ಕ್ರೀಡೆ

ಬ್ಯಾಡ್ಮಿಂಟನ್ ರ್ಯಾಂಕಿಂಗ್: ಹದಿನೇಳನೇ ಸ್ಥಾನಕ್ಕೆ ಏರಿದ ಮನು-ರೆಡ್ಡಿ

Vishwanath S

ಕೌಲಾಲಂಪುರ: ಕಳೆದ ವಾರವಷ್ಟೇ ಮೆಕ್ಸಿಕೋ ಓಪನ್‍ನ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದ ಭಾರತದ ಯುವ ಶಟ್ಲರ್‍ಗಳಾದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಜೋಡಿ, ಶುಕ್ರವಾರ ಬಿಡುಗಡೆಗೊಂಡ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ 17ನೇ ಸ್ಥಾನಕ್ಕೇರಿದೆ. ಅಲ್ಲದೆ, ಇತ್ತೀಚೆಗೆ ಮುಕ್ತಾಯವಾದ ಮೆಕ್ಸಿಕೋ ಓಪನ್ ಪಂದ್ಯಾವಳಿಯಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ರ್ಯಾಂಕಿಂಗ್ ಪಟ್ಟಿ ಪುನಾರಚನೆಯಾಗಿದೆ.

ಕಳೆದ ವಾರಾಂತ್ಯದಲ್ಲಿ ನಡೆದಿದ್ದ ಮೆಕ್ಸಿಕೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‍ನ ಫೈನಲ್ ಪಂದ್ಯದಲ್ಲಿ ಥಾ ಬೋಡಿನ್ ಇಸೆರಾ ಹಾಗೂ ನಿಪಿಟ್ ಫೋನ್ ಪುವಾಂಗ್‍ಪುಪೆಚ್ ಜೋಡಿ ವಿರುದ್ಧ ಜಯ ಸಾಧಿಸಿದ್ದ ಮನು-ರೆಡ್ಡಿ ಜೋಡಿ ಪ್ರಶಸ್ತಿಗೆ ಭಾಜನವಾಗಿತ್ತು. ಈ ಸಾಧನೆಯ ಮೂಲಕ ಈ ಜೋಡಿಯು ಪುರುಷರ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡಿದೆ.

ಸೈನಾ, ಸಿಂಧು ಸ್ಥಾನ ಅಬಾಧಿತ: ಇನ್ನು, ಭಾರತದ ಅಗ್ರ ಶ್ರೇಯಾಂಕಿತೆಯಾದ ಸೈನಾ ನೆಹ್ವಾಲ್ (2ನೇ ಶ್ರೇಯಾಂಕ) ಹಾಗೂ ಪಿ.ವಿ. ಸಿಂಧು (12ನೇ ಶ್ರೇಯಾಂಕ) ಅವರು ರ್ಯಾಂಕಿಂಗ್ ಪಟ್ಟಿಯಲ್ಲಿ ತಾವು ಈ ಹಿಂದೆ ಹೊಂದಿದ್ದ ಸ್ಥಾನಗಳಲ್ಲೇ ಮುಂದುವರಿದಿದ್ದಾರೆ. ಆದರೆ, ಮಹಿಳೆಯರ ಡಬಲ್ಸ್‍ನಲ್ಲಿ ಸ್ಟಾರ್ ಜೋಡಿಯಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ, ಒಂದು ಸ್ಥಾನದ ಇಳಿಕೆ ಕಂಡಿದ್ದು ನೂತನ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ. ಇನ್ನು, ಮೆಕ್ಸಿಕೋ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಪಡೆದ ಜಪಾನ್‍ನ ಶಿಝುಕಾ ಮಾಟ್ಸೊ ಹಾಗೂ ಮಾಮಿ ನೈಟೊ ಜೋಡಿ ಮೂರು ಸ್ಥಾನಗಳ ಏರಿಕೆ ಕಂಡಿದ್ದು ಹಾಲಿ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದೆ.

ಹೈ ಜಂಪ್: ದಕ್ಷಿಣ ಕೊರಿಯಾದ ಶಟ್ಲರ್ ಲೀ ಡಾಂಗ್ ಕೆವುನ್ ಅವರದ್ದಂತೂ ರ್ಯಾಂಕಿಂಗ್ ಪಟ್ಟಿಯಲ್ಲಿ ಹೈಜಂಪ್. ಮೆಕ್ಸಿಕೋ ಓಪನ್‍ನ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ಅವರು, ಆರು ಸ್ಥಾನಗಳ ಏರಿಕೆ ಕಂಡು ನೂತನ ಪಟ್ಟಿಯಲ್ಲಿ 23ನೇ ಸ್ಥಾನ ಪಡೆದಿದ್ದಾರೆ. ಮೆಕ್ಸಿಕೋ ಓಪನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ದಕ್ಷಿಣ ಕೊರಿಯಾದ ಬೇ ಯೆವೊನ್ ಜು, ನೂತನ  ರ್ಯಾಂಕಿಂಗ್ ಪಟ್ಟಿಯಲ್ಲಿ 13ನೇ ಸ್ಥಾನಕ್ಕೇರಿದ್ದಾರೆ.

SCROLL FOR NEXT