ಕ್ರೀಡೆ

ಪ್ರೊ ಕಬಡ್ಡಿ: ವಾರಿಯರ್ಸ್ ಗೆ ಟಾಂಗ್ ಕೊಟ್ಟ ಟೈಟಾನ್ಸ್

Srinivas Rao BV

ಕೋಲ್ಕತಾ:  ಪ್ರೊ ಕಬಡ್ಡಿ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಪಡೆ, ಆತಿಥೇಯ ಬೆಂಗಾಲ್ ವಾರಿಯರ್ಸ್ ಕೈನಿಂದ ಜಯವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಕೋಲ್ಕತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯದ ಬಹುಪಾಲು ಅವಧಿಯಲ್ಲಿ ಹಿನ್ನಡೆ ಅನುಭವಿಸಿದರೂ ಅಂತಿಮ ನಿಮಿಷದಲ್ಲಿ 3 ಅಂಕ ಗಳಿಸಿದ ತೆಲುಗು ಟೈಟಾನ್ಸ್ ತಂಡ 32 -30  ಅಂಕಗಳ ಅಂತದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಆಕರ್ಷಕ ಪ್ರದರ್ಶನ ನೀಡಿದ ಬೆಂಗಾಲ್ ವಾರಿಯರ್ಸ್ ತಂಡ ಪಂದ್ಯದ 39 ನೇ ನಿಮಿಷದ ವರೆಗೂ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ತೆಲುಗು ಟೈಟಾನ್ಸ್ ತಂಡ ಮಿಂಚು ಹರಿಸಿತು.

ಬೆಂಗಾಲ್ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ಜೋರಿಯಾ ಆಟಗಾರ ಜಾಂಗ್ ಕುನ್ ಲೀ ತಂಡಕ್ಕೆ 12 ಹಾಗೂ ಸುನಿಲ್ ಜೈಪಾಲ್ 6 ಅಂಕಗಳನ್ನು ತಂದುಕೊಟ್ಟರು. ಮತ್ತೊಂದೆಡೆ ತೆಲುಗು  ಟೈಟಾನ್ಸ್ ತಂಡಕ್ಕೆ ಪಂದ್ಯದಲ್ಲಿ ಏಕೈಕ ಆಧಾರದಂತೆ ಆಡಿದ ದೀಪಕ್ ನಿವಾಸ್ ಹೂಡಾ ಬರೋಬ್ಬರಿ 14 ಅಂಕಗಳನ್ನು ಗಳಿಸಿದರು. ತಂಡದ ನಾಯಕತ್ವ ವಹಿಸಿಕೊಂಡಿದ್ದ ಪ್ರಮುಖ ರೈಡರ್, ರಾಹುಲ್ ಚೌಧರಿ ಪ್ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಹಾಗಾಗಿ ತಂಡ ಹೆಚ್ಚು ಹಿನ್ನಡೆಯಲ್ಲಿ ಉಳಿಯಲು ಕಾರಣವಾಗಿತ್ತು. ರಾಹುಲ್ ಕೇವಲ 4 ಅಂಕ ಗಳಿಸಿದರಾದರೂ ಅಂತಿಮ ಕ್ಷಣದಲ್ಲಿ ಪಂದ್ಯದ ಗತಿಯನ್ನು ಬದಲಿಸುವ ಮುಖೇನ ತಮ್ಮ ಆಟವನ್ನು ಸಮರ್ಥಿಸಿಕೊಂಡರು.

ಪಂದ್ಯದ ಆರಂಭದಲ್ಲಿ ತೆಲುಗು ಟೈಟಾನ್ಸ್ ತಂಡ 3 ರೈಡ್ ನಲ್ಲಿ 3 ಅಂಕ ಸಂಪಾದಿಸಿತು. ನಂತರ ಲಯಕಂಡುಕೊಂಡ ಬೆಂಗಾಲ್ ವಾರಿಯರ್ಸ್ ಗೆ ಜಾಂಗ್ ಕುನ್ ಲೀ ತಮ್ಮ 3 ನೇ ರೈಡ್ ನಲ್ಲಿ ಮೊದಲ ಅಂಕ ತಂದಿಟ್ಟರು. ನಂತರದ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆಂಗಾಲ್ ಪಡೆ, ಸತತವಾಗಿ ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ 13 ನೇ ನಿಮಿಷದಲ್ಲಿ ಟೈಟಾನ್ಸ್ ತಂಡವನ್ನು ಅಲೌಟ್ ಮಾಡಿದ ವಾರಿಯರ್ಸ್, 10  -7 ಅಂಕಗಳಿಂದ ಮೇಲುಗೈ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಟೈಟಾನ್ಸ್ ಪಡೆ ಮೊದಲ ಬಾರಿಗೆ ಅಲೌಟ್ ಆಯಿತು. ಬೆಂಗಾಲ್ ವಾರಿಯರ್ಸ್ ತಂಡದ ಜಾಂಗ್ ಕುನ್ ಲೀ ಅತ್ಯುತ್ತಮ ರೈಡರ್ ಪ್ರಶಸ್ತಿ ಪಡೆದರು.

SCROLL FOR NEXT