ಬೆಂಗಳೂರು: ಪಂದ್ಯದ ಪೆನಾಲ್ಟಿ ಶೂಟೌಟ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕ್ರೈಸ್ಟ್ ವಿಶ್ವವಿದ್ಯಾಲಯ `ಬಿ' ತಂಡವು ಕೆಎಸ್‍ಎಫ್ ಎ ಪ್ರೆಸಿಡೆಂಟ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಗುರುವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯ ತಂಡವು 3-0 ಗೋಲುಗಳ ಅಂತರದಲ್ಲಿ ತಮ್ಮ ಪ್ರತಿಸ್ಪರ್ಧಿ ಜೈನ್ ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು. ಆ ಮೂಲಕ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಯಿತು. ಪೆನಾಲ್ಟಿ ಶೂಟೌಟ್ ವೇಳೆ ಕ್ರೈಸ್ಟ್ ತಂಡದ ಪರ ಅರ್ಜುನ್, ಅಲೆಕ್ಸ್ ಮತ್ತು ಮೌಜಹಿದ್ ಗೋಲು ದಾಖಲಿಸಿದರು. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತೀವ್ರ ಹೋರಾಟ ನಡೆಸಿದ ಪರಿಣಾಮ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಮೊರೆ ಹೋಗಲಾಯಿತು.