರೀನಿವಾಸನ್ ಅವರ ಉಪಸ್ಥಿತಿ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಬಿಸಿಸಿಐ ಕಾರ್ಯಕಾರಿಣಿ ಸಭೆಯನ್ನು ಹಾಲಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಬಿಸಿಸಿಐ ನಲ್ಲಿ ಶ್ರೀನಿವಾಸನ್ ಅವರ ಸ್ಥಾನಮಾನದ ಬಗ್ಗೆ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೇ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ಅಭಿಪ್ರಾಯ ಕೇಳಲು ಬಿಸಿಸಿಐ ನಿರ್ಧರಿಸಿತ್ತು.

ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಫೆ.7 ರ ಆದೇಶದ ಪ್ರಕಾರ, ಅಂತಿಮ ತೀರ್ಪು ಬರುವವರೆಗೂ ಶ್ರೀನಿವಾಸನ್ ಬಿಸಿಸಿಐ ನ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಐಪಿಎಲ್ ಹಗರಣದ ಬಗ್ಗೆ ತೀರ್ಪು ಪ್ರಕಟಿಸಿರುವ ನ್ಯಾ.ಲೋಧಾ ಸಮಿತಿ, ಈಗ ಬಿಸಿಸಿಐ ನ ಪುನಾರಚನೆ ಹಾಗೂ ಶ್ರೀನಿವಾಸನ್ ಅವರಿಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ನ ಮಾಜಿ ಅಧ್ಯಕ್ಷ ಸಭೆಗಳಲ್ಲಿ ಭಾಗವಹಿಸುವುದರ ಬಗ್ಗೆ ಗೊಂದಲ ಉಂಟಾಗಿದೆ.

SCROLL FOR NEXT