ಸ್ಟವೆಂಜರ್(ನಾರ್ವೆ): ಅತ್ಯುತ್ತಮ ಫಾರ್ಮ್ ನಲ್ಲಿದ್ದ ಪ್ರತಿಸ್ಪರ್ಧಿ ಮ್ಯಾಕ್ಸಿಮ್ ವೈಚರ್ ಲಾಗ್ರೆವ್ ವಿರುದ್ಧ ಆಕರ್ಷಕ ಪ್ರದರ್ಶನ ನೀಡಿದ ಮಾಜಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್, ನಾರ್ವೆ ಚೆಸ್ ಟೂರ್ನಿಯಲ್ಲಿ ಗೆಲವು ದಾಖಲಿಸಿದ್ದಾರೆ.
ಮಂಗಳವಾರ ನಡೆದ ಆರನೇ ಸುತ್ತಿನ ಪಂದ್ಯದಲ್ಲಿ ಆನಂದ್, ವೈಚರ್ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸುವುದರೊಂದಿಗೆ ಗೆಲುವ ದಾಖಲಿಸಿದರು. ಈ ಮೂಲಕ ಟೂರ್ನಿಯಲ್ಲಿ 4 ಅಂಕಗಳನ್ನು ಸಂಪಾದಿಸಿ ಜಂಟಿ ಎರಡನೇ ಸ್ಥಾನ ಗಳಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಸತತ ಡ್ರಾ ಸಾಧಿಸುತ್ತಿದ್ದ ಆನಂದ್, ನಂತರ ವಿಶ್ವ ಚಾಂಪಿಯನ್ ಕಾರ್ಲ್ ಸನ್ ವಿರುದ್ಧ ಮೊದಲ ಗೆಲುವು ಗಳಿಸಿದ್ದರು. ನಂತರದ ಪಂದ್ಯದಲ್ಲಿ ಹಿಕಾರು ನಕಮುರಾ ವಿರುದ್ಧ ಡ್ರಾ ಸಾಧಿಸಿದ್ದರು. ಮತ್ತೆ ಗೆಲವು ದಾಖಲಿಸಿರುವ ಆನಂದ್, ಟೂರ್ನಿಯಲ್ಲಿ ನಿಧಾನವಾಗಿ ತಮ್ಮ ನಿಯಂತ್ರಣ ಸಾಧಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಇನ್ನು 3 ಸುತ್ತಿನ ಆಟಗಳು ಬಾಕಿ ಇದ್ದು, ಆನಂದ್ ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಮೂಡಿಸಿದ್ದಾರೆ.