ಟೀಂ ಇಂಡಿಯಾ (ಸಂಗ್ರಹ ಚಿತ್ರ)
ಕೊಲಂಬೊ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಆಕ್ರಮಣಕಾರಿ ಹೋರಾಟ ನಡೆಸಿರುವ ಪ್ರವಾಸಿ ಭಾರತ ತಂಡ, ಆತಿಥೇಯ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಪರಿಣಾಮ ದ್ವೀಪರಾಷ್ಟ್ರ ಶ್ರೀಲಂಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ತನ್ನ ಎರಡನೇ ಇನ್ನಿಂಗ್ಸ್ ನಲ್ಲಿನ ಅಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ಮೆಟ್ಟಿನಿಂತು 274 ರನ್ ಗಳಿಗೆ ಆಲೌಟ್ ಆದ ಭಾರತ, ಆತಿಥೇಯರಿಗೆ 386 ರನ್ ಗುರಿ ನೀಡಿದೆ. ಇದಕ್ಕೆ ಉತ್ತರವಾಗಿ 18.1 ಓವರ್ ಗಳಲ್ಲಿ 3 ವಿಕೆಟ್‍ಗೆ 67 ರನ್ ಗಳಿಸಿರುವ ಶ್ರೀಲಂಕಾ, ಗೆಲುವು ಸಾಧಿಸಲು 319 ರನ್ ಗಳನ್ನು ಪೇರಿಸಬೇಕಿದೆ. ಮಂಗಳವಾರ ಪಂದ್ಯದ ಕೊನೇ ದಿನವಾಗಿದ್ದು ಭಾರೀ ಸವಾಲು ಆತಿಥೇಯರ ಮುಂದಿದ್ದರೆ, ಉಳಿದಿರುವ ಏಳು ವಿಕೆಟ್‍ಗಳನ್ನು ಕಿತ್ತು 22 ವರ್ಷಗಳ ಬಳಿಕ ದ್ವೀಪರಾಷ್ಟ್ರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅಪೂರ್ವ ಅವಕಾಶಕ್ಕಾಗಿ ಕೊಹ್ಲಿ ಪಡೆ ತಹತಹಿಸುತ್ತಿದೆ. ನಾಲ್ಕನೇ ದಿನದಾಟ ನಿಂತಾಗ ಶ್ರೀಲಂಕಾ ಪರ ನಾಯಕ ಏಂಜೆಲೊ ಮ್ಯಾಥ್ಯೂಸ್ ಹಾಗೂ ಕೌಶಲ್ ಸಿಲ್ವಾ ಕ್ರಮವಾಗಿ 22 ಹಾಗೂ 24 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ಕೊನೆಯ ದಿನದಾಟವನ್ನು 98 ಓವರ್ ಗಳಿಗೆ ನಿಗದಿಗೊಳಿಸಲಾಗಿದ್ದು, ಒಂದೊಮ್ಮೆ ಮಳೆರಾಯನ ಉಪಟಳವಿಲ್ಲದಿದ್ದರೆ ಪಂದ್ಯದ ಕೌತುಕತೆಯನ್ನು ಆಸ್ವಾದಿಸಬಹುದಾಗಿದೆ.
ಅಂದಹಾಗೆ ಈ ಎಸ್‍ಎಸ್‍ಸಿ ಮೈದಾನದಲ್ಲಿ ಶ್ರೀಲಂಕಾ ಒಮ್ಮೆಯೂ ಇಂಥದ್ದೊಂದು ಬೃಹತ್ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ದಾಖಲೆಗಳಿಲ್ಲ. ಹೆಚ್ಚೆಂದರೆ 10 ವರ್ಷಗಳ ಹಿಂದೆ ದ.ಆಫ್ರಿಕಾ ವಿರುದ್ಧ 352 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಭೇದಿಸಿ ಜಯ ಸಾಧಿಸಿತ್ತಷ್ಟೆ. ಆ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಲಂಕಾ ಪರ ಅದ್ಭುತ ಶತಕ ಬಾರಿಸುವ ಮೂಲಕ ಭರ್ಜರಿ ಜಯ ತಂದುಕೊಟ್ಟಿದ್ದರು. ಆದರೆ, ಈ ಬಾರಿ ಅದು ಅಂಥದ್ದೇ ಚಾರಿತ್ರಿಕ ಗೆಲುವು ಸಾಧಿಸುವುದು ಭಾರೀ ಕಷ್ಟತಮವಾಗಿದೆ. ಏಕೆಂದರೆ ಭಾರತದ ಬೌಲರ್ ಗಳು ತೋರುತ್ತಿರುವ ಮೊನಚಿನ ಪ್ರದರ್ಶನ ಸಿಂಹಳೀಯರ ಪಾಳೆಯದಲ್ಲಿ ನಡುಕ ಉಂಟುಮಾಡಿದೆ.
ಭಾರತದ ದ್ವಿತೀಯ ಇನ್ನಿಂಗ್ಸ್ ಕೊನೆಗೊಳ್ಳುತ್ತಿದ್ದಂತೆ ಧಾವಂತದಿಂದಲೇ ತನ್ನ ಎರಡನೇ ಇನ್ನಿಂಗ್ಸ್ ಗೆ ಇಳಿದ ಶ್ರೀಲಂಕಾಗೆ ವೇಗಿ ಇಶಾಂತ್ ಶರ್ಮಾ ಮೊದಲ ಓವರ್ ನಲ್ಲೇ ಆಘಾತ ನೀಡಿದರು. ಓವರ್ ನ ಕೊನೇ ಎಸೆತದಲ್ಲಿ ಆರಂಭಿಕ ಉಪುಲ್ ತರಂಗ ವಿಕೆಟ್ ಎಗರಿಸಿದ ಇಶಾಂತ್, ಲಂಕಾದ ಆತ್ಮವಿಶ್ವಾಸವನ್ನು ಶುರುವಿನಲ್ಲೇ ಘಾಸಿಗೊಳಿಸಿದರು. ಬಳಿಕ ಬಂದ ದಿಮುತ್ ಕರುಣಾರತ್ನೆ (0) ಉಮೇಶ್ ಯಾದವ್ ಬೌಲಿಂಗ್ ನಲ್ಲಿ ವಿಕೆಟ್‍ಕೀಪರ್ ನಮಾನ್ ಓಜಾಗೆ ವಿಕ್ಟೆಟ್ ಒಪ್ಪಿಸಿ ನಡೆದರೆ, ತದನಂತರ ಬಂದ ದಿನೇಶ್ ಚಂಡಿಮಾಲ್ (18) ಬಿರುಸಿನ ಆಟಕ್ಕೆ ಮುಂದಾಗಿ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಹೀಗೆ 21 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಲಂಕಾಗೆ ಮ್ಯಾಥ್ಯೂಸ್ ಹಾಗೂ ಸಿಲ್ವಾ ಜೋಡಿ 4ನೇ ವಿಕೆಟ್‍ಗೆ 46 ರನ್ ಗಳ ಮುರಿಯದ ಜತೆಯಾಟವಾಡುವ ಮೂಲಕ ಗುಟುಕು ಜೀವ ನೀಡಿತು.
ಇನ್ನು ಕೇವಲ 7 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆತಂಕಕಾರಿಯಾಗಿ ಕೂಡಿದ್ದ ಭಾರತದ ಎರಡನೇ ಇನ್ನಿಂಗ್ಸ್ ಸೋಮವಾರ ನವಚೈತನ್ಯ ಪಡೆಯಿತು. ಲಂಕಾ ವೇಗಿಗಳ ದಾಳಿಯ ಮಧ್ಯೆಯೂ ಪ್ರಭಾವಿ ಬ್ಯಾಟಿಂಗ್ ನಡೆಸಿದ ಭಾರತದ ಬ್ಯಾಟ್ಸ್ ಮನ್ನರು ಆತಿಥೇಯರು ಹೆಚ್ಚು ಆರ್ಭಟಿಸದಂತೆ ನೋಡಿಕೊಂಡರಲ್ಲದೆ, ಸ್ಪರ್ಧಾತ್ಮಕ ಮೊತ್ತದ ಗುರಿ ನೀಡುವಲ್ಲಿ ಸಫಲರಾದರು. ಮತ್ತೆ ಇಶಾಂತ್ ಮಾತಿನ ಚಕಮಕಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಮತ್ತೊಮ್ಮೆ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುವಾಗ ಲಂಕಾ ವೇಗಿ ಧಮ್ಮಿಕಾ ಪ್ರಸಾದ್ ಜತೆ ಜಗಳವಾಡಿದ್ದಾರೆ.
ಸೋಮವಾರದ ದಿನದಾಟದಲ್ಲಿ ಭಾರತದ ಎರಡನೇ ಇನಿಂಗ್ಸ್ ನ 76ನೇ ಓವರ್ ವೇಳೆ ಇಶಾಂತ್ ಶರ್ಮಾಗೆ ಧಮ್ಮಿಕಾ ಪ್ರಸಾದ್ ಆರಂಭದಲ್ಲಿ ಎರಡು ಬೌನ್ಸರ್ ಎಸೆದರು. ಈ ಎಸೆತಗಳನ್ನು ಮುಟ್ಟದ ಇಶಾಂತ್ ಕಿರುನಗೆ ಬೀರಿದರು. ಒಂದು ಓವರ್ ನಲ್ಲಿ ಬೌಲರ್ ಕೇವಲ 2 ಬೌನ್ಸರ್ ಎಸೆತಕ್ಕೆ ಮಾತ್ರ ಅವಕಾಶ ಇದೆ. ನಂತರ ಪ್ರಸಾದ್ ಮೂರನೇ ಬೌನ್ಸರ್ ಎಸೆದಾಗ ಅಂಪೈರ್ ನೋಬಾಲ್ ನೀಡಿದರು. ಮುಂದಿನ ಎಸೆತದಲ್ಲಿ ಪ್ರಸಾದ್ ಫುಲ್ ಲೆನ್ತ್ ಮಾಡಿದಾಗ ಒಂದು ರನ್ ಪಡೆದ ಇಶಾಂತ್, ತನ್ನ ತಲೆಗೆ ಗುರಿ ಇಟ್ಟು ಬೌನ್ಸರ್ ಮಾಡುವಂತೆ ಸೂಚಿಸಿದರು. ಈ ವೇಳೆ ಪ್ರಸಾದ್ ಹಾಗೂ ಇಶಾಂತ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ದಿನೇಶ್ ಚಂಡಿಮಾಲ್ ಸಹ ಮಧ್ಯೆಪ್ರವೇಶಿಸಿ ಇಶಾಂತ್ ಜತೆ ವಾಗ್ವಾದ ನಡೆಸಿದರು.
ಈ ವೇಳೆಗೆ ಅಂಪೈರ್ ಹಾಗೂ ಆರ್. ಅಶ್ವಿನ್ ಮಧ್ಯಪ್ರವೇಶಿಸಿದರು. ನಂತರ ಶ್ರೀಲಂಕಾದ ಎರಡನೇ ಇನಿಂಗ್ಸ್ ನಲ್ಲಿ ಚಂಡಿಮಾಲ್ ವಿಕೆಟ್ ಪಡೆದ ಇಶಾಂತ್ ಶರ್ಮಾ ತಮ್ಮ ತಲೆಗೆ ಬಡಿದುಕೊಂಡು ಸಂಭ್ರಮಿಸಿದರು. ಎರಡನೇ ಟೆಸ್ಟ್ ಪಂದ್ಯದ ವೇಳೆ ಇಶಾಂತ್ ಶರ್ಮಾ, ಕುಶಾಲ್ ಪೆರೇರಾ ಮತ್ತು ರಂಗನಾ ಹೆರಾಥ್ ಜತೆ ವಾಗ್ವಾದ ನಡೆಸಿ ಪಂದ್ಯದ ಶೇ.65ರಷ್ಟು ಸಂಭಾವನೆಯ ದಂಡ ತೆತ್ತಿದ್ದರು.