ಗುರ್‍ಗಾವ್: ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಹರ್ಯಾಣ ಹ್ಯಾಮರ್ಸ್ ತಂಡ ಚೊಚ್ಚಲ ಪ್ರೊ. ರೇಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿದೆ.
ಬುಧವಾರ ಗುರ್‍ಗಾವ್‍ನಲ್ಲಿ ಆರಂಭವಾದ ದ್ವಿತೀಯ ಹಂತದ ಟೂರ್ನಿಯ ಮೊದಲ ದಿನ ಹರ್ಯಾಣ ಹ್ಯಾಮರ್ಸ್ ತಂಡ ಬೆಂಗಳೂರು ಯೋಧಾಸ್ ವಿರುದ್ಧ 4-3 ಅಂತರದ ರೋಚಕ ಜಯ ಸಂಪಾದಿಸಿತು. ಆ ಮೂಲಕ ಪ್ರಶಸ್ತಿ ಗೆಲ್ಲುವಫೇವರಿಟ್ ತಂಡವಾಗಿ ಬಿಂಬಿತವಾಗಿರುವ ಬೆಂಗಳೂರು ಯೋಧಾಸ್ ತಂಡ ಸತತ ಎರಡನೇ ಸೋಲನುಭವಿಸಿದೆ. ಈ ಸೆಣಸಾಟದಲ್ಲಿ ಆತ್ಮೀಯ ಸ್ನೇಹಿತರಾದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಮತ್ತು ಬಜರಂಗ್ ಪುನಿಯಾ ಅವರ ನಡುವಣ ಪುರುಷರ 65 ಕೆ.ಜಿ ವಿಭಾಗದ ಕಾದಾಟ ಹೆಚ್ಚು ಆಕರ್ಷಕವಾಗಿತ್ತು.
ಈ ಪಂದ್ಯದಲ್ಲಿ ಬಜರಂಗ್ ತನ್ನ ಹಿರಿಯ ಹಾಗೂ ಮಾರ್ಗದರ್ಶಕ ಯೋಗೇಶ್ವರ್‍ಗೆ ತಾಂತ್ರಿಕವಾಗಿ ಸಾಕಷ್ಟು ಉತ್ತಮ ಸವಾಲು ನೀಡಿದರು. ಆದರೆ, 3-2 ಅಂತರದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಪುರುಷರ 57 ಕೆ.ಜಿ ವಿಭಾಗದ ಪಂದ್ಯದವೂ ಸಹ ರೋಚಕ ಸೆಣಸಾಟಕ್ಕೆ ಸಾಕ್ಷಿಯಾಯಿತು. ಹರ್ಯಾಣ ತಂಡದ ನಿತೀನ್ ರಾತೀ ಮತ್ತು ಪ್ರತಿಸ್ಪರ್ಧಿ ಸಂದೀಪ್ ತೋಪಾರ್ ಜಿದ್ದಾಜಿದ್ದಿನ ಹೋರಾಟ ನಡೆಸಿದರಾದರೂ ಅಂತಿಮ ವಾಗಿ ನಿತೀನ್ 9-8 ಅಂತರದಲ್ಲಿ ಮುನ್ನಡೆ ಸಾಧಿಸಿದರು.
ಮಹಿಳೆಯರ 53 ಕೆ.ಜಿ ವಿಭಾಗದ ಪಂದ್ಯದಲ್ಲಿ ಟಟಿಯನಾ ಕಿಟ್ ಯೋಧಾಸ್ ನ ಲಲಿತಾ ಶೆರಾವತ್ ವಿರುದ್ಧ ಅರ್ಹ ಜಯ ಸಂಪಾದಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಬೆಂಗಳೂರಿನ ಪಾವ್ಲೊ ಒಲಿನಿಕ್ ಪುರುಷರ 97 ಕೆ.ಜಿ ವಿಭಾಗದ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಹ್ಯಾಮರ್ಸ್ ತಂಡದ ಅಂತರವನ್ನು ಕಡಿಮೆ ಮಾಡಿದರು. ಪಾವ್ಲೊ ತಮ್ಮ ಪ್ರತಿಸ್ಪರ್ಧಿ ಉಕ್ರೇನ್‍ನ ಯೂರಿ ಮೈರ್ ವಿರುದ್ಧ ತಾಂತ್ರಿಕ ಮಾದರಿ ಆಧಾರದ ಮೇಲೆ 10-0 ಮುನ್ನಡೆ ಪಡೆದರು. ಹರ್ಯಾಣ ತಂಡದ ಗೀತಿಕಾ ಜಖಾರ್ ಮಹಿಳೆಯರ 69 ಕೆ.ಜಿ ವಿಭಾಗದ ಪಂದ್ಯದಲ್ಲಿ ಬೆಂಗಳೂರಿನ ನವ್‍ಜೋತ್ ಕೌರ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.