ಬೆಂಗಳೂರು: ಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯ ಲೀಗ್ ಹಂತವು ಮುಕ್ತಾಯದ ಹಂತ ತಲುಪಿದ್ದು, ಅಂತಿಮ ಹಂತದ ಲೀಗ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ.
ಅದಕ್ಕಾಗಿ ಕೋರಮಂಗಲದ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದ್ದು, ಎರಡು ದಿನಗಳ ಕಾಲ ಕುಸ್ತಿಪ್ರಿಯರ ಆಸಕ್ತಿಯ ಕೇಂದ್ರವಾಗಲಿದೆ. ಈ ಆವೃತ್ತಿಯಲ್ಲಿ ಎರಡು ಹಣಾಹಣಿಗಳು ನಡೆಯಲಿದ್ದು, ಮೊದಲ ದಿನ ಆತಿಥೇಯ ಬೆಂಗಳೂರು ಯೋಧಾಸ್ ಹಾಗೂ ದಿಲ್ಲಿ ವೀರ್ಸ್ ಮುಖಾಮುಖಿಯಾದರೆ ಎರಡನೇ ದಿನ ಮುಂಬೈ ಗರುಡ ಹಾಗೂ ಹರ್ಯಾಣ ಹ್ಯಾಮರ್ಸ್ ಸೆಣಸಲಿವೆ.
ಸೆಮಿ ಫೈನಲ್ ಗೆ ಯೋಧಾಸ್: ಪಂದ್ಯಾವಳಿಯಲ್ಲಿ ಈವರೆಗಿನ ಲೀಗ್ ಪಂದ್ಯಗಳಲ್ಲಿ ಕೇವಲ 2 ಗೆಲುವನ್ನಷ್ಟೇ ಕಂಡಿರುವ ಬೆಂಗಳೂರು ಯೋಧಾಸ್ ತಂಡಕ್ಕೆ ಇನ್ನೊಂದೇ ಪಂದ್ಯ ಬಾಕಿಯಿದೆ. ಅಲ್ಲಿ ಸೋತರೂ ಗೆದ್ದರೂ ಅದು ಉಪಾಂತ್ಯಕ್ಕೆ ಕಾಲಿಡುವುದು ಖಚಿತ.
ಟೂರ್ನಿಯಲ್ಲಿ ಪಾಲ್ಗೊಂಡಿರುವ 6 ತಂಡಗಳಲ್ಲಿ ಯುಪಿ ವಾರಿಯರ್ಸ್ ಹಾಗೂ ದಿಲ್ಲಿ ವೀರ್ಸ್ ಈಗಾಗಲೇ ನಾಕೌಟ್ ಹಂತದಿಂದ ಹೊರನಡೆದಿವೆ. ಇನ್ನು, ಈವರೆಗೆ ತಾನು ಆಡಿರುವ ನಾಲ್ಕು ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದಿರುವ ಮುಂಬೈ ತಂಡ, 8 ಅಂಕಗಳೊಂದಿಗೆ ಅಂಕಪಟ್ಟಿಯ ಅಗ್ರ ಸ್ಥಾನದಲ್ಲಿದ್ದು, ಅದರ ಹಿಂದೆ ಅದೇ ಸಾಧನೆಯನ್ನು ಮಾಡಿರುವ ಹರ್ಯಾಣ ಹ್ಯಾಮರ್ಸ್ ತಂಡ 2ನೇ ಸ್ಥಾನದಲ್ಲಿದೆ. ಇನ್ನು, ಲೀಗ್ ಹಂತದಲ್ಲಿ ತನ್ನ ಪಾಲಿನ ಐದೂ ಪಂದ್ಯಗಳಲ್ಲಿ 3 ಜಯ ದಾಖಲಿಸಿ, 6 ಅಂಕ ಗಳಿಸಿರುವ ಪಂಜಾಬ್ ರಾಯಲ್ಸ್ ಮೂರನೇ ಸ್ಥಾನದಲ್ಲಿದೆ. ಇದರ ಹಿಂದೆ, ಅಂದರೆ ನಾಲ್ಕನೇ ಸ್ಥಾನದಲ್ಲಿ ಬೆಂಗಳೂರು ಯೋಧಾಸ್ ಪಡೆ ಇದೆ.
ಈವರೆಗಿನ ಲೀಗ್ ಹಂತದಲ್ಲಿ ತಾನು ಆಡಿರುವ 4ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯ ಕಂಡಿದೆ. ಈ ಹಿನ್ನೆಲೆಯಲ್ಲಿ, ಒಟ್ಟಾರೆಯಾಗಿ 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಸದ್ಯ 4ನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಯೋಧಾಸ್ ಪಾಲಿಗೆ ಇನ್ನೊಂದೇ ಪಂದ್ಯ ಬಾಕಿ ಉಳಿದಿದ್ದು ಬುಧವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅದು ದಿಲ್ಲಿ ವೀರ್ಸ್ ವಿರುದ್ಧ ಸೆಣಸಲಿದೆ. ಈಪಂದ್ಯದಲ್ಲಿ ಗೆದ್ದರೆ 3ನೇ ಸ್ಥಾನಕ್ಕೇರುವ ಯೋಧಾಸ್, ಸೋತರೆ 4ನೇ ಸ್ಥಾನದಲ್ಲೇ ಉಳಿಯಲಿದೆ. 6 ತಂಡಗಳಲ್ಲಿ 4 ತಂಡಗಳು ಸೆಮೀಸ್ಗೆ ಕಾಲಿಡುವುದರಿಂದ ಯೋಧಾಸ್ ಸೆಮಿಫೈನಲ್ ಸೆಣಸು ಗ್ಯಾರಂಟಿ.
ಹರ್ಯಾಣಕ್ಕೆ ಜಯ: ಮಂಗಳವಾರ ರಾತ್ರಿ ನಡೆದ ಹರ್ಯಾಣ ಹ್ಯಾಮರ್ಸ್ ವಿರುದ್ಧದಪಂದ್ಯ ದಲ್ಲಿ ಪಂಜಾಬ್ ರಾಯಲ್ಸ್ ಜಯ ಸಾಧಿಸಿ, ಅಂಕಪಟ್ಟಿಯ 3ನೇ ಸ್ಥಾನಕ್ಕೇರಿದೆ.