ಕ್ರೀಡೆ

ಪದಕ ವಿಜೇತರಿಗೆ ಕ್ರೀಡಾ ಇಲಾಖೆಯಿಂದ ಬಹುಮಾನ ಮೊತ್ತ ಹೆಚ್ಚಳ: ಘೋಷಣೆ

Srinivasamurthy VN

ನವದೆಹಲಿ: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಪದಕದ ಗೌರವ ತರುವ ಕ್ರೀಡಾಪಟುಗಳಿಗೆ ಹಾಗೂ ಅವರ ತರಬೇತುದಾರರಿಗೆ ನೀಡಲಾಗುವ ವಿಶೇಷ ಪುರಸ್ಕಾರಗಳ ನಿಯಮಗಳನ್ನು ಕೇಂದ್ರ ಕ್ರೀಡಾ ಇಲಾಖೆ ಪರಿಷ್ಕರಿಸಿದೆ.

ಅದರಂತೆ, ಇನ್ನು ಮುಂದೆ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಚಿನ್ನದ ಗೌರವ ತರುವ ಕ್ರೀಡಾಳುಗಳಿಗೆ ತಲಾ 75 ಲಕ್ಷ ರು. ಬಹುಮಾನ ಸಿಗಲಿದೆ. ಬೆಳ್ಳಿ ಹಾಗೂ ಕಂಚಿನ ಪದಕಗಳ ವಿಜೇತರಿಗೆ ಕ್ರಮವಾಗಿ 50 ಲಕ್ಷ ರು. ಮತ್ತು 30 ಲಕ್ಷ ರು. ಬಹುಮಾನ ಸಿಗಲಿದೆ. ಈವರೆಗೊ ಇದ್ದ ನಿಯಮಗಳ ಪ್ರಕಾರ, ಚಿನ್ನ ಗೆದ್ದವರಿಗೆ 50 ಲಕ್ಷ ರು. ಬೆಳ್ಳಿ ಗೆದ್ದವರಿಗೆ 30 ಲಕ್ಷ ರು. ಹಾಗೂ ಕಂಚಿನ ಪದಕ ವಿಜೇತರಿಗೆ 20 ಲಕ್ಷ ರು. ನೀಡಲಾಗುತ್ತಿತ್ತು.

ಏಷ್ಯನ್ ಹಾಗೂ ಕಾಮನ್‍ವೆಲ್ತ್ ಕೂಟಗಳಲ್ಲಿ ಪದಕ ಗೆಲ್ಲುವ ಕ್ರೀಡಾಳುಗಳೂ ಹೊಸ ನಿಯಮದ ಪ್ರಕಾರ ಹೆಚ್ಚಿನ ಮೊತ್ತ ಪಡೆಯಲಿದ್ದಾರೆ. ಇಲ್ಲಿ ಚಿನ್ನ ಗೆದ್ದವರಿಗೆ 30 ಲಕ್ಷ
ರು., ಬೆಳ್ಳಿ ವಿಜೇತರಿಗೆ 20 ಲಕ್ಷ ರು. ಹಾಗೂ ಕಂಚಿನ ಪದಕ ಗೆದ್ದವರಿಗೆ 10 ಲಕ್ಷ ರು. ಸಿಗುತ್ತದೆ. ಈವರೆಗೆ ಈ ವಿಭಾಗಗಳಲ್ಲಿ ಪದಕ ಗೆಲ್ಲುವ ಕ್ರೀಡಾಳುಗಳಿಗೆ ಕ್ರಮವಾಗಿ,
20 ಲಕ್ಷ ರು. (ಚಿನ್ನ), 10 ಲಕ್ಷ ರು. (ಬೆಳ್ಳಿ) ಹಾಗೂ 6 ಲಕ್ಷ ರು. (ಕಂಚಿನ ಪದಕ) ನಿಗದಿಗೊಳಿಸಲಾಗಿತ್ತು.

ಏಷ್ಯನ್ ಅಥವಾ ಕಾಮನ್‍ವೆಲ್ತ್‍ಗಳಿಗೆ ಈ ಪರಿಷ್ಕೃತ ಬಹುಮಾನ ನಿಯಮ, ಆ ಕ್ರೀಡಾಕೂಟಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ ಎನ್ನುವುದರ ಮೇಲೆ ಅವಲಂಬಿತ. ಏಷ್ಯನ್ ಅಥವಾ ಕಾಮನ್‍ವೆಲ್ತ್ ಕೂಟಗಳು ವಾರ್ಷಿಕವಾಗಿ, ಎರಡು ವರ್ಷಗಳಿಗೊಮ್ಮೆ ಅಥವಾ ನಾಲ್ಕು ವರ್ಷಗಳಿಗೊಮ್ಮೆ ನಡೆಯುವುದರಿಂದ ಆಯ್ತು ಅನುಕ್ರಮದ ಆಧಾರದ ಮೇಲೆ ಬಹುಮಾನವೂ ನಿರ್ಧಾರವಾಗುತ್ತದೆ ಎಂದು ಕ್ರೀಡಾ ಇಲಾಖೆ ಹೇಳಿದೆ.

ಇದಲ್ಲದೆ, ಪ್ಯಾರಾಲಿಂಪಿಕ್ಸ್, ಪ್ಯಾರಾ-ಏಷ್ಯನ್ ಹಾಗೂ ಪ್ಯಾರಾ- ಕಾಮನ್‍ವೆಲ್ತ್ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿಶೇಷಚೇತನ ಕ್ರೀಡಾಳುಗಳು ತೋರುವ ಸಾಧನೆಗೆ
ನಿಗದಿಪಡಿಸಲಾಗಿದ್ದ ಬಹುಮಾನವನ್ನೂ ಹೆಚ್ಚಿಸಲಾಗಿದೆ. ಅಲ್ಲದೆ, ದೃಷ್ಟಿ ವಿಶೇಷ ಚೇತನರ, ಕಿವುಡರ ಒಲಿಂಪಿಕ್ಸ್ ಹಾಗೂ ವಿಶೇಷ ಒಲಿಂಪಿಕ್ಸ್ ಗಳಲ್ಲಿ ಪದಕ ಗೆಲ್ಲುವ ಕ್ರೀಡಾಳುಗಳಿಗೂ ಈಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಬಹುಮಾನ ಸಿಗಲಿದೆ ಎಂದು ಇಲಾಖೆ ಹೇಳಿದೆ.

SCROLL FOR NEXT