ಕೋಲ್ಕತಾ: ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ಪಶ್ಮಿಮ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ಯ ಅಧ್ಯಕ್ಷರಾಗಿ ಸತತ 8ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಸಂಸ್ಥೆಯ 84ನೇ ವಾರ್ಷಿಕ ಮಹಾಸಮ್ಮೇಳನದ ವೇಳೆ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
75 ವರ್ಷದ ವಯಸ್ಸಿನ ಜಗಮೋಹನ್ ದಾಲ್ಮಿಯಾ, 1993ರಿಂದ ಈವರೆಗೂ ಸಿಎಬಿಯ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. 2006ರ ಡಿಸೆಂಬರ್ 6ರಂದು ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್, ಸಿಎಬಿಯಲ್ಲಿನ ಕೆಲವು ಅವ್ಯವಹಾರಗಳ ಆರೋಪದ ಮೇರೆಗೆ ದಾಲ್ಮಿಯಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ್ದರು. ಆಗ, 19 ತಿಂಗಳುಗಳ ಕಾಲ ಅವರು ಸಿಎಬಿ ಕಚೇರಿಯಿಂದ ದೂರ ಉಳಿದಿದ್ದು ಬಿಟ್ಟರೆ, 1993ರಿಂದ ಈವರೆಗೂ ಅವರ ಸಿಎಬಿಯ ಅಧ್ಯಕ್ಷ ಗಾದಿಯ ಮೇಲೆ ಭದ್ರವಾಗಿ ಕುಳಿತಿದ್ದಾರೆ.
ಕಳೆದ ವರ್ಷ ನಡೆದ ಬಿಸಿಸಿಐ ವಾರ್ಷಿಕ ಮಹಾಸಮ್ಮೇಳನದ ವೇಳೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಸಿಎಬಿ ಮೇಲಿನ ಅವರ ಹಿಡಿತ ಮತ್ತಷ್ಟು ಬಿಗಿಯಾಗಿದೆ.