ಕ್ರೀಡೆ

ಸರಣಿ ಮುನ್ನಡೆಗೆ ಮಿಥಾಲಿ ಪಡೆ ಸನ್ನದ್ಧ

Rashmi Kasaragodu

ಬೆಂಗಳೂರು: ಅಭ್ಯಾಸ ಪಂದ್ಯದಲ್ಲಿ ಸೋಲನುಭವಿಸಿದರೂ, ಐದು ಏಕದಿನ ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿ 17 ರನ್‍ಗಳ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿರುವ ಮಿಥಾಲಿ ರಾಜ್ ಸಾರಥ್ಯದ ಭಾರತ ವನಿತೆಯರ ತಂಡ ಇದೀಗ ಬುಧವಾರ ನಡೆಯಲಿರುವ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಹೊತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಭಾರತ ವನಿತೆಯರಿಗೆ ಸರಣಿ ಮುನ್ನಡೆ ಸಾಧಿಸುವ ದೃಷ್ಟಿಯಲ್ಲಿ ಮಹತ್ವಪೂರ್ಣವೆನಿಸಿದರೆ, ಆತಿಥೇಯರಿಗೆ ತಿರುಗೇಟು ನೀಡಿ ಸರಣಿಯನ್ನು ಸಮ ಸ್ಥಿತಿಗೆ ತಂದುನಿಲ್ಲಿಸುವ ಛಲವನ್ನು ಸುಜಿ ಬೇಟ್ಸ್ ನಾಯಕತ್ವದ ನ್ಯೂಜಿಲೆಂಡ್ ವನಿತಾ ತಂಡ ತೊಟ್ಟಿದೆ. ಐಸಿಸಿ ವಿಶ್ವಕಪ್ ಕ್ರಿಕೆಟ್‍ಗೆ ಸ್ಥಾನ ಪಡೆಯುವ ದಿಸೆಯಲ್ಲಿ ಈ ಸರಣಿ ಭಾರತ ತಂಡಕ್ಕೆ ಅತ್ಯಂತ ಮಹತ್ವನೀಯವಾಗಿದ್ದು, ಅದಕ್ಕೆ ಪೂರಕವಾಗಿ ಆಡುತ್ತಿರುವ ಮಿಥಾಲಿ ಪಡೆಗೆ ನಾಳಿನ ಪಂದ್ಯ ಮತ್ತೊಂದು ಪರೀಕ್ಷೆಯಂತಿದೆ. ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಜೂಲನ್ ಗೋಸ್ವಾಮಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಮಧ್ಯಮ ಕ್ರಮಾಂಕದಲ್ಲಿ
ಬ್ಯಾಟ್ ಮಾಡಿದ್ದ ಅವರು ಉಪಯುಕ್ತ ಅರ್ಧಶತಕ ಸಿಡಿಸಿದ್ದಲ್ಲದೆ, ಬೌಲಿಂಗ್‍ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮೇಲಿನ ಕ್ರಮಾಂಕಿತ ಆಟಗಾರ್ತಿಯರು ಸ್ಥಿರ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅದರಲ್ಲೂ ನಾಯಕಿ ಮಿಥಾಲಿ ರಾಜ್ ಕೇವಲ 17 ರನ್ ಗಳಿಸಿ ಔಟಾಗಿದ್ದುದು ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ತೊಡಕಾಗಿತ್ತು. ಈ ಮಧ್ಯೆ ಪ್ರವಾಸಿ ತಂಡವು ಭಾರತದ ಸಂಘಟನಾ ದಾಳಿಯ ಅರಿವಿದ್ದರೂ, ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಭರವಸೆಯಲ್ಲಿದೆ. ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುಜಿ ಬೇಟ್ಸ್ ಪಡೆ ಬ್ಯಾಟಿಂಗ್‍ನತ್ತ ಆದ್ಯತೆ ನೀಡಬೇಕಿದೆ.

ತಂಡಗಳು
ಭಾರತ: ಮಿಥಾಲಿ ರಾಜ್ (ನಾಯಕಿ), ಏಕ್ತಾ ಬಿಸ್ತ್, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ, ಹರ್ಮನ್‍ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ,
ನಿರಂಜನಾ ನಾಗರಾಜನ್, ಶಿಖಾ ಪಾಂಡೆ, ಕಲ್ಪನಾ ಆರ್. ಸ್ನೇಹ್ ರಾಣಾ, ಪೂನಮ್ ರವೂತ್, ದೀಪ್ತಿ ಶರ್ಮಾ, ತಿರುಷ್ಕಾಮಿನಿ, ಪೂನಮ್ ಯಾದವ್.
ನ್ಯೂಜಿಲೆಂಡ್: ಸುಝೀ ಬೇಟ್ಸ್ (ನಾಯಕಿ), ಕೇಟ್ ಬ್ರಾಡ್ಮೋರ್,ಸೋಫಿಯೆ ಡಿವೈನ್, ನತಾಲಿ ಡೊಡ್, ಮ್ಯಾಡಿ ಗ್ರೀನ್, ಗ್ರೆಗೋರಿಯಾ ಗಯ್, ಲೇ ಕ್ಯಾಸ್ಪೆರ್ಕ್, ಮೋರ್ನಾ ನೀಲ್ಸೆನ್, ಕ್ಯಾಟಿ ಪರ್ಕಿನ್ಸ್, ಆ್ಯನಾ ಪೀಟರ್ಸನ್, ರ್ಯಾಚೆಲ್ ಪ್ರೀಸ್ಟ್,
ಹನ್ನಾ ರೊವಿ, ಆ್ಯಮಿ ಸ್ಟಾಟೆರ್ ವೇಟ್, ಲಿಯಾ ತಹೌವು.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ : ಚಿನ್ನಸ್ವಾಮಿ ಕ್ರೀಡಾಂಗಣ

SCROLL FOR NEXT