ನವದೆಹಲಿ: ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸುಮಿತ್ ನಗಾಲ್, ಭವಿಷ್ಯದಲ್ಲಿ ಸಿಂಗಲ್ಸ್ ವಿಭಾಗದ ಮೇಲೆ ಹೆಚ್ಚು ಗಮನ ಹರಿಸುವುದಲ್ಲದೇ ಅಗ್ರ, 300 ರ್ಯಾಂಕಿಂಗ್‍ನಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
``ನನ್ನ ಚಿತ್ತ ಸಿಂಗಲ್ಸ್ ವಿಭಾಗದ ಮೇಲಿದೆ. ಈ ವರ್ಷ ಸಿಂಗಲ್ಸ್ ವಿಭಾಗದ ರ್ಯಾಂಕಿಂಗ್‍ನ ಅಗ್ರ 300ರಲ್ಲಿ ಸ್ಥಾನ ಪಡೆಯುವುದು ನನ್ನ ಗುರಿ. ಆ ದಿಸೆಯಲ್ಲಿ ನನ್ನ ಪ್ರಯತ್ನ ಹಾಕುತ್ತೇನೆ. ನನ್ನ ದೇಶಕ್ಕೆ ಯಾವ ರೀತಿ ಕೊಡುಗೆ ನೀಡುತ್ತೇನೆ ಎಂಬುದನ್ನು ಕಾದು ನೋಡಬೇಕು'' ಎಂದು ಫ್ರಾಂಕ್ ಫರ್ಟ್ ನಲ್ಲಿ ತರಬೇತಿ ನಡೆಸುತ್ತಿರುವ ಸುಮಿತ್ ತಿಳಿಸಿದ್ದಾರೆ.
``ವಿಂಬಲ್ಡನ್‍ನಲ್ಲಿ ಪ್ರಶಸ್ತಿ ಗೆದ್ದಿರುವುದಕ್ಕೆ ಬಹಳ ಸಂತೋಷವಾಗಿದೆ. ಅದರಲ್ಲೂ ನಾಮ್ ಹೊಂಗ್ ಲಿ ಈ ಪ್ರಶಸ್ತಿ ಗೆದ್ದ ಮೊದಲ ವಿಯೆಟ್ನಾಂ ಆಟಗಾರನಾಗಿರುವುದಕ್ಕೆ ಮತ್ತಷ್ಟು ಸಂತೋಷವಾಗುತ್ತದೆ. ಈ ಮೂಲಕ ನನ್ನ ಹೆಸರು ಯಾವಾಗಲೂ ಉಳಿಯಲಿದೆ. ಇದಕ್ಕಿಂತ ರೋಚಕ ಅನುಭವ ಬೇರೊಂದಿಲ್ಲ'' ಎಂದು ಸುಮಿತ್ ಹೇಳಿದ್ದಾರೆ.
``ವಿಂಬಲ್ಡನ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದು, ನಿರಾಸೆ ತಂದಿದೆ. ನಾನು ತಡವಾಗಿ ಅಲ್ಲಿಗೆ ಪ್ರಯಾಣ ಬೆಳೆಸಿದ್ದರಿಂದ ಹಸಿರು ಪಿಚ್ ನಲ್ಲಿ ತಯಾರಿ ನಡೆಸಲು ಕಾಲಾವಕಾಶವಿರಲಿಲ್ಲ. ಇದರಲ್ಲಿ ನನ್ನ ತಪ್ಪಿಲ್ಲ. ನಿರ್ದಿಷ್ಟ ಸಮಯಕ್ಕಿಂತ ಒಂದು ವಾರ ತಡವಾಗಿ ರಾಯಭಾರ ಕಚೇರಿಯಿಂದ ವೀಸಾ ಪಡೆದೆ'' ಎಂದೂ ನುಡಿದಿದ್ದಾರೆ.