ಕ್ರೀಡೆ

ಜೊಕೊ ಚಾಂಪಿಯನ್

Rashmi Kasaragodu

ಮೆಲ್ಬರ್ನ್: ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ತಮ್ಮ ಅತ್ಯದ್ಭುತ ಫಾರ್ಮ್  ಮುಂದುವರಿಸಿದ್ದು, ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ನೊವಾಕ್ ಜೋಕೊವಿಚ್ ತಮ್ಮ ಎದುರಾಳಿ ಬ್ರಿಟನ್ ಆಟಗಾರ ಆಂಡಿ  ಮರ್ರೆ ವಿರುದ್ಧ 7-6(7-5), 6-7(4-7), 6-3, 6-0 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಈ ಮೂಲಕ ಸರ್ಬಿಯಾದ ಆಟಗಾರ ತಮ್ಮ ವೃತ್ತಿ ಜೀವನದ 8ನೇ ಗ್ರ್ಯಾನ್ ಸ್ಲಾಮ್  ಪ್ರಶಸ್ತಿಯನ್ನು ಗೆದ್ದುಕೊಂಡರು. ಅಲ್ಲದೆ 5ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಮೂರು ಗಂಟೆ 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್ ಆರಂಭದಲ್ಲಿ
ಎದುರಾಳಿ ಆಂಡಿ  ಮರ್ರೆ ಅವರಿಂದ ತೀವ್ರ ಪೈಪೋಟಿ  ಎದುರಿಸಿದರಾದರೂ ಅಂತಿಮವಾಗಿ ತಮ್ಮ ನಿಯಂತ್ರಣ ಕಳೆದುಕೊಳ್ಳದೇ ಗೆದ್ದು ಬೀಗಿದರು.
ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಅದರಂತೆಯೇ  ಪಂದ್ಯದ ಆರಂಭಿಕ ಎರಡೂ ಸೆಟ್‍ಗಳು ರೋಚಕ ಹಣಾಹಣಿಗೆ ಸಾಕ್ಷಿಯಾದವು. ಪಂದ್ಯದ ಮೊದಲ ಸೆಟ್‍ನಲ್ಲಿ 7-6 ಅಂತರ ಪಡೆದ ಹಿನ್ನೆಲೆಯಲ್ಲಿ ಟೈ ಬ್ರೇಕರ್ ಮೊರೆ ಹೋಗಲಾಯಿತು. ಆಗ ನಿಯಂತ್ರಣ ಸಾಧಿಸಿದ ಜೊಕೊವಿಚ್ 7-5ರ ಮುನ್ನಡೆಯೊಂದಿಗೆ ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್‍ನಲ್ಲಿ ತಿರುಗಿ ಬಿದ್ದ ಆಂಡಿ ಮರ್ರೆ, ಪ್ರಬಲ ಆಟ ಪ್ರದರ್ಶಿಸಿ ಜೊಕೊವಿಚ್ ಗೆ ಸೆಡ್ಡು ಹೊಡೆದು ನಿಂತರು. ಈ ಸೆಟ್‍ನಲ್ಲಿ ಆ್ಯಂಡಿ ಮರ್ರೆ 7-6 ಅಂತರ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮತ್ತೆ ಟೈ ಬ್ರೇಕರ್ ಅಗತ್ಯ ಬಿದ್ದಿತು. ಇಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿದ ಬ್ರಿಟನ್ ಆಟಗಾರ 7-4 ಅಂತರ ಕಾಯ್ದುಕೊಂಡು 2ನೇ ಸೆಟ್ ಗೆದ್ದುಕೊಂಡರು. ಅಲ್ಲದೆ ಪಂದ್ಯದಲ್ಲಿ ಸಮಬಲ ಸಾಧಿಸಿದರು.ಪಂದ್ಯ ತೀವ್ರ ಹೋರಾಟದ ಹಂತಕ್ಕೆ ತಲುಪಿದಾಗ ತಮ್ಮ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜೊಕೊವಿಚ್ ಮೂರನೇ ಹಾಗೂ ನಾಲ್ಕನೇ ಸೆಟ್‍ನಲ್ಲಿ ಬಿಗಿ ಹಿಡಿತ ಸಾಧಿಸಿ ಕ್ರಮವಾಗಿ 6-3, 6-0 ಅಂಕಗಳ ಮುನ್ನಡೆಂಯೊಂದಿಗೆ  ಜಯದ ನಗೆ ಬೀರಿದರು.

SCROLL FOR NEXT