ಲಂಡನ್: ಪ್ರತಿಷ್ಠಿತ ಆಶಸ್ ಸರಣಿಯಲ್ಲಿನ ಆರಂಭಿಕ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದಾಗಿ ಆತಿಥೇಯ ಇಂಗ್ಲೆಂಡ್ ವಿರುದ್ಧ ತಿರುಗಿ ಬೀಳಲು ಆಸ್ಟ್ರೇಲಿಯಾ ತಂಡ ಸಜ್ಜಾಗಿದೆ. ಗುರುವಾರ ಕ್ರಿಕೆಟ್ ಕಾಶಿ ಎಂದೇ ಖ್ಯಾತವಾಗಿರುವ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿ, ಸರಣಿಯಲ್ಲಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ. ಆರಂಭಿಕ ಪಂದ್ಯ ದಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಪ್ರವಾಸಿ ಆಸ್ಟ್ರೇಲಿಯಾ ಈಗ ಸರಣಿ ಸಮಬಲದ ಗುರಿ ಹೊತ್ತಿದೆ.
ಇತ್ತ ಆರಂಭಿಕ ಪಂದ್ಯದಲ್ಲಿ ಮಾರಕ ದಾಳಿಯಿಂದ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಕಾಯ್ದುಕೊಂಡಿದ್ದು, ತನ್ನ ಅಂತರವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದೆ. ಇಂಗ್ಲೆಂಡ್ ತಂಡದ ಪರ ಬ್ಯಾಟಿಂಗ್‍ನಲ್ಲಿ ಜೋ ರೂಟ್ ಅತ್ಯುತ್ತಮ ಲಯದಲ್ಲಿದ್ದಾರೆ. ಉಳಿದಂತೆ ನಾಯಕ ಅಲಸ್ಟೇರ್ ಕುಕ್, ಇಯಾನ್ ಬೆಲ್, ಪ್ರಮುಖ ಬ್ಯಾಟ್ಸ್ ಮನ್ ಗಳಾಗಿದ್ದಾರೆ. ವೇಗಿ ಸ್ಟುವರ್ಟ್ ಬ್ರಾಡ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಜೇಮ್ಸ್ ಆಂಡರ್ಸನ್ ಹಾಗೂ ಸ್ಟೀವನ್ ಫಿನ್ ಸಹ ಪರಿಣಾಮಕಾರಿ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗ ಕಳೆದ ಬಾರಿ ಎಡವಿತ್ತು. ವಾರ್ನರ್, ಸ್ಟೀವನ್ ಫಿನ್, ನಾಯಕ ಕ್ಲಾರ್ಕ್ ವೈಫಲ್ಯ ಅನುಭವಿಸಿದ್ದರು. ಇನ್ನು ಬೌಲಿಂಗ್‍ನಲ್ಲಿ ಮಿಚೆಲ್ ಸ್ಟಾರ್ಕ್ ಮಿಂಚಿದ್ದರೂ, ಮಿಚೆಲ್ ಜಾನ್ಸನ್ ವೈಫಲ್ಯ ತಂಡದ ಹಿನ್ನಡೆಗೆ ಕಾರಣವಾಯಿತು. ಬೆಲ್ ಬಾರಿಸಲಿರುವ ಪಂಟರ್ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಆರಂಭವಾಗುವ ಐದು ನಿಮಿಷಕ್ಕೂ ಮುನ್ನ ಲಾರ್ಡ್ಸ್ ಅಂಗಣದಲ್ಲಿನ ಬೆಲ್ ಅನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಬಾರಿಸಲಿದ್ದಾರೆ.
ಐದು ಬಾರಿ ಆಶಸ್ ಸರಣಿಯನ್ನು ಗೆದ್ದಿರುವ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್, ಲಾರ್ಡ್ಸ್ ಅಂಗಣದ ಬೆಲ್ ಬಾರಿಸುವ ಗೌರವ ಪಡೆಯುತ್ತಿರುವ ಆಸೀಸ್‍ನ 7ನೇ ಆಟಗಾರ ಎನಿಸಿದ್ದಾರೆ. ಈ ಹಿಂದೆ ಪಾಂಟಿಂಗ್ ಅವರ ಸಹ ಆಟಗಾರರಾಗಿದ್ದ ಶೇನ್ ವಾರ್ನ್, ಗ್ಲೆನ್ ಮೆಗ್ರಾತ್ ಈ ಗೌರವಕ್ಕೆ ಪಾತ್ರರಾಗಿದ್ದರು.
ಇಂಗ್ಲೆಂಡ್ ಜತೆ ಅರ್ಜುನ್ ಅಭ್ಯಾಸ: ಬುಧವಾರ ಇಂಗ್ಲೆಂಡ್ ತಂಡ ಅಭ್ಯಾಸ ನಡೆಸಿದಾಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ನೆಟ್ಸ್ ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಗೆ ಬೌಲಿಂಗ್ ಮಾಡಿದರು. ನಂತರ ಇಂಗ್ಲೆಂಡ್ ಬೌಲಿಂಗ್ ಕೋಚ್ ಒಟ್ಟಿಸ್ ಗಿಬ್ಸನ್ ಅವರಿಂದ ಮಾರ್ಗದರ್ಶನ ಪಡೆದರು.