ಜೈಪುರ: ತಮ್ಮ ರಕ್ಷಣಾತ್ಮಕ ವಿಭಾಗದ ಭದ್ರಕೋಟೆಯಲ್ಲಿ ಚಕ್ರವ್ಯೂಹ ರಚಿಸಿ ಎದುರಾಳಿ ಡೆಲ್ಲಿ ದಬಾಂಗ್ ಆಟಗಾರರನ್ನು ಸಂಪೂರ್ಣವಾಗಿ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಬೆಂಗಳೂರು ಬುಲ್ಸ್ ತಂಡ ಪ್ರೋ ಲೀಗ್ ಕಬಡ್ಡಿಯಲ್ಲಿ ಮತ್ತೊಂದು ಗೆಲುವು ದಾಖಲಿಸಿದೆ.
ಸೋಮವಾರ ಇಲ್ಲಿನ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 33-18ರ ಮುನ್ನಡೆ ಸಾಧಿಸಿ ಬರೋಬ್ಬರಿ 15 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು.
ಟೂರ್ನಿಯಲ್ಲಿ ಹೆಚ್ಚು ರೋಚಕ ಪಂದ್ಯಗಳು ಹೊರಹೊಮ್ಮುತ್ತಿರುವಾಗ ಬೆಂಗಳೂರು ಬುಲ್ಸ್ ತಂಡ ದೊಡ್ಡ ಅಂತರದಲ್ಲಿ ಜಯ ಸಾಧಿಸಿರುವುದು ತಂಡದ ಬಲಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿನ ಜಯದೊಂದಿಗೆ ಬೆಂಗಳೂರು ಬುಲ್ಸ್ ತಂಡ 5 ಪಂದ್ಯಗಳಿಂದ 4 ಗೆಲುವು ಹಾಗೂ 1 ಸೋಲಿನೊಂದಿಗೆ 20 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.
ಪಂದ್ಯದಲ್ಲಿ ರೈಡಿಂಗ್‍ಗಿಂತ ರಕ್ಷಣಾತ್ಮಕ ವಿಭಾಗದ ಮೇಲೆ ತಂಡ ಹೆಚ್ಚು ಅವಲಂಬಿತವಾಗಿತ್ತು. ಬೆಂಗಳೂರು ಬುಲ್ಸ್ ನಾಯಕ ಮಂಜೀತ್ ಚಿಲ್ಲರ್, 21 ರೈಡ್‍ಗಳಿಂದ ಕೇವಲ 7 ಅಂಕ ಸಂಪಾದಿಸಿದ್ದರು. ಅಲ್ಲದೆ 11 ಅಂಕವಿಲ್ಲದ ರೈಡ್ ಮಾಡಿದ್ದರು. ಇನ್ನು ಪ್ರಮುಖ ರೈಡರ್ ಅಜಯ್ ಠಾಕೂರ್ 9 ರೈಡ್‍ಗಳಿಂದ ಕೇವಲ 4 ಅಂಕ ಸಂಪಾದಿಸಿದ್ದರು. ಈ ಮೂಲಕ ರೈಡಿಂಗ್‍ನಲ್ಲಿ ಹೆಚ್ಚು ಅಂಕ ಗಳಿಕೆಗೆ ಮುಂದಾಗದ ಬುಲ್ಸ್, ರಕ್ಷಣಾತ್ಮಕ ವಿಭಾಗದಲ್ಲಿ ಎದುರಾಳಿ ತಂಡವನ್ನು ಸಂಪೂರ್ಣವಾಗಿ ಕಟ್ಟಿ ಹಾಕಿತು.
ತಂಡದ ಪರ ರಕ್ಷಣಾತ್ಮಕ ವಿಭಾಗದಲ್ಲಿ ಸೋಮ್ ವೀರ್ ಶೇಖರ್ (6) ಅವರ ಅದ್ಭುತ ಪ್ರದರ್ಶನವಲ್ಲದೆ, ಜೋಗಿಂದರ್ ನರ್ವಾಲ್ (3) ಹಾಗೂ ಧರ್ಮರಾಜ್ (4) ತಂಡಕ್ಕೆ 13 ಅಂಕಗಳನ್ನು ತಂದುಕೊಟ್ಟರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಪ್ರತಿಸ್ಪರ್ಧಿ ತಂಡದ ಆಟಗಾರರ ಮೇಲೆ ನಿಯಂತ್ರಣ ಸಾಧಿಸಿದ ಬುಲ್ಸ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು.