ಕ್ರೀಡೆ

ರಾಷ್ಟ್ರೀಯ ಕ್ರೀಡೆ: ಅರವಿಂದ್, ಮಾಳವಿಕಾಗೆ ಬೆಳ್ಳಿ ಪದಕ

Srinivasamurthy VN

ತಿರುವನಂತಪುರ: ಕರ್ನಾಟಕದ ಭರವಸೆಯ ಈಜುಗಾರ್ತಿ ಮಾಳವಿಕಾ ವಿಶ್ವನಾಥ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮತ್ತೊಂದು ಬೆಳ್ಳಿ ಪದಕ ಸಂಪಾದಿಸಿದ್ದಾರೆ.

ಕ್ರೀಡಾಕೂಟದ ಆರನೇ ದಿನವಾದ ಶುಕ್ರವಾರ ರಾಜ್ಯದ ಈಜುಪಟುಗಳು 1 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದಿದ್ದಾರೆ. ಮಹಿಳೆಯರ 400 ಮೀ. ಫ್ರೀಸ್ಟೈಲ್‍ನಲ್ಲಿ ಬೆಳ್ಳಿ ಪದಕ ಸಂಪಾದಿಸಿದ್ದಾರೆ. ಇನ್ನು ಮಹಿಳೆಯರ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ದಾಮಿನಿ ಗೌಡ ಕಂಚಿನ ಪದಕ ಪಡೆದಿದ್ದಾರೆ. ಪುರುಷರ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಅರವಿಂದ್ ಎಂ ಬೆಳ್ಳಿ ಹಾಗೂ 50 ಮೀ. ಬ್ಯಾಕ್‍ಸ್ಟ್ರೋಕ್‍ನಲ್ಲಿ ಕಂಚು ಪಡೆದರು. ಇನ್ನು ಮಹಿಳೆಯರ 50 ಮೀ. ಬ್ಯಾಕ್‍ಸ್ಟ್ರೋಕ್‍ನಲ್ಲಿ ವಾಣಿ ಕಪೂರ್ ಕಂಚಿನ ಪದಕ ಪಡೆದರು.

ಈ ಮೂಲಕ ಕರ್ನಾಟಕ ತಂಡ 2 ಚಿನ್ನ, 12 ಬೆಳ್ಳಿ, 11 ಕಂಚು ಸೇರಿದಂತೆ 25 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 16ನೇ ಸ್ಥಾನ ಪಡೆದಿದೆ.

ಸ್ವರ್ಣ ಬೆಳಗಿದ ದೀಪ
ಕ್ರೀಡಾಕೂಟದ ಆರನೇ ದಿನ ಹೆಚ್ಚು ಪ್ರಾಬಲ್ಯ ಮೆರೆದು ಮಿಂಚಿದ್ದು, ಸರ್ವೀಸಸ್ ಕ್ರೀಡಾ ನಿಯಂತ್ರಣ ಮಂಡಳಿಯ ಜಿಮ್ನಾಸ್ಟಿಕ್‍ಪಟು ದೀಪಾ ಕರ್ಮಾಕರ್. ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದ ದೀಪ ಕರ್ಮಾಕರ್ ತಮ್ಮ ಅದ್ಭುತ ಪ್ರದರ್ಶನದಿಂದ ಬರೋಬ್ಬರಿ ಐದು ಸ್ವರ್ಣ ಪದಕವನ್ನು ಬಾಚಿಕೊಂಡಿದ್ದಾರೆ.

ದೀಪಾ ವೈಯಕ್ತಿಕ ಆಲ್ರೌಂಡ್, ಟೇಬಲ್ ವಾಲ್ಟ್, ಬ್ಯಾಲೆನ್ಸಿಂಗ್ ಬೀಮ್, ಅನ್ ಇವನ್ ಪ್ಯಾರಲೆಲ್ ಬಾರ್ಸ್ ಮತ್ತು ಫ್ಲೋರ್ ಎಕ್ಸರ್ಸೈಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟಾರೆಯಾಗಿ 52.100 ಅಂಕಗಳನ್ನು ಸಂಪಾದಿಸಿದರು. ಐದು ಚಿನ್ನದ ಪದಕ ಸಂಪಾದಿಸಿ ಸರ್ವೀಸಸ್ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲು ನೆರವಾ ದರು. ಆರನೇ ದಿನ ಅತ್ಯುತ್ತಮ ಪ್ರದರ್ಶನ ನೀಡಿದ ಸರ್ವೀಸಸ್ ಕ್ರೀಡಾಳುಗಳು ಭಾರಿ ಮುನ್ನಡೆ ಪಡೆಯಲು ನೆರವಾದರು. ಈವರೆಗೂ 36 ಚಿನ್ನ, 11 ಬೆಳ್ಳಿ, 12 ಕಂಚು ಸೇರಿದಂತೆ ಒಟ್ಟು 59 ಪದಕ ಸಂಪಾದಿಸಿರುವ ಸರ್ವೀಸಸ್ ಅಗ್ರಸ್ಥಾನದಲ್ಲಿದೆ. 25 ಚಿನ್ನ, 28 ಬೆಳ್ಳಿ, 20 ಕಂಚು ಸೇರಿದಂತೆ 73 ಪದಕ ಸಂಪಾದಿಸಿರುವ ಹರ್ಯಾಣ 2ನೇ ಸ್ಥಾನದಲ್ಲಿದೆ.

SCROLL FOR NEXT