ವೆಲ್ಲಿಂಗ್ಟನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 12 ಸಾವಿರ ರನ್‌ಗಳನ್ನು ಗಳಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಶ್ರೀಲಂಕಾ ಆಟಗಾರ ಕುಮಾರ್ ಸಂಗಕ್ಕಾರ ಅಳಿಸಿ ಹಾಕಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಂಗಕ್ಕಾರ 12 ಸಾವಿರ ರನ್‌ಗಳನ್ನು ಪೂರೈಸಿದ್ದಾರೆ. 12 ಸಾವಿರ ರನ್ ಪೂರೈಸಿರುವವರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಅತಿ ಕಡಿಮೆ ಟೆಸ್ಟ್‌ಗಳಲ್ಲಿ 12 ಸಾವಿರ ರನ್ ಪೇರಿಸಿದ ಆಟಗಾರ ಎಂಬ ಹಿರಿಮೆಗೆ ಸಂಗಾಕ್ಕಾರ ಪಾತ್ರರಾಗಿದ್ದಾರೆ.
247ನೇ ಇನ್ನಿಂಗ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ 12 ಸಾವಿರ ರನ್ ಪೂರೈಸಿದ್ದರು. ಆದರೆ ಸಂಗಕ್ಕಾರ 224 ಇನ್ನಿಂಗ್ಸ್‌ಗೆ 12 ಸಾವಿರ ಗಡಿ ದಾಟಿ ಅಗ್ರಸ್ಥಾನಕ್ಕೆ ಏರಿದ್ದಾರೆ. 2008ರಿಂದಲೂ ಈ ದಾಖಲೆ ತೆಂಡೂಲ್ಕರ್ ಹೆಸರಿನಲ್ಲಿತ್ತು. 2000ದಲ್ಲಿ ಟೆಸ್ಟ್ ಆಡಲಾರಂಭಿಸಿದ ಸಂಗಕ್ಕಾರ ಈವರೆಗೆ 58ರ ಸರಾಸರಿಯಲ್ಲಿ 37 ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಗಳಿಸಿದ 319 ರನ್ ಇವರು ಸಂಪಾದಿಸಿ ಗರಿಷ್ಠ ಮೊತ್ತವಾಗಿದೆ.
12 ಸಾವಿರ ಪೂರೈಸಿರುವ ಆಟಗಾರರು
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಸಂಪಾದಿಸಿದ ಹೆಗ್ಗಲಿಕೆ ಸಚಿನ್‌ರದ್ದೇ, 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 53.28ರ ಸರಾಸರಿಯಲ್ಲಿ 15,921 ರನ್‌ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ರಿಕಿ ಪಾಟಿಂಗ್ 51.85ರ ಸರಾಸರಿಯಲ್ಲಿ 13,378 ರನ್, ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 55.37ರ ಸರಾಸರಿಯಲ್ಲಿ 13,289 ರನ್, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ರಾಹುಲ್ ದ್ರಾವಿಡ್ 52.31ರ ಸರಾಸರಿಯಲ್ಲಿ 13,288 ರನ್‌ಗಳನ್ನು ದಾಖಲಿಸಿದ್ದಾರೆ.