ಕೊಲಂಬೊ: ವೇಗಿ ಮೊಹಮದ್ ಇರ್ಫಾನ್ ಮಾರಕ ಬೌಲಿಂಗ್ ಮತ್ತು ಆರಂಭಿಕ ಅಹ್ಮದ್ ಶೆಹಜಾದ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ, ಆತಿಥೇಯ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು 3 -1 ಅಂತರದಲ್ಲಿ ಗೆದ್ದುಕೊಂಡಿದೆ.
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 7 ವಿಕೆಟ್ ಗಳ ಅಂತರದಿಂದ ಆತಿಥೇಯ ತಂಡವನ್ನು ಮಣಿಸಿತು.
ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಂತರ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 256 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 40 .5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 257 ರನ್ ಪೇರಿಸಿ ಜಯ ಪಡೆಯಿತು.
ಶ್ರೀಲಂಕಾ ತಂಡ ರನ್ ಖಾತೆ ತೆರೆಯುವ ಮುನ್ನವೇ ಕುಶಾಲ್ ಪೆರೇರಾ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ದಿಲ್ಶಾನ್(50 ) ಜತೆಗೂಡಿದ ತಿರಿಮಾನೆ(90 ) 2 ನೇ ವಿಕೆಟ್ ಗೆ 109 ರನ್ ಗಳ ಶತಕದ ಜತೆಯಾಟವಾಡಿ ಆಸರೆಯಾದರು.