ಬೆಂಗಳೂರು: ಲಘು ಬಳಕೆ ಹೆಲಿಕಾಪ್ಟರ್(ಎಲ್‍ಯುಎಚ್) ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ರು. 400 ಕೋಟಿ ಬಂಡವಾಳ ಹೂಡಿ ಉತ್ಪಾದನಾ ಘಟಕ ಪ್ರಾರಂಭಿಸಲು ಎಚ್ಎಎಲ್ ನಿರ್ಧರಿಸಿದೆ.
ಪ್ರತಿ ವರ್ಷ 60 ಹೆಲಿಕಾಪ್ಟರ್‍ಗಳನ್ನು ಈ ಕೇಂದ್ರದಲ್ಲಿ ಎಚ್‍ಎಎಲ್ ನಿರ್ಮಿಸಲಿದ್ದು, 2017ರ ಅಂತ್ಯದೊಳಗೆ ಉತ್ಪಾದನೆ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ 621 ಎಕರೆ ಭೂಮಿ ಪಡೆಯಲಾಗಿದೆ ಎಂದು ಎಚ್‍ಎಎಲ್ ಅಧ್ಯಕ್ಷ ಸುವರ್ಣ ರಾಜು ತಿಳಿಸಿದ್ದಾರೆ.
ಈ ಘಟಕದ ಒಟ್ಟಾರೆ ಬಂಡವಾಳ ಹೂಡಿಕೆ ಇನ್ನೂ ನಿರ್ಧಾರವಾಗಿಲ್ಲ. ಸದ್ಯ ಅಭಿವೃದ್ಧಿಗಾಗಿ ರು. 400 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಹೇಳಿದ ಸುವರ್ಣರಾಜು, ರಕ್ಷಣಾ ಕಾರ್ಯಾಚರಣೆಗೆ ಬಳಸುವ ಈ ಲಘು ಹೆಲಿಕಾಪ್ಟರ್‍ನ್ನು ಸ್ವದೇಶಿ ತಂತ್ರಜ್ಞಾನಗಳಿಂದ ಅಭಿವೃದ್ಧಿಗಾಗಿ ಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಕ್ವೇಡಾರ್‍ನಲ್ಲಿ ಎಚ್‍ಎಎಲ್ ನಿರ್ಮಿತ ಹೆಲಿಕಾಪ್ಟರ್ ದುರಂತಕ್ಕೀಡಾದ ಹಿನ್ನೆಲೆಯಲ್ಲಿ ರಫ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸುದ್ದಿಯಿದೆ. ಆದರೆ ಯಾವುದೇ ಋಣಾತ್ಮಕ ಪ್ರಭಾವವಾಗುವುದಿಲ್ಲ. ತಾಂತ್ರಿಕ ಕಾರಣಗಳಿಂದ ಅಪಘಾತ ಸಂಭವಿಸಿಲ್ಲ. ಇಂದಿಗೂ ಎಚ್‍ಎಎಲ್‍ನ ಹೆಲಿಕಾಪ್ಟರ್‍ಗಳು ಮಾರುಕಟ್ಟೆಯಲ್ಲಿ ಮಾನ್ಯತೆ ಪಡೆದಿವೆ.
ಜತೆಗೆ ಸೆಪ್ಟೆಂಬರ್ 2015ರೊಳಗೆ ಎಎಲ್‍ಎಚ್ ಹಾಗೂ ಎಲ್‍ಯುಎಚ್‍ಗಳಿಗೆ ಎಸಾ ಪ್ರಮಾಣಪತ್ರ ದೊರೆಯಲಿದೆ. ಆ ಬಳಿಕ ಯಾವುದೇ ದೇಶದಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಂಡವಾಳ ಹಿಂತೆಗೆತದಿಂದ ಎಚ್‍ಎಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಖಾಸಗಿ ಕಂಪನಿಗಳು ಎಚ್‍ಎಎಲ್‍ಗೆ ಸ್ಪರ್ಧೆ ನೀಡಲು ಬಂಡವಾಳ ಹೂಡುತ್ತಿರುವುದು ಸ್ವಾಗತಾರ್ಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.