ಇಂಡಿಯನ್ ವೇಲ್ಸ್: ಭಾರತದ ಹಿರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ ಇಂಡಿಯನ್ ವೇಲ್ಸ್ (ಬಿಎನ್‍ಪಿ ಪರಿಬಾಸ್) ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಈ ಜೋಡಿ, ರಷ್ಯಾದ ಎಕಟೇರಿನಾ ಮಕರೊವಾ ಹಾಗೂ ಎಲಿನಾ ವೆಸ್ನಿನಾ ಜೋಡಿಯನ್ನು 6-3, 6-4 ನೇರ ಸೆಟ್‍ಗಳಿಂದ ಮಣಿಸಿ ಪ್ರಶಸ್ತಿಗೆ ಭಾಜನವಾಗಿದೆ.
ಪಂದ್ಯಾವಳಿಯ ನಂಬರ್‍ಒನ್ ಶ್ರೇಯಾಂಕಿತ ಜೋಡಿಯೆಂದೇ ಪರಿಗಣಿಸಲ್ಪಟ್ಟಿದ್ದ ಸಾನಿಯಾ-ಹಿಂಗಿಸ್ ಜೋಡಿ ಫೈನಲ್ ಪಂದ್ಯದಲ್ಲಿ ಗೆಲವು ಪಡೆಯಲು ಹೆಚ್ಚು ಕಷ್ಟಪಡಲಿಲ್ಲ. ರಷ್ಯಾ ಜೋಡಿ ವಿರುದ್ಧ ಆರಂಭದಿಂದಲೇ ಹಿಡಿತ ಸಾಧಿಸಿದ ಅವರು, ಮೊದಲ ಸೆಟ್‍ನಲ್ಲಿ 6-4ರ ಅಂತರದಲ್ಲಿ ಜಯ ಸಾಧಿಸಿತು. ಆದರೆ, ಎರಡನೇ ಸೆಟ್‍ನ ಆರಂಭದಲ್ಲಿ ಮಕರೊವಾ-ಎಲಿನಾ ಜೋಡಿ ಕೆಲ ನಿಮಿಷಗಳ ಕಾಲ ಪ್ರಭುತ್ವ ಸಾಧಿಸಿತಾದರೂ ಅದು ಹೆಚ್ಚು ಕಾಲ ಉಳಿಯಲಿಲ್ಲ. ಪ್ರತಿ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಾನಿಯಾ-ಹಿಂಗಿಸ್, ಎರಡನೇ ಸೆಟ್‍ನಲ್ಲೂ ಗೆಲವು ಪಡೆಯುವಲ್ಲಿ ಯಶಸ್ವಿಯಾದರು.
ಇದೇ ಟೆನಿಸ್ ಋತುವಿನ ಆರಂಭದಲ್ಲಿ ತಮ್ಮ ಹಿಂದಿನ ಜೊತೆಗಾತಿ ಚೈನೀಸ್ ತೈಪೇನ ಸು ವೈ- ಸೆಯ್ ಜೊತೆಗೆ ಮೂರು ಪಂದ್ಯಾವಳಿಗಳಲ್ಲಿ ಆಡಿದ್ದ ಸಾನಿಯಾ, ಇದೇ ಮಾಸದ ಆರಂಭದಲ್ಲಿ ಮಾರ್ಟಿನಾ ಹಿಂಗಿಸ್‍ಗೆ ಜೊತೆಯಾಗಿದ್ದರು.