ಕ್ರೀಡೆ

ಹಾಲ್‌ ಆಫ್ ಫೇಮ್‌ಗೆ ಅನಿಲ್‌ ಕುಂಬ್ಳೆ

Srinivasamurthy VN

ಮೆಲ್ಬರ್ನ್: ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಅವರು ಐಸಿಸಿಯ ಕ್ರಿಕೆಟ್‌ ಹಾಲ್‌ ಆಫ್ ಫೇಮ್‌ಗೆ ಸೇರ್ಪಡೆಯಾಗಲಿದ್ದಾರೆ.

ಇದೇ ಭಾನುವಾರ ಭಾರತ ತಂಡ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರ ಹೆಸರನ್ನು ಈ ಪ್ರತಿಷ್ಠಿತ ಪಟ್ಟಿಗೆ ಸೇರಿಸಲಾಗುತ್ತಿದೆ. ಆ ಮೂಲಕ ಕುಂಬ್ಳೆ ಈ ಪಟ್ಟಿಯ 77ನೇ ಸದಸ್ಯರಾಗಲಿದ್ದಾರೆ.

ಐಸಿಸಿ ಕ್ರಿಕೆಟ್‌ ಸಮಿತಿಯ ಅಧ್ಯಕ್ಷರು ಕೂಡ ಆಗಿರುವ ಕುಂಬ್ಳೆ ಕ್ರಿಕೆಟ್‌ ಹಾಲ್‌ ಆಫ್ ಫೇಮ್‌ಗೆ ಸೇರ್ಪಡೆಯಾದ ಭಾರತದ ನಾಲ್ಕನೇ ಕ್ರಿಕೆಟಿಗರಾಗಿದ್ದಾರೆ. ಈ ಮೊದಲು ಮಾಜಿ ನಾಯಕರಾದ ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌ ಮತ್ತು ಸುನೀಲ್‌ ಗಾವಸ್ಕರ್‌ ಅವರನ್ನು 2009ರಲ್ಲಿ ಪಟ್ಟಿಗೆ ಸೇರಿಸಲಾಗಿತ್ತು.

ಸ್ಪಿನ್‌ ಮಾಂತ್ರಿಕ ಕುಂಬ್ಳೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 619 ವಿಕೆಟ್‌ ಪಡೆದಿದ್ದು, ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೂರನೇಯವರಾಗಿದ್ದಾರೆ. ಮುರಳೀಧರನ್‌ (800) ಮತ್ತು ಶೇನ್‌ ವಾರ್ನ್ (708) ಮೊದಲ ಇಬ್ಬರು ಸ್ಪಿನ್ನರ್‌ಗಳಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕುಂಬ್ಳೆ 337 ವಿಕೆಟ್‌ ಉರುಳಿಸಿದ್ದಾರೆ. 2007 ಮತ್ತು 2008ರ ನಡುವೆ ಅವರು ಭಾರತ ತಂಡವನ್ನು 14 ಟೆಸ್ಟ್‌ಗಳಲ್ಲಿ ಮುನ್ನಡೆಸಿದ್ದರು. ಆ ವೇಳೆ ಭಾರತ ಮೂರು ಟೆಸ್ಟ್‌ಗಳಲ್ಲಿ ಜಯ ಸಾಧಿಸಿದ್ದರೆ ಐದರಲ್ಲಿ ಸೋತಿತ್ತು.

SCROLL FOR NEXT